Tuesday, 11th December 2018  

Vijayavani

ಪಂಚರಾಜ್ಯಗಳ ಫಲಿತಾಂಶದಲ್ಲಿ ಕೈ ಆಟ-3 ರಾಜ್ಯಗಳಲ್ಲಿ ಅಧಿಕಾರದತ್ತ ಕಾಂಗ್ರೆಸ್​ - ವರ್ಕೌಟ್​ ಆಗದ ಮೋದಿ - ಅಮಿತ್ ಷಾ ಅಲೆ        ರಾಜಸ್ಥಾನದಲ್ಲಿ ಮ್ಯಾಜಿಕ್ ನಂಬರ್ ಸನಿಹ ಕಾಂಗ್ರೆಸ್-95 ಕ್ಷೇತ್ರದಲ್ಲಿ ಕಾಂಗ್ರೆಸ್, 80 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ        ಮಧ್ಯಪ್ರದೇಶದಲ್ಲಿ ಹಾವು ಏಣಿ ಆಟ - ಕೈ ಕಮಲ ಸಮಬಲದ ಹೋರಾಟ - ಸರ್ಕಾರ ರಚನೆಗೆ ಪಕ್ಷೇತರರೇ ನಿರ್ಣಾಯಕರು        ತೆಲಂಗಾಣದಲ್ಲಿ ನಡೆಯದ ಕೈ-ಕಮಲದ ಆಟ-ಶರವೇಗದಲ್ಲಿ ಮುನ್ನುಗಿದ ಕೆಸಿಆರ್​-ನೂತನ ಸಿಎಂ ಆಗಿ ನಾಳೆ ಪ್ರಮಾಣ ವಚನ        ಛತ್ತೀಸ್​ಗಢದಲ್ಲಿ ಅಧಿಕಾರದತ್ತ ಕಾಂಗ್ರೆಸ್ - ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗ        ಮಿಜೋರಾಂನಲ್ಲಿ ಕಾಂಗ್ರೆಸ್​​​ಗೆ ಭಾರಿ ಮುಖಭಂಗ - ಅಧಿಕಾರದ ಗದ್ದುಗೆ ಹಿಡಿದ ಎಂಎನ್​​​ಎಫ್​ - 25 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ       
Breaking News

ಸತತ ಪ್ರಯತ್ನಗಳಲ್ಲೇ ಗೆಲುವಿನ ಖುಷಿಯಿದೆ…

Thursday, 17.08.2017, 3:01 AM       No Comments

ಜಾಕ್ ಮಾ ಶೂನ್ಯದಿಂದ ಪ್ರಾರಂಭಿಸಿ ಸಾಗಿದ ದಾರಿ, ತಲುಪಿದ ಎತ್ತರ ಎಲ್ಲವೂ ಸ್ಪೂರ್ತಿದಾಯಕ. ಸೋಲುಗಳಿಗೆ ಕಂಗೆಡದೆ, ಅವಮಾನ, ಜನರ ಕೊಂಕುಮಾತುಗಳಿಗೆ ಸ್ಥೈರ್ಯ ಕಳೆದುಕೊಳ್ಳದೆ ಸಣ್ಣ ಹೆಜ್ಜೆಯಿಂದ ಸಾಗಿ ದೊಡ್ಡ ಉದ್ಯಮ ಸಾಮ್ರಾಜ್ಯ ಕಟ್ಟಿದ ಆತ ಬದುಕಿನ ಹಲವು ಪಾಠಗಳನ್ನು ಕಲಿಸುತ್ತಾನೆ.

ಅವನ ಹೆಸರು ಮಾ ಯುನ್. ಚೀನಾದ ಝೆಜಿಯಾಂಗ್ ಪ್ರಾಂತ್ಯದಲ್ಲಿ ಹುಟ್ಟಿದ ಬಡಕುಟುಂಬದ ಹನ್ನೆರಡರ ಪೋರನ ಕನಸು ಇಂಗ್ಲಿಷ್ ಕಲಿಯುವುದು. ತನ್ನೂರಿನ ಹತ್ತಿರದ ನಗರವೊಂದಕ್ಕೆ ಆತ ನಲವತ್ತು ನಿಮಿಷಗಳ ಕಾಲ ಸೈಕಲ್ ತುಳಿದುಕೊಂಡು ಬರುತ್ತಿದ್ದ. ಕಾರಣ ಅಲ್ಲಿಗೆ ಬರುತ್ತಿದ್ದ ಯಾತ್ರಿಗಳಿಗೆ ಮಾರ್ಗದರ್ಶಿಯಾಗಿ ಕೆಲಸ ಮಾಡಲು! ಅಲ್ಲಿ ಅವನಿಗೆ ಹಣವೇನೂ ಸಿಗುತ್ತಿರಲಿಲ್ಲ. ಹೊರಗಡೆಯಿಂದ ಬಂದ ಯಾತ್ರಿಗಳೊಡನೆ ಹರಕá- ಮುರುಕು ಇಂಗ್ಲಿಷ್ ಮಾತನಾಡುತ್ತ ತನ್ನ ಭಾಷಾಜ್ಞಾನವನ್ನು ಸುಧಾರಿಸಿಕೊಳ್ಳಲು ಆತ ಅಲ್ಲಿಗೆ ಧಾವಿಸುತ್ತಿದ್ದ. ಆ ಪ್ರವಾಸಿಗರಲ್ಲಿ ಹಲವರು ಮಾ ಯುನ್ ಎಂಬ ಹೆಸರನ್ನು ಉಚ್ಚರಿಸಲು ಕಷ್ಟವಾಗಿ ಜಾಕ್ ಎಂದು ಕರೆಯಲು ಪ್ರಾರಂಭಿಸಿದರು. ಜಾಕ್ ಮಾ ಎಂಬ ಹೆಸರೇ ಅವನಿಗೆ ಫೈನಲ್ ಆಯಿತು!

ಕಾಲೇಜಿಗೆ ಸೇರಿದ ನಂತರ ನಗರದ ಎಲ್ಲ ಕಾಲೇಜುಗಳ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷನಾಗಿ ಚುನಾಯಿತನಾದ. ಇಂಗ್ಲಿಷ್​ನಲ್ಲಿ ಪದವಿ ಪಡೆದ ನಂತರ ಕಾಲೇಜೊಂದರಲ್ಲಿ ಕೆಲಸ ಸಿಕ್ಕಿತು. ರಾತ್ರಿ ತರಗತಿಗಳನ್ನೂ ತೆಗೆದುಕೊಳ್ಳುತ್ತಿದ್ದ ಜಾಕ್ ಕಾಲೇಜು ವಿದ್ಯಾರ್ಥಿಗಳಿಗೆ ಹೇಗೆ ಇಂಗ್ಲಿಷ್ ಕಲಿಸುತ್ತಿದ್ದನೆಂದರೆ ಬೇರೆ ಯಾರೂ ಹಾಗೆ ಕಲಿಸಲು ಸಾಧ್ಯವಿಲ್ಲ ಎನ್ನುವ ಮಾತು ಜನಜನಿತವಾಗಿ ಹೋಗಿತ್ತು. ಆದರೆ ಅದೇನೂ ಶಾಶ್ವತವಾದ ಕೆಲಸವಾಗಿರಲಿಲ್ಲ. ಹಾಗಾಗಿ ಜಾಕ್ ಮುವತ್ತಕ್ಕೂ ಹೆಚ್ಚು ಕಂಪನಿಗಳಿಗೆ ಕೆಲಸಕ್ಕಾಗಿ ಅರ್ಜಿ ಹಾಕಿದ್ದ. ಕೆಎಫ್​ಸಿ ಚೀನಾಗೆ ಬಂದಾಗ ಅರ್ಜಿ ಸಲ್ಲಿಸಿದ್ದ 24 ಜನರಲ್ಲಿ 23 ಜನರಿಗೆ ಕೆಲಸ ಸಿಕ್ಕಿತ್ತು! ಹ್ಯಾಪು ಮೋರೆ ಹಾಕಿಕೊಂಡು ಸಂದರ್ಶನದಿಂದ ವಾಪಾಸಾದ ಏಕೈಕ ವ್ಯಕ್ತಿ ಜಾಕ್ ಆಗಿದ್ದ!

ಆಗ ಚೀನಾದಲ್ಲಿ ಭಾಷಾಂತರಕ್ಕೆ ಬಹು ಬೇಡಿಕೆಯಿತ್ತು. ಸಣ್ಣ ಪ್ರಮಾಣದಲ್ಲಿ ಜಾಕ್ ಈ ಕೆಲಸ ಶುರುಮಾಡಿದ. ಆರಂಭದಲ್ಲಿ ನಷ್ಟವೂ ಆಯಿತು. ನಷ್ಟ ಸರಿದೂಗಿಸಲು ಜಾಕ್ ರಸ್ತೆಯ ಮೇಲೆ ಪುಸ್ತಕ, ಹೂವು, ಬಟ್ಟೆ ಎಲ್ಲವನ್ನೂ ಮಾರಾಟ ಮಾಡಿದ. ಅಂದಹಾಗೆ ಇವನ್ನೆಲ್ಲ ಅವನು ಕಾಲೇಜಿನಲ್ಲಿ ಪಾಠ ಮಾಡುತ್ತಲೇ ಮಾಡುತ್ತಿದ್ದ! ಆತನಲ್ಲಿ ಒಬ್ಬ ಉದ್ದಿಮೆದಾರನ ಮನಸ್ಥಿತಿ ಯಾವಾಗಲೂ ಇತ್ತು ಎನ್ನುವುದಕ್ಕೆ ಇದು ಸಾಕ್ಷಿ.

ನಿಧಾನಕ್ಕೆ ಕಂಪನಿ ಲಾಭಗಳಿಸುತ್ತ ಬಂತು. ಜಾಕ್​ನ ಇಂಗ್ಲಿಷ್ ಪ್ರೌಢಿಮೆ ಆ ವೇಳೆಗಾಗಲೇ ಸರ್ಕಾರದ ಗಮನಕ್ಕೂ ಬಂದಿತ್ತು! 1995ರಲ್ಲಿ ಅಮೆರಿಕದ ಹೂಡಿಕೆದಾರನೊಬ್ಬನಿಗೆ ಭಾಷಾಂತರಕಾರನಾಗಿ ಜಾಕ್ ಅಮೆರಿಕಕ್ಕೆ ಕಳುಹಿಸಲ್ಪಟ್ಟ. ಇಂಟರ್​ನೆಟ್​ನಲ್ಲಿ ಶಬ್ದವೊಂದನ್ನು ಹುಡುಕುವಾಗ ಚೀನಾಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ಇಲ್ಲದಿರುವುದು ಆತನ ಗಮನಕ್ಕೆ ಬಂತು. ಜಾಕ್​ಗೆ ಆ ಕ್ಷಣವೇ ತನ್ನ ಮುಂದಿನ ಹಾದಿ ಗೋಚರಿಸಿತು!

ಜಾಕ್ ಇಂಗ್ಲಿಷ್​ನಲ್ಲಿ ಪರಿಣಿತನೇ ಹೊರತು ಕಂಪ್ಯೂಟರ್​ನಲ್ಲಲ್ಲ! ಆದರೆ ಈ ಕ್ಷೇತ್ರಕ್ಕೆ ಭವ್ಯ ಭವಿಷ್ಯವಿದೆಯೆಂದು ಆತನ ಮನಸ್ಸು ಹೇಳುತ್ತಿತ್ತು. ಒಂದು ದಿನ ತನ್ನ ಸ್ನೇಹಿತನ ಜತೆ ಸೇರಿ ಚೀನಾಕ್ಕೆ ಸಂಬಂಧಿಸಿದ ವೆಬ್​ಸೈಟ್ ಒಂದನ್ನು ಆತ ಬೆಳಗ್ಗೆ ಒಂಭತ್ತೂವರೆಗೆ ಪ್ರಾರಂಭಿಸಿದ, ಮಧ್ಯಾಹ್ನ ಹನ್ನೆರಡೂವರೆಗಾಗಲೇ ಚೀನಾದ ವ್ಯಕ್ತಿಯೊಬ್ಬ ಅದರ ಬಗ್ಗೆ ಮಾಹಿತಿ ಕೇಳಿದ್ದ. ಆಗ ಜಾಕ್​ಗೆ ಅಂತರ್ಜಾಲದ ಅಪಾರ ಸಾಮರ್ಥ್ಯ ಬಗ್ಗೆ ನಂಬಿಕೆ ಮತ್ತಷ್ಟು ಹೆಚ್ಚಾಯಿತು. 2000 ಡಾಲರ್​ಗಳನ್ನು ಕಡ ಪಡೆದು ‘ಚೈನಾ ಯೆಲ್ಲೋ ಪೇಜಸ್’ ಪ್ರಾರಂಭಿಸಿದ. ವೆಬ್​ಪೇಜ್​ಗಳನ್ನು ಕೊಳ್ಳುವವರನ್ನು ಹುಡುಕಲು ಇನ್ನಿಲ್ಲದ ಶ್ರಮಪಟ್ಟ. ಚೀನಾದಲ್ಲಿ ಅಗ ಅಂತರ್ಜಾಲಕ್ಕೆ ನೇರ ಅಕ್ಸೆಸ್ ಇಲ್ಲದ್ದರಿಂದ ಪ್ರತಿಯೊಂದನ್ನೂ ಜಾಕ್ ಸ್ವತಃ ಭಾಷಾಂತರಿಸುತ್ತಿದ್ದ. ಚಿತ್ರಗಳು ಮಾಹಿತಿ ಎಲ್ಲವನ್ನೂ ಅಂತರ್ಜಾಲಕ್ಕೆ ಯೋಗ್ಯವಾಗುವ ಹಾಗೆ ಅಭಿವೃದ್ಧಿ ಪಡಿಸಲು ಅಮೆರಿಕದ ಸಿಯಾಟಲ್​ಗೆ ಕಳುಹಿಸಬೇಕಾಗುತ್ತಿತ್ತು. 3 ವರ್ಷದಲ್ಲಿ ಕಂಪನಿ ಸುಮಾರು 8 ಲಕ್ಷ ಡಾಲರ್ ಗಳಿಸಿತು.

ಅಷ್ಟು ಹೊತ್ತಿಗಾಗಲೇ ಅಮೆರಿಕದಲ್ಲಿ ವಿದ್ಯಾಭ್ಯಾಸ ಪಡೆದು ಮರಳಿದ ಹಲವು ಯುವ ಉದ್ಯಮಿಗಳು ಅಂತರ್ಜಾಲದ ಈ ವ್ಯವಹಾರದಲ್ಲಿ ಜಾಕ್​ಗೆ ಸ್ಪರ್ಧೆಯೊಡ್ಡತೊಡಗಿದರು. ಬೇರೆ ಬೇರೆ ಕಂಪನಿಗಳು ಜಾಕ್ ಜತೆ ಕೈಜೋಡಿಸಲು ಬಂದರೂ ಆತನಿಗೆ ತನ್ನದೇ ಆದ ಇ-ಕಾಮರ್ಸ್ ಕಂಪನಿಯೊಂದನ್ನು ಸ್ಥಾಪಿಸುವ ಹೆಬ್ಬಯಕೆಯಿತ್ತು. ತನ್ನ ಗುಂಪಿನ ಸದಸ್ಯರನ್ನೆಲ್ಲ ಕರೆದು ಒಂದು ಹೃದಯರ್ಸ³ ಭಾಷಣ ಮಾಡಿದ. ‘‘ಸ್ನೇಹಿತರೇ, ನಿಮ್ಮೆದುರು ಎರಡು ಆಯ್ಕೆಗಳಿವೆ. ಮೊದಲನೆಯದು ನೀವು ಯಾಹೂ ಕಂಪನಿ ಜತೆ ಕೆಲಸ ಮಾಡಬಹುದು. ಆ ಕಂಪನಿ ನಿಮ್ಮನ್ನು ಹಾರ್ದಿಕವಾಗಿ ಸ್ವಾಗತಿಸುತ್ತದೆ ಮತ್ತು ಒಳ್ಳೆಯ ಸಂಬಳವನ್ನು ಸಹ ನೀಡುತ್ತದೆ. ಎರಡನೆಯದು ಸಿನಾ ಅಥವಾ ಸೋಹು ಕಂಪನಿಯನ್ನೂ ಸೇರಬಹುದು. ಅವರೂ ನಿಮಗೆ ಸಾಧಾರಣ ಸಂಬಳವನ್ನು ಕೊಡಬಹುದು. ಮೂರನೆಯದು, ನೀವು ನನ್ನ ಜತೆ ಮನೆಗೆ ತೆರಳುವುದು! ನಾನು ನಿಮಗೆ ತಿಂಗಳಿಗೆ 95 ಡಾಲರ್ ಮಾತ್ರ ಕೊಡಬಲ್ಲೆ. ನೀವು ನಿಮ್ಮ ಸ್ವಂತ ಮನೆಗಳನ್ನೆಲ್ಲ ಬಾಡಿಗೆಗೆ ಕೊಡಬೇಕಾಗುತ್ತದೆ!’

ಅದುವರೆಗೂ ಸುಮ್ಮನೇ ಕೇಳುತ್ತಿದವರ ಕಣ್ಣುಗಳಲ್ಲಿ ಅಚ್ಚರಿಯನ್ನು ಕಂಡು ಜಾಕ್ ಮುಗುಳ್ನಗುತ್ತ ಹೇಳಿದ, ‘ಏಕೆಂದರೆ ಇನ್ನು ಮೇಲೆ ನೀವು ನನ್ನ ಮನೆಯಿಂದ ಐದು ಕಿಲೋಮೀಟರ್ ಸುತ್ತಳತೆಯಲ್ಲಿಯೇ ಮನೆ ಮಾಡಿ ವಾಸಿಸಬೇಕಾಗುತ್ತದೆ. ನಿಮಗೆ ಓಡಾಡಲು ಟ್ಯಾಕ್ಸಿಗೆ ಹಣ ನೀಡಲು ನನ್ನಿಂದ ಸಾಧ್ಯವಿಲ್ಲ! ಹಾಗಾಗಿ ನನ್ನ ಮನೆಯಲ್ಲಿಯೇ ನೀವು ಕೆಲಸ ಮಾಡಬೇಕಾಗುತ್ತದೆ. ನೀವು ಯಾವ ತೀರ್ಮಾನ ಮಾಡಿದರೂ ಅದಕ್ಕೆ ಸ್ವಾಗತ’. ತೀರ್ವನಿಸಲು ಜಾಕ್ ಮೂರು ದಿನಗಳ ಸಮಯ ನೀಡಿದ. ಎದ್ದು ಹೊರನಡೆದ ಎಲ್ಲರೂ ಮೂರೇ ನಿಮಿಷದ ಒಳಗೆ ವಾಪಸಾದರು. ಅವರೆಲ್ಲರೂ ಜಾಕ್ ಜತೆ ಕೆಲಸ ಮಾಡಲು ತೀರ್ವನಿಸಿದ್ದರು.

ಸಂಗಾತಿಗಳೆಲ್ಲ ತನ್ನ ಮೇಲಿಟ್ಟ ವಿಶ್ವಾಸ ಮತ್ತೂ ಉತ್ಸಾಹದಿಂದ ಮುನ್ನುಗ್ಗಲು ಜಾಕ್​ಗೆ ಬಲ ನೀಡಿತು. ಅವರ 18 ಜನರ ಟೀಮ್ ತಮ್ಮ ಉಳಿತಾಯದ 60,000 ಡಾಲರ್​ಗಳನ್ನು ಕೂಡಿಸಿತು. ಆ ನಂತರ ಜಾಕ್ ಇನ್ನೊಂದು ಭಾಷಣ ಮಾಡಿದ. ‘ನಾವೊಂದು ಐತಿಹಾಸಿಕ ಇ-ಕಾಮರ್ಸ್ ಕಂಪನಿಯನ್ನು ಸ್ಥಾಪಿಸಲಿದ್ದೇವೆ. ಕನಿಷ್ಠ 100 ವರ್ಷಗಳ ಕಾಲ ಅದು ಬಾಳಬೇಕು. ಚೀನಾದ ಸಣ್ಣ ಮತ್ತು ಮಧ್ಯಮ ಕಂಪನಿಗಳಿಗೆ ಸೇವೆ ಒದಗಿಸಬೇಕು. ಮತ್ತು ನಮ್ಮ ಕಂಪನಿ ವಿಶ್ವದ ಅಂತರ್ಜಾಲ ಸೈಟ್​ಗಳಲ್ಲಿ ಮೊದಲ ಹತ್ತರೊಳಗಿರಬೇಕು’. ಅಲಿಬಾಬಾ ಡಾಟ್ ಕಾಮ್ ಜನ್ಮ ತಾಳಿದ್ದು ಹೀಗೆ.

ಜಾಕ್ ಈ ಹೆಸರನ್ನು ಕಂಪನಿಗೆ ಇಟ್ಟ ಉದ್ದೇಶವೆಂದರೆ ಅರೇಬಿಯನ್ ನೈಟ್ಸ್​ನಲ್ಲಿ ಬರುವ ಅಲಿಬಾಬನ ಹೆಸರು ಜಗತ್ತಿನ ಜನರೆಲ್ಲರಿಗೂ ತೀರಾ ಪರಿಚಿತ ಎನ್ನುವುದು! ವಿವಿಧ ದೇಶಗಳ 30 ಜನರನ್ನು ನಿಮಗೆ ಅಲಿಬಾಬಾ ಗೊತ್ತೇ ಎಂದು ಕೇಳಿದಾಗ ಎಲ್ಲರೂ ಗೊತ್ತಿದೆ ಎಂದೇ ಹೇಳಿದ್ದರಂತೆ. ಬಾಗಿಲು ತೆರೆ ಸೀಸೇಮ್ ಎಂಬುದೂ ಎಲ್ಲರಿಗೂ ಗೊತ್ತಿತ್ತು! ಅಲಿಬಾಬಾ, ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳಿಗೆ ಹೊಸ ಹೊಸ ವ್ಯವಹಾರದ ಬಾಗಿಲನ್ನು ತೆರೆದೇ ಬಿಟ್ಟಿತು.

ಜಾಕ್ ಮತ್ತವನ ಸಂಗಾತಿಗಳು ಕಂಪನಿಗಾಗಿ ಹಗಲಿರುಳು ದುಡಿದರು. 1999ರಲ್ಲಿ ಅಲಿಬಾಬಾ ಲಾಂಚ್ ಆಯಿತು. ವ್ಯವಹಾರವನ್ನು ಸರಳೀಕೃತಗೊಳಿಸುವುದು ಮತ್ತು ಎಲ್ಲಿಂದಲಾದರೂ ಅದು ಸಾಧ್ಯವಾಗುವಂತೆ ಮಾಡುವುದು ಅಲಿಬಾಬಾದ ಉದ್ದೇಶ ಮಾತ್ರವಲ್ಲ, ಸ್ಲೋಗನ್ ಕೂಡ ಹೌದು. ಆರಂಭದಲ್ಲಿ ಆದಾಯ ಕಡಿಮೆ ಇದ್ದರೂ ಸುದ್ದಿಯೊಂದರಿಂದ ಅಲಿಬಾಬಾ ಅಂತಾರಾಷ್ಟ್ರೀಯ ಮಾಧ್ಯಮಗಳ ಗಮನ ಸೆಳೆಯಿತು. ಮಾರಾಟಗಾರನೊಬ್ಬ ಅಲಿಬಾಬಾ ಮೂಲಕ ಎಕೆ 47 ಅನ್ನು ಮಾರಾಟ ಮಾಡಲು ಹೊರಟಿದ್ದ! ಮೊದಲು ಇದು ನೆಗೆಟಿವ್ ಪ್ರಚಾರ ಎನ್ನಿಸಿದರೂ ಹಲವಾರು ಹೂಡಿಕೆದಾರರನ್ನು ಆಕರ್ಷಿಸಿತು! 2000ದ ಹೊತ್ತಿಗೆ ಅಲಿಬಾಬಾದಲ್ಲಿ 25 ಮಿಲಿಯನ್​ಗಿಂತ ಹೆಚ್ಚು ಹೂಡಿಕೆಯಾಗಿತ್ತು. ಅಲ್ಲಿಂದ ಮುಂದೆ ಜಾಕ್ ಮತ್ತು ಸ್ನೇಹಿತರು ಹಿಂದಿರುಗಿ ನೋಡಲೇ ಇಲ್ಲ. 2016ರ ಏಪ್ರಿಲ್​ನಲ್ಲಿ ಅಲಿಬಾಬಾ, ವಾಲ್​ವಾರ್ಟ್ ಅನ್ನೂ ಹಿಂದಿಕ್ಕಿ 200ಕ್ಕೂ ಅಧಿಕ ದೇಶಗಳಲ್ಲಿ ಕಾರ್ಯನಿರ್ವಹಿಸುವ ಜಗತ್ತಿನ ಅತೀ ದೊಡ್ಡ ರೀಟೇಲರ್ ಕಂಪನಿಯಾಗಿದೆ. ಅಲಿಬಾಬಾದ ಮಾರಾಟ ಅಮೆಜಾನ್ ಮತ್ತು ಇಬೇ ಕಂಪನಿಗಳ ಒಟ್ಟೂ ಮಾರಾಟಕ್ಕಿಂತ ಜಾಸ್ತಿ! ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರಕ್ಕೂ ಅಲಿಬಾಬಾ ಕಾಲಿಟ್ಟಿದೆ. ಮೊನ್ನೆ ಜೂನ್ 8, 2017ರಂದು ಅಲಿಬಾಬಾದ ಮಾರುಕಟ್ಟೆ ಮೌಲ್ಯ 360 ಬಿಲಿಯನ್ ಅಮೆರಿಕನ್ ಡಾಲರ್​ಗಳು!

ಜಾಕ್ ಈಗ ಏಷ್ಯಾದ ಅತೀ ದೊಡ್ಡ ಶ್ರೀಮಂತ. ಜಗತ್ತಿನ ಹದಿನಾಲ್ಕನೇ ಶ್ರೀಮಂತ! ಆತ ದಾನಿಯೂ ಹೌದು. ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನನೂ ಹೌದು. ಸೊನ್ನೆಯಿಂದ ಪ್ರಾರಂಭಿಸಿ ಜಾಕ್ ಏರಿದ ಎತ್ತರ, ಆ ಪಯಣದ ಕಥೆ ಸ್ಪೂರ್ತಿಯ ಸೆಲೆಯೂ ಹೌದು.

9 ವರ್ಷಗಳ ಕಾಲ ಆತ ಇಂಗ್ಲಿಷ್ ಕಲಿಯಲೆಂದೇ ಗೈಡ್ ಆಗಿ ಆದಾಯವೂ ಇಲ್ಲದೇ ಕೆಲಸ ಮಾಡಿದ್ದು ಆತನ ಸಮರ್ಪಣಾ ಮನೋಭಾವಕ್ಕೆ ಸಾಕ್ಷಿ. ತಿಂಗಳೊಪ್ಪತ್ತು ಸ್ಪೋಕನ್ ಇಂಗ್ಲಿಷೋ ಕಂಪ್ಯೂಟರೋ ಮತ್ತೊಂದೋ ಕ್ಲಾಸುಗಳಿಗೆ ಹೋಗಿ ಬೇಸತ್ತು ಎಲ್ಲವೂ ಕಷ್ಟ ಎಂದು ಕೈಬಿಡುವ ನಾವು ಜಾಕ್​ನ ಜೀವನದ ಇದೊಂದು ಸಂಗತಿಯಿಂದಲೇ ಕಲಿಯುವುದು ಬೆಟ್ಟದಷ್ಟಿದೆ. 33ನೇ ವಯಸ್ಸಿನಲ್ಲಿ ಕಂಪ್ಯೂಟರ್ ಅನ್ನು ಮೊದಲ ಬಾರಿ ಉಪಯೋಗಿಸಿದ ವ್ಯಕ್ತಿಯೊಬ್ಬ ಅದನ್ನೇ ಬಂಡವಾಳವಾಗಿಟ್ಟುಕೊಂಡು ಯಶಸ್ಸಿನ ಏಣಿಯನ್ನು ಏರಿದ ಪರಿ ನಿಜಕ್ಕೂ ಅಚ್ಚರಿ. ಸತತ ಪ್ರಯತ್ನಕ್ಕೆ ಸಾಧಿಸಲಾಗದ್ದು ಯಾವುದೂ ಇಲ್ಲ. ಅಲಿಬಾಬಾ ಸಂಸ್ಥಾಪಕನ ಈ ವಿಜಯಗಾಥೆ ಅದಕ್ಕೊಂದು ಸಮರ್ಪಕ ಉದಾಹರಣೆ.

(ಲೇಖಕರು ಉಪನ್ಯಾಸಕಿ, ಕವಯಿತ್ರಿ)

Leave a Reply

Your email address will not be published. Required fields are marked *

Back To Top