ಸತತ 5ನೇ ವರ್ಷವೂ ವಕ್ಕರಿಸಿದ ಬರ

ಲಕ್ಷ್ಮೇಶ್ವರ: 4 ವರ್ಷಗಳ ಬರದ ಛಾಯೆಗೆ ಮುಕ್ತಿ ದೊರಕಿತು ಎಂದು ಹರ್ಷದಲ್ಲಿದ್ದ ರೈತರಿಗೆ ಸತತ 5ನೇ ವರ್ಷವೂ ಬರದ ಛಾಯೆ ಆವರಿಸಿದೆ. ಮುಂಗಾರಿನ ಮಳೆಗಳನ್ನಾಧರಿಸಿ ಬಿತ್ತಿ ಬೆಳೆದ ರೈತನಿಗೆ ಒಂದೆಡೆ ಭೂಮಿ ಬಿರುಕು ಬಿಡುತ್ತಿದೆ.

ತಾಲೂಕಿನ ರೈತರಿಗೆ ಶೇಂಗಾ ಮತ್ತು ಗೋವಿನಜೋಳ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಕೃಷಿ ಇಲಾಖೆ ಮಾಹಿತಿ ಪ್ರಕಾರ ತಾಲೂಕಿನಲ್ಲಿ 10 ಸಾವಿರ ಹೆಕ್ಟೇರ್ ಗೋವಿನಜೋಳ ಮತ್ತು 15 ಸಾವಿರ ಹೆಕ್ಟೇರ್​ನಲ್ಲಿ ಶೇಂಗಾ ಬಿತ್ತನೆ ಮಾಡಲಾಗಿದೆ. ಕಳೆದ ಒಂದೂವರೆ ತಿಂಗಳಿಂದ ಮಳೆಯಾಗದೇ ಫಸಲು ಕೈಗೆ ಬರುವ ಹಂತದಲ್ಲಿರುವ ಗೋವಿನಜೋಳ, ಶೇಂಗಾ ಸಂಪೂರ್ಣ ಒಣಗಿ ನಿಂತಿದೆ.

ಜುಲೈದಲ್ಲಿ ಶೇ. 50, ಆಗಸ್ಟ್​ನಲ್ಲಿ ಶೇ.30 ಮಳೆ ಕೊರತೆಯುಂಟಾಗಿದ್ದರೆ ಸೆಪ್ಟೆಂಬರ್ 2ನೇ ವಾರದವರೆಗೂ ಹನಿ ಮಳೆಯೂ ಆಗದಿರುವುದು ರೈತರನ್ನು ಕಂಗೆಡಿಸಿದೆ. ಆರಂಭದ ಮುಂಗಾರಿನ ಅಬ್ಬರಕ್ಕೆ ಹಿಗ್ಗಿದ ರೈತರು ಸಾಲಸೂಲ ಮಾಡಿ ಕೃಷಿಹೊಂಡದಿಂದ ನೀರುಣಿಸುವುದು, ಟ್ಯಾಂಕರ್ ಮೂಲಕ ನೀರು ಹಾಕಿಸುವುದು ಸೇರಿ ಏನೆಲ್ಲ ಪ್ರಯತ್ನಪಟ್ಟರೂ ಬೆಳೆಗಳು ಸಂಪೂರ್ಣ ಒಣಗುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ಸ್ಥಿತಿ ನಿರ್ವಣವಾಗಿದೆ.

ಸರ್ಕಾರ ಈಗಾಗಲೇ ಬರಗಾಲ ಪ್ರದೇಶವೆಂದು ಸಾರಿದ್ದರೂ ರೈತರಿಗೆ ಆಗುವ ಲಾಭವೇನು ಎಂಬ ಯಕ್ಷ ಪ್ರಶ್ನೆ ರೈತರನ್ನು ಕಾಡುತ್ತಿದೆ. ಎಕರೆಗೆ ಸಾವಿರಾರು ರೂ.ಗಳನ್ನು ವ್ಯಯಿಸಿ ಬೆಳೆ ಕೈಗೆ ಬರುತ್ತದೆ ಎಂಬ ಆಸೆಯೂ ಕಮರಿದೆ. ಅಲ್ಲದೆ, ಮತ್ತೇ ಸಾಲದ ಸುಳಿಗೆ ಸಿಲುಕಿರುವ ರೈತ ಹೈರಾಣಾಗಿದ್ದಾನೆ.

ಕಳೆದ 4 ವರ್ಷಗಳಿಂದ ರೈತರು ಪಾವತಿಸಿದ ಬೆಳೆ ವಿಮೆಗೆ ಪರಿಹಾರ ಸಿಗದೇ ಹೈರಾಣಾಗಿದ್ದಾರೆ. ಇದರಿಂದ ನಿರಾಸೆಗೊಂಡ ರೈತರು ಮುಂಗಾರಿನಲ್ಲಿ ಬೆಳೆ ವಿಮೆ ಮಾಡಿಸಲು ಆಸಕ್ತಿ ತೋರಲಿಲ್ಲ. ಜತೆಗೆ ಈ ಬಗೆಗೆ ರೈತರಿಗೆ ಮಾಹಿತಿ ಮತ್ತು ಕಾಲಾವಕಾಶದ ಕೊರತೆಯಿಂದ ಬೆಳೆ ವಿಮೆ ಪಾವತಿಸಲು ಪರದಾಡಿದರು. ಆಗಸ್ಟ್ 31ರೊಳಗಾಗಿ ಆನ್​ಲೈನ್ ಮುಖಾಂತರ ಬೆಳೆ ವಿಮೆ ಪಾವತಿಸಲು ಪ್ರಯತ್ನಿಸಿದರಾದರೂ ಇಂಟರ್​ನೆಟ್ ಸಮಸ್ಯೆಯಿಂದಾಗಿ ಬಹುತೇಕ ರೈತರು ಬೆಳೆ ವಿಮೆ ಪಾವತಿಯಿಂದ ವಂಚಿತರಾಗಿದ್ದಾರೆ. ಆದ್ದರಿಂದ ಬರಗಾಲ ಘೊಷಣೆಯ ಹಿನ್ನೆಲೆಯಲ್ಲಿ ಸರ್ಕಾರ ಬೆಳೆ ವಿಮೆ ಬದಲಾಗಿ ಎಲ್ಲ ರೈತರಿಗೆ ಬೆಳೆ ಹಾನಿ ಪರಿಹಾರ ನೀಡಬೇಕು ಎಂಬುದು ಹುಲ್ಲೂರ ಗ್ರಾಮದ ರೈತರಾದ ಹುಲ್ಲೂರಿನ ಶಂಭು ಅಂಗಡಿ, ರಾಮಣ್ಣ ರಗಟಿ, ಮುದಕನಗೌಡ ಪಾಟೀಲ, ಮಲ್ಲಪ್ಪ ಮೀಸಿ, ಇನ್ನಿತರ ರೈತರ ಒಕ್ಕೊರಲಿನ ಬೇಡಿಕೆಯಾಗಿದೆ.