ಸಣ್ಣ ನಿವೇಶನ ರಚನೆಗೆ ಆಗ್ರಹ

ಹುಬ್ಬಳ್ಳಿ: ಇಲ್ಲಿಯ ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ)ಯು ಅಭಿವೃದ್ಧಿಪಡಿಸಿರುವ ನಿವೇಶನಗಳು ದೊಡ್ಡವಾಗಿದ್ದು, ಅವುಗಳನ್ನು ಸಣ್ಣ ನಿವೇಶನಗಳನ್ನಾಗಿ ಮಾಡಿ ಹೆಚ್ಚು ಉದ್ಯಮಾಸಕ್ತರಿಗೆ ಅನುಕೂಲ ಮಾಡಿಕೊಡಬೇಕೆಂಬ ಒತ್ತಾಯ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಗಾಮನಗಟ್ಟಿಯಲ್ಲಿ ನೂರಾರು ಎಕರೆ ಜಮೀನು ಸ್ವಾಧೀನ ಪಡಿಸಿಕೊಂಡಿರುವ ಕೆಐಎಡಿಬಿ ಅಲ್ಲಿ ಕೈಗಾರಿಕಾ ವಸಾಹತು ನಿರ್ಮಾಣ ಮಾಡಿದೆ. ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿದೆ. ಆದರೆ, ದೊಡ್ಡ ದೊಡ್ಡ ನಿವೇಶನಗಳನ್ನು ಮಾಡಿ ಕೆಲವೇ ಜನರಿಗೆ ಹಂಚಿಕೆ ಮಾಡಲು ಅಧಿಕಾರಿಗಳು ಮುಂದಾಗಿರುವುದು ಆಕ್ಷೇಪಕ್ಕೆ ಕಾರಣವಾಗಿದೆ

ಗಾಮನಗಟ್ಟಿಯಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಯಾಗುತ್ತಿದ್ದಂತೆ ಸಾವಿರಾರು ಉದ್ಯಮಾಸಕ್ತರು ತಮಗೆ ನಿವೇಶನ ಲಭ್ಯವಾಗಲಿದೆ ಎಂದು ನಂಬಿ ಉದ್ಯಮ ಆರಂಭಿಸಿ ಉದ್ಯೋಗ ಸೃಷ್ಟಿಸುವ ಕನಸು ಕಂಡಿದ್ದಾರೆ. ಆದರೆ, ಕೆಐಎಡಿಬಿ ದೊಡ್ಡ ಗಾತ್ರದ ಕೆಲವೇ ನಿವೇಶನಗಳ ನೀಲನಕ್ಷೆ ತಯಾರಿಸಿ ಹಂಚಿಕೆ ಮಾಡಲು ಸಿದ್ಧತೆ ನಡೆಸಿದೆ ಎಂದು ಅನೇಕರು ದೂರಿದ್ದಾರೆ.

ಉತ್ತರ ಕರ್ನಾಟಕ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ವರ್ಗಗಳ ಕಲ್ಯಾಣ ಸಂಸ್ಥೆ ಈ ಬಗ್ಗೆ ಹಲವು ಬಾರಿ ಮಂಡಳಿಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ನೀಲನಕ್ಷೆ ಬದಲಾಯಿಸಿ ಹೊಸದಾಗಿ ಸಣ್ಣ ನಿವೇಶನ ಸಿದ್ಧಪಡಿಸಿ ಹಂಚಿಕೆ ಮಾಡುವಂತೆ ಒತ್ತಾಯಿಸುತ್ತ ಬಂದಿದೆ. ಅಲ್ಲದೆ. 2017ರಲ್ಲಿ ಅಂದಿನ ಕೈಗಾರಿಕೆ ಸಚಿವ, ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ಆಗ್ರಹಿಸಿದೆ. ಅಂದಿನ ಕೈಗಾರಿಕೆ ಸಚಿವ ಆರ್.ವಿ. ದೇಶಪಾಂಡೆ ಅವರು, ನಿವೇಶನ ಹಂಚಿಕೆ ತಡೆ ಹಿಡಿದು ಹೊಸದಾಗಿ ಅರ್ಜಿಗಳನ್ನು ಆನ್​ಲೈನ್ ಮೂಲಕ ಕರೆದು ಪಾರದರ್ಶಕವಾಗಿ ನಿವೇಶನ ಹಂಚಿಕೆ ಮಾಡುವಂತೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ಕೆಐಎಡಿಬಿಯ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಈವರೆಗೆ ಹೊಸ ನೀಲನಕ್ಷೆ ಸಿದ್ಧಪಡಿಸಿ ಸಣ್ಣ ನಿವೇಶನ ಮಾಡುವ ಪ್ರಕ್ರಿಯೆ ನಡೆದಿಲ್ಲ. ಈ ಬಗ್ಗೆ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ಹೆಚ್ಚಿನ ಜನರಿಗೆ ಉದ್ಯೋಗ ಕಲ್ಪಿಸಲು ಸಣ್ಣ ನಿವೇಶನ ಮಾಡಬೇಕೆಂದು ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಬಶೀರ್ ಅಹ್ಮದ ಸವಣೂರ ಒತ್ತಾಯಿಸಿದ್ದಾರೆ

ಸ್ವತಃ ಕೆಐಎಡಿಬಿ ಅಧಿಕಾರಿಗಳು ಸಣ್ಣ ನಿವೇಶನ ಮಾಡುವ ಬಗ್ಗೆ 2017ರ ಜೂನ್​ನಲ್ಲಿ ಬೆಂಗಳೂರಿನ ಅಭಿವೃದ್ಧಿ ಅಧಿಕಾರಿಗಳು, ಮುಖ್ಯ ಇಂಜಿನಿಯರ್​ಗೆ ಪ್ರಸ್ತಾವನೆ ಕಳಿಸಿದ್ದಾರೆ. ಅದರಲ್ಲಿ 10 ಗುಂಟೆಯ ಸಣ್ಣ ನಿವೇಶನ ರಚಿಸಿ ಸಂಪೂರ್ಣ ನಕಾಶೆ ತಿದ್ದುಪಡಿ ಮಾಡುವ ಬಗ್ಗೆ ವಿವರಿಸಿದ್ದಾರೆ ಎಂದೂ ಸವಣೂರ ತಿಳಿಸಿದ್ದಾರೆ. ಈ ಎಲ್ಲ ಹಿನ್ನೆಲೆಯಲ್ಲಿ ಕೆಐಎಡಿಬಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು, ಜಿಲ್ಲಾ ಉಸ್ತುವಾರಿ ಸಚಿವರು ಗಮನ ಹರಿಸಬೇಕು ಎಂದು ಬಶೀರ ಆಗ್ರಹಿಸಿದ್ದಾರೆ.