Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ಸಣ್ಣತನಗಳನ್ನು ಬಿಡೋಣ…

Friday, 13.07.2018, 3:03 AM       No Comments

|ಕವಿತಾ ಅಡೂರು ಪುತ್ತೂರು

 

ಪೆರತೊಂದು ಬಾಳ ನೀನಾಳ್ವ ಸಾಹಸವೇಕೆ? |

ಹೊರೆ ಸಾಲದೇ ನಿನಗೆ, ಪೆರರ್ಗೆ ಹೊಣೆವೋಗೆ? ||

ಮರದಿ ನನೆ ನೈಜದಿಂದರಳೆ ಸೊಗವೆಲ್ಲರ್ಗೆ |

ಸೆರೆಮನೆಯ ಸೇಮವೇಂ? – ಮಂಕುತಿಮ್ಮ || 845 ||

ಸಾಮಾನ್ಯವಾಗಿ ನಾವೆಲ್ಲ ಮಾಡುವ ಪರೋಪಕಾರವೆಂದರೆ ಬಿಟ್ಟಿ ಸಲಹೆ ನೀಡುವುದು. ಇತರರ ಸಮಸ್ಯೆಗಳನ್ನು ಒತ್ತಾಯಿಸಿ ಕೇಳಿ ತಿಳಿದು ಅದಕ್ಕೆ ಪರಿಹಾರ ಸೂಚಿಸುವುದು. ಈ ರೀತಿ ಇತರರ ಸಂಕಟಗಳನ್ನು ತೊಡೆಯಲು ಹೊರಟ ನಾವು ಎಷ್ಟು ಸ್ಥಿರವಾಗಿದ್ದೇವೆ ಎಂದು ಯೋಚಿಸಿದ್ದೇವೆಯೆ? ಎಲ್ಲರಿಗೂ ಅವರವರ ಬದುಕಿನ ಸವಾಲುಗಳು ಇದ್ದೇ ಇವೆ. ಸಮಸ್ಯೆ-ಸವಾಲುಗಳಿರುವುದರಿಂದಲೇ ಜೀವನ ಕ್ರಿಯಾಶೀಲ. ಹೂವಿನೊಳಗಿನ ಸುಗಂಧದಂತೆ, ಹಾಲಿನೊಳಗಿನ ತುಪ್ಪದಂತೆ ನಮ್ಮೆಲ್ಲರೊಳಗೂ ಆತ್ಮಬಲವಿದೆ. ನಮ್ಮನಮ್ಮ ಬದುಕಿನ ಸಮಸ್ಯೆಗಳನ್ನು ನಾವೇ ಪರಿಹರಿಸಿಕೊಳ್ಳಬಲ್ಲೆವು. ಹಾಗಾಗಿ ಇತರರಿಗೆ ಪರಿಹಾರ ಹೇಳುವ ಹೆಚ್ಚುಗಾರಿಕೆಯಾಗಲಿ, ಇತರರಿಂದ ಹೇಳಿಸಿಕೊಳ್ಳುವ ದುಃಸ್ಥಿತಿಯಾಗಲೀ ನಮ್ಮದಾಗಬಾರದು.

ವಿಜ್ಞಾನ ತರಗತಿಯಲ್ಲಿ ಒಬ್ಬ ಶಿಕ್ಷಕರು ರೇಷ್ಮೆಹುಳುವಿನ ಗೂಡೊಂದನ್ನು ತಂದು, ಚಿಟ್ಟೆಯ ಜೀವನಕ್ರಮದ ಬಗ್ಗೆ ವಿವರಿಸುತ್ತಿದ್ದರು. ಗೂಡಿನಿಂದ ಚಿಟ್ಟೆ ಹೊರಬರುವುದನ್ನು ಕಣ್ಣಾರೆ ನೋಡಿ ಎಂದು, ಕೆಲವು ಕ್ಷಣಗಳ ಕಾಲ ತರಗತಿಯಿಂದ ಆಚೆ ನಡೆದಿದ್ದರು. ವಿದ್ಯಾರ್ಥಿಗಳು ಆಸಕ್ತಿಯಿಂದ ಆ ಗೂಡನ್ನೇ ವೀಕ್ಷಿಸುತ್ತಿದ್ದರು. ಇದ್ದಕ್ಕಿದ್ದಂತೆ ಗೂಡಿನಲ್ಲಿ ಸಂಚಲನ ಉಂಟಾಯಿತು. ಒಳಗಿದ್ದ ಜೀವ ಹೊರಬರಲು ಚಡಪಡಿಸುತ್ತಿರುವಂತೆ ಮಕ್ಕಳಿಗೆ ಭಾಸವಾಯಿತು. ಆ ವಿದ್ಯಾರ್ಥಿಗಳಲ್ಲಿ ಕೆಲವರಂತೂ ಕರುಣೆಯ ವಶರಾಗಿ ತಾವೇ ಕತ್ತರಿಯಿಂದ ಗೂಡನ್ನು ಕತ್ತರಿಸಿ, ಬಿಡಿಸಿದರು. ಸರಿಯಾಗಿ ಬೆಳವಣಿಗೆ ಆಗಿರದ ಪತಂಗ ಆ ಗೂಡಿನಿಂದ ಈಚೆ ಬಂತು. ವಿಲಿವಿಲಿ ಒದ್ದಾಡಿ ಸತ್ತುಹೋಯಿತು. ಶಿಕ್ಷಕರು ಬಂದು ನೋಡಿದಾಗ ಮಕ್ಕಳೆಲ್ಲ ಸಪ್ಪೆ ಮುಖ ಹಾಕಿಕೊಂಡಿದ್ದರು. ವಿಚಾರವನ್ನರಿತ ಶಿಕ್ಷಕರು ಮಕ್ಕಳ ಬುದ್ಧಿಗೇಡಿತನಕ್ಕೆ ಮರುಗಿದರು. ರೇಷ್ಮೆಹುಳುವಿಗೆ ಸಹಜವಾಗಿಯೇ ವಿಕಸನಗೊಳ್ಳಲು ಬಿಡುತ್ತಿದ್ದರೆ, ಸುಂದರ ಪತಂಗ ಹೊರಬರುತ್ತಿತ್ತು. ಅದಕ್ಕೆ ಗೂಡಿನಿಂದ ಹೊರಬರಲು ಹೋರಾಟ, ಒದ್ದಾಟ ಬೇಕಿತ್ತು. ಒತ್ತಾಯದಿಂದಲೋ ಕರುಣೆಯಿಂದಲೋ ರೇಷ್ಮೆಹುಳುವಿನ ಬದುಕಿನಲ್ಲಿ ಹಸ್ತಕ್ಷೇಪ ಮಾಡುವುದರಿಂದ ಅನಾಹುತವೇ ಹೆಚ್ಚು.

ಮರದ ಚಿಗುರುಗಳೆಡೆಯಲ್ಲಿ ಮುತ್ತಿನಂತೆ ಕಂಗೊಳಿಸುವ ಮುಗುಳನ್ನು ಬಲಪೂರ್ವಕವಾಗಿ ಅರಳಿಸಲು ಹೊರಟರೆ ಆ ಹೂವಿನ ಸುಗಂಧವಾಗಲಿ, ಚೆಲುವಿಕೆಯಾಗಲಿ ಜನರನ್ನು ತಲುಪಲು ಸಾಧ್ಯವಿಲ್ಲ. ಕೆಲವು ಮನೆಗಳಲ್ಲಿ, ಸಂಸ್ಥೆಗಳಲ್ಲಿ ಶಿಸ್ತಿನ ಹೆಸರಿನಲ್ಲಿ ಹಲವು ನಿಯಮಗಳನ್ನು ಹೇರಲಾಗುತ್ತದೆ. ಅನಿವಾರ್ಯವಾಗಿ ಆ ಕ್ರಮಗಳನ್ನು ಪಾಲಿಸುವ ಜನತೆ, ಅವಕಾಶ ಸಿಕ್ಕಿದಾಗ ನಿಯಮದ ಉಲ್ಲಂಘನೆಯನ್ನೂ ಮಾಡುವುದಿದೆ. ಮಕ್ಕಳನ್ನೂ ಹೀಗೆಯೇ ಬೆಳೆಸಲಾಗುತ್ತದೆ. ಸಾಕಾರಗೊಳ್ಳದ ನಮ್ಮ ಸ್ವಪ್ನಗಳನ್ನು ಮಕ್ಕಳ ಮೂಲಕ ಸಾಧಿಸಲು ಹೊರಡುತ್ತೇವೆ. ಮಕ್ಕಳಿಗೂ ಸ್ವತಂತ್ರ ವ್ಯಕ್ತಿತ್ವವಿದೆ ಎನ್ನುವುದನ್ನು ಮರೆತೇಬಿಡುತ್ತೇವೆ. ಸಹಜವಾಗಿ ಸಶಕ್ತವಾಗಿ ಬೆಳೆಯಬಹುದಾದ ಮಗು ಹೇಡಿಯಾಗಿ, ಹಿಂಸಾತ್ಮಕವಾಗಿ ಬೆಳೆಯುತ್ತದೆ. ಹಲವು ನಿಯಮಗಳನ್ನು ನಮಗೆ ನಾವೇ ವಿಧಿಸಿಕೊಂಡು ಹೈರಾಣಾಗುತ್ತೇವೆ.

ವ್ಯಕ್ತಿಸ್ವಾತಂತ್ರ್ಯ ಎಂದರೆ ಯಾರೋ ನೀಡುವಂತಹುದಲ್ಲ. ನಮ್ಮೊಳಗಿನ ರಾಗ-ದ್ವೇಷಗಳನ್ನು ಗುರುತಿಸಿ ಅವುಗಳಿಂದ ಮುಕ್ತರಾಗುವುದೇ ನಿಜವಾದ ಸ್ವಾತಂತ್ರ್ಯ ಬದುಕನ್ನು ಬಂಧನವಾಗಿಸಿಕೊಳ್ಳದೆ ಬಂಧುರವಾಗಿ ಬಾಳೋಣ. ಇತರರ ಬಾಳನ್ನು ವಿಮಶಿಸುವ ಸಣ್ಣತನದಿಂದ ಕಳಚಿಕೊಳ್ಳೋಣ. ಸೋಲಿನ ಮೂಲಕವೇ ಗೆಲುವಿನೆಡೆಗಿನ ದಾರಿ ಎನ್ನುವುದನ್ನು ಒಪ್ಪಿ ಮುನ್ನಡೆಯೋಣ.

Leave a Reply

Your email address will not be published. Required fields are marked *

Back To Top