More

  ಸಚಿವ ಸ್ಥಾನ ಆಕಾಂಕ್ಷಿಗೆ ಅಧ್ಯಕ್ಷ ಪಟ್ಟ

  ಹುಬ್ಬಳ್ಳಿ: ಶಾಸಕ ಅರವಿಂದ ಬೆಲ್ಲದ ಅವರಿಗೆ ಹುಬ್ಬಳ್ಳಿ-ಧಾರವಾಡ ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಸ್ಥಾನ ನೀಡುವ ಮೂಲಕ ಸಚಿವ ಸ್ಥಾನದ ಅವರ ಬಯಕೆಗೆ ತಣ್ಣೀರೆರಚಲಾಗಿದೆಯೇ ?

  ಇಂತಹದೊಂದು ಪ್ರಶ್ನೆ ಜಿಲ್ಲೆಯ ಕಾರ್ಯಕರ್ತ ವಲಯದಲ್ಲಿ ಚರ್ಚೆಯ ವಿಷಯವಾಗಿದೆ. ಹು-ಧಾ ಪಶ್ಚಿಮ ವಿಧಾನಸಭೆ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಪಕ್ಷದ ಮುಖಂಡರ ಬಳಿ ತಮ್ಮ ಅಪೇಕ್ಷೆಯನ್ನು ವ್ಯಕ್ತಪಡಿಸಿದ್ದರು.

  ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಎಲ್ಲ ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂಬ ಉದ್ದೇಶದಿಂದ ಈಗಿನ ಸಂಪುಟದಲ್ಲಿರುವ ಕೆಲ ಸಚಿವರನ್ನು ಕೈಬಿಡುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಶಾಸಕ ಅರವಿಂದ ಬೆಲ್ಲದ ಸಚಿವ ಸ್ಥಾನದ ಬಯಕೆ ವ್ಯಕ್ತಪಡಿಸಿದ್ದರಿಂದ ಅವರನ್ನು ಸಮಾಧಾನಪಡಿಸಲು ಮಹಾನಗರ ಜಿಲ್ಲಾಧ್ಯಕ್ಷ ನೀಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

  ಅರವಿಂದ ಬೆಲ್ಲದರದು ಶಿಸ್ತು, ಯೋಜನಾಬದ್ಧ ವ್ಯಕ್ತಿತ್ವ. ಕೈ-ಬಾಯಿ ಕೆಸರು ಮಾಡಿಕೊಂಡವರಲ್ಲ. ಅಪ್ಯಾಯ ಮಾತು, ಕಾನೂನು ಬದ್ಧ ಕೆಲಸ ಎಂಬ ಮಾತನ್ನು ಪಕ್ಷಾತೀತವಾಗಿ ಆಡುತ್ತಾರೆ.

  ಇಲ್ಲಿನ ದೇಶಪಾಂಡೆ ನಗರದ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಜನಜಾಗೃತಿ ಪೂರ್ವಭಾವಿ ಸಭೆಯಲ್ಲಿಯು ಸಹ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಇನ್ನಾದರೂ ಶಾಸಕ ಅರವಿಂದ ಬೆಲ್ಲದ ವಿದೇಶಿ ಪ್ರವಾಸ ಸ್ಥಗಿತಗೊಳಿಸಬೇಕು. ಸಾಮಾನ್ಯ ಕಾರ್ಯಕರ್ತರು ಹಾಗೂ ಜನರೊಂದಿಗೆ ಬೆರೆಯಬೇಕು ಎಂದು ಸಲಹೆ ನೀಡಿದರು. ಶಾಸಕರಿಗೆ ಮಹಾನಗರ ಜಿಲ್ಲಾಧ್ಯಕ್ಷ ಸ್ಥಾನ ನೀಡಲಾಗಿದೆಯಾದರೂ, ಪಕ್ಷದ ನಿರ್ಧಾರಕ್ಕೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಹಾಗೂ ಬಹುತೇಕ ಕಾರ್ಯಕರ್ತರಲ್ಲಿ ಒಳಗೊಳಗೇ ಅಸಮಾಧಾನ ಮೂಡಿದೆ.

  ಗ್ರಾಮೀಣ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿದ್ದು, ಅವರಿಗೆ ಅಧ್ಯಕ್ಷ ಸ್ಥಾನ ಸಿಕ್ಕಿರುವುದಕ್ಕೆ ಯಾವುದೇ ರೀತಿಯ ಅಸಮಾಧಾನ ಉದ್ಭವಿಸಿಲ್ಲ.

  ಆದರೆ ಶಾಸಕರಿಗೆ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಈ ಸ್ಥಾನದ ಆಕಾಂಕ್ಷಿಗಳಾಗಿದ್ದ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ.

  ಮತ್ತೊಂದೆಡೆ ಈ ಬಾರಿ ಧಾರವಾಡದವರಿಗೆ ಮಹಾನಗರ ಜಿಲ್ಲಾಧ್ಯಕ್ಷ ಸ್ಥಾನ ನೀಡಬೇಕೆಂಬ ಒತ್ತಾಯ ಕೇಳಿಬರುತ್ತಿತ್ತು. ಅರವಿಂದ ಬೆಲ್ಲದ ಹು-ಧಾ ಪಶ್ಚಿಮ ವಿಧಾನಸಭೆ ಕ್ಷೇತ್ರದ ಶಾಸಕರಾಗಿದ್ದರೂ, ಅವರು ಹುಬ್ಬಳ್ಳಿ ನಿವಾಸಿ. ಹೀಗಾಗಿ ಈ ಬಾರಿಯೂ ಹುಬ್ಬಳ್ಳಿಯವರಿಗೇ ಮಹಾನಗರ ಜಿಲ್ಲಾಧ್ಯಕ್ಷ ಸ್ಥಾನ ಲಭಿಸಿದಂತಾಗಿದೆ.

  ಮಹಾನಗರ ಜಿಲ್ಲಾಧ್ಯಕ್ಷರಾಗಿ ಶಾಸಕ ಅರವಿಂದ ಬೆಲ್ಲದ: ಹುಬ್ಬಳ್ಳಿ-ಧಾರವಾಡ ಮಹಾನಗರ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಹು-ಧಾ ಪಶ್ಚಿಮ ವಿಧಾನಸಭೆ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಹಾಗೂ ಧಾರವಾಡ ಗ್ರಾಮೀಣ ಜಿಲ್ಲಾದ್ಯಕ್ಷರಾಗಿ ಬಸವರಾಜ ಕುಂದಗೋಳಮಠ ಆಯ್ಕೆಯಾಗಿದ್ದಾರೆ. ಇಲ್ಲಿನ ಖಾಸಗಿ ಹೋಟೆಲ್​ನಲ್ಲಿ ಸೋಮವಾರ ನಡೆದ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಭಾನುಪ್ರಕಾಶ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷರ ಆಯ್ಕೆ ಪ್ರಕಟಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಿಲ್ಲೆಯಲ್ಲಿ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವಂತೆ ಸೂಚಿಸಿದರು. ಹು-ಧಾ ಪೂರ್ವ ವಿಧಾನಸಭೆ ಕ್ಷೇತ್ರ ಹಾಗೂ ಕುಂದಗೋಳ ವಿಧಾನಸಭೆ ಕ್ಷೇತ್ರದಲ್ಲಿ ಪಕ್ಷದ ಸಂಘಟನೆಗೆ ಹೆಚ್ಚಿನ ಮಹತ್ವ ನೀಡುವ ಮೂಲಕ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಗಳಿಸುವಂತಾಗಬೇಕು ಎಂದರು. ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ, ಸಿ.ಎಂ. ನಿಂಬಣ್ಣವರ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ. ನಾಗರಾಜ, ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಹಿಂದಿನ ಅಧ್ಯಕ್ಷರಾದ ನಾಗೇಶ ಕಲಬುರ್ಗಿ, ಈರಣ್ಣ ಜಡಿ, ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ಮುತ್ತಣ್ಣವರ, ಲಿಂಗರಾಜ ಪಾಟೀಲ, ನಾರಾಯಣ ಜರತಾರಘರ, ಮಾಜಿ ಮೇಯರ್ ಸುಧೀರ ಸರಾಫ ಮತ್ತಿತರರು ಹಾಜರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts