ಸಚಿವ ಸತೀಶ್ ಜಾರಕಿಹೊಳಿಗೆ ಅದ್ದೂರಿ ಸ್ವಾಗತ

ಬೆಳಗಾವಿ: ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಕುಂದಾನಗರಿಗೆ ಆಗಮಿಸಿದ ಸತೀಶ್ ಜಾರಕಿಹೊಳಿ ಅವರಿಗೆ ಮಂಗಳವಾರ ಅದ್ದೂರಿ ಸ್ವಾಗತ ದೊರೆಯಿತು. ಸತೀಶ್ ಜಾರಕಿಹೊಳಿ ನೂರಾರು ಬೆಂಬಲಿಗರೊಂದಿಗೆ ಕಿತ್ತೂರು ರಾಣಿ ಚನ್ನಮ್ಮ, ಡಾ.ಬಿ.ಆರ್.ಅಂಬೇಡ್ಕರ್, ಜಗಜ್ಯೋತಿ ಬಸವೇಶ್ವರ, ಛತ್ರಪತಿ ಶಿವಾಜಿ ಅವರಂಥ ಮಹಾನಾಯಕರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಮಹಾನ್ ನಾಯಕರ ಆದರ್ಶಗಳನ್ನು ಪಾಲಿಸುವಂತೆ ಕರೆಕೊಟ್ಟ ಜಾರಕಿಹೊಳಿ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುವ ಭರವಸೆ ನೀಡಿದರು. ಸರ್ಕಾರಿ ಪ್ರವಾಸಿ ಮಂದಿರದಲ್ಲೂ ಸಚಿವರಿಗೆ ಮಾಜಿ ಶಾಸಕರು, ಕಾಂಗ್ರೆಸ್ ಪಕ್ಷದ ಮುಖಂಡರು, ಸಾಮಾಜಿಕ ಕಾರ್ಯಕರ್ತರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಸನ್ಮಾನಿಸಿ, ಅಭಿನಂದಿಸಿದರು.

ಪ್ರವಾಸಿ ಮಂದಿರದ ಎದುರು ಸ್ವಾಗತ ಕಮಾನುಗಳು ರಾರಾಜಿಸಿದವು. ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಲಗ್ಗೆ ಇಟ್ಟ ಕಾರಣ ನೂಕುನುಗ್ಗಲು ಉಂಟಾಗಿತ್ತು. ಜಿಲ್ಲೆಯ ಬಹುತೇಕ ಎಲ್ಲ ವಿಧಾನಸಭೆ ಕ್ಷೇತ್ರಗಳಿಂದ ಕಾರ್ಯಕರ್ತರು ಬಂದು ಶುಭ ಕೋರಿದರು.

ಮೇಯರ್ ಬಸಪ್ಪ ಚಿಕ್ಕಲದಿನ್ನಿ, ನಗರಸೇವಕಿ ಜಯಶ್ರೀ ಮಾಳಗಿ, ಲಕ್ಷ್ಮಣರಾವ್ ಚಿಂಗಳೆ, ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ ಇತರರು ಇದ್ದರು.

ಮತ್ತೊಂದೆಡೆ ಪ್ರಮುಖ ವೃತ್ತಗಳಲ್ಲಿ ಪಟಾಕಿ ಸಿಡಿಸಿ ಅಭಿಮಾನಿಗಳು ವಿಜಯೋತ್ಸವ ಆಚರಿಸಿದರು. ಸಚಿವರ ಕಾಲಿಗೆ ಬಿದ್ದ ಮೇಯರ್: ಸಚಿವ ಸತೀಶ ಅವರು ರಾಣಿ ಚನ್ನಮ್ಮನ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಬರುತ್ತಲೆ ಎದುರಾದ ಮೇಯರ್ ಬಸಪ್ಪ ಚಿಕ್ಕಲದಿನ್ನಿ ಅವರು ತಕ್ಷಣ ಸಚಿವರ ಕಾಲಿಗೆ ಬಿದ್ದು ನಮಸ್ಕರಿಸಿದರು.