ಸಡಗರ-ಸಂಭ್ರಮದ ಕಾರ ಹುಣ್ಣಿಮೆ ಉತ್ಸವ

ಸಂಶಿ: ಗ್ರಾಮದಲ್ಲಿ ರೈತರ ಹಬ್ಬವಾದ ಕಾರ ಹುಣ್ಣಿಮೆಯನ್ನು ಸೋಮವಾರ ಸಡಗರ- ಸಂಭ್ರಮದಿಂದ ಆಚರಿಸಲಾಯಿತು.

ಕಾರ ಹುಣ್ಣಿಮೆ ನಂತರ ಮುಂಗಾರು ಬಿತ್ತನೆಗೆ ಚಾಲನೆ ಕೊಡುವ ಪರಿಪಾಠವಿದೆ. ಆದರೆ, ಈ ಬಾರಿ ವರುಣನ ಅವಕೃಪೆಯಿಂದ ಈವರೆಗೆ ಬಿತ್ತನೆ ಮಾಡಿಲ್ಲ. ಇದರಿಂದ ರೈತರಲ್ಲಿ ಅಷ್ಟಾಗಿ ಹುರುಪು ಕಾಣಲಿಲ್ಲ. ಪೂರ್ವಜರ ಆಚರಣೆ ಮತ್ತು ಸಂಪ್ರದಾಯವನ್ನು ಕೈಬಿಡಬಾರದೆಂಬ ಅನಿವಾರ್ಯತೆಯಿಂದ ರೈತರು ಬೆಳಗ್ಗೆ ಎತ್ತುಗಳು ಸೇರಿ ವಿವಿಧ ದನಕರುಗಳ ಮೈ ತೊಳೆದು ಅವುಗಳ ಮೈ, ಕೊಂಬುಗಳಿಗೆ ಬಣ್ಣ ಸವರಿ, ವಿವಿಧ ವಸ್ತುಗಳಿಂದ ಶೃಂಗರಿಸಿದ್ದರು.ರೈತರು ತಮ್ಮ ಎತ್ತುಗಳ ಕೊಂಬುಗಳಿಗೆ ಕೋಡಬಳೆ ಜತೆಗೆ ಬೇವಿನ ಸೊಪ್ಪು, ಕೊಬ್ಬರಿ ಬಟ್ಟಲನ್ನು ಕಟ್ಟಿ ಸಂಜೆ ಗ್ರಾಮದ ಮೂರಂಗಡಿ ಬಳಿ ಓಡಿಸಿದರು. ಸ್ಥಳದಲ್ಲಿ ಜಮಾಯಿಸಿದ್ದ ಕೃಷಿಕರು, ಯುವಕರು ಕೇಕೆ, ಸಿಳ್ಳೆ ಹಾಕುವ ಮೂಲಕ ಎತ್ತುಗಳ ಕೊರಳಲ್ಲಿದ್ದ ಕರಿಯನ್ನು ಹರಿಯುವ ದೃಶ್ಯ ನೋಡುಗರ ಮನ ರಂಜಿಸಿತು.

ಮುಂಗಾರಿ-ಹಿಂಗಾರಿ ಓಟ

ಉಪ್ಪಿನಬೆಟಗೇರಿ: ಹನುಮನಕೊಪ್ಪದ ಅಗಸಿಯಲ್ಲಿ ಸೋಮವಾರ ಎತ್ತುಗಳಿಂದ ಕರಿ ಹರಿಯಲಾಯಿತು. ರೈತರು ತಮ್ಮ ಎತ್ತುಗಳನ್ನು ಜೂಲುಗಳಿಂದ ಶೃಂಗರಿಸಿ ಕೋಡುಗಳಿಗೆ ವಿವಿಧ ಖಾದ್ಯಗಳನ್ನು ಕಟ್ಟಿದ್ದರು. ಸಂಜೆ ಗ್ರಾಮದ ಅಗಸಿಯ ಬಳಿ ಎಲ್ಲ ಎತ್ತುಗಳನ್ನು ತಂದು ಪೂಜೆ ಮಾಡಲಾಯಿತು. ನಂತರ ಪ್ರಮುಖ ಎರಡು ಎತ್ತುಗಳಿಗೆ ಮುಂಗಾರಿ, ಹಿಂಗಾರಿ ಎಂದು ನಾಮಕರಣ ಮಾಡಿ ಓಡಿಸಲಾಯಿತು. ಎರಡು ಎತ್ತುಗಳ ಪೈಕಿ ಯಾವ ಎತ್ತು ಮುಂದೆ ಹೋಗುತ್ತದೆಯೋ ಅದರ ಮೇಲೆ ಮುಂಗಾರಿ ಮತ್ತು ಹಿಂಗಾರಿ ಬೆಳೆ ಚೆನ್ನಾಗಿ ಬರುತ್ತದೆ ಎಂದು ನಂಬಲಾಗುತ್ತದೆ.

Leave a Reply

Your email address will not be published. Required fields are marked *