ಸಚಿವ ಶಿವಳ್ಳಿಗೆ ಅದ್ದೂರಿ ಸ್ವಾಗತ

ಹುಬ್ಬಳ್ಳಿ: ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಕುಂದಗೋಳ ಶಾಸಕ ಸಿ.ಎಸ್. ಶಿವಳ್ಳಿ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಗಬ್ಬೂರಿನಲ್ಲಿ ಅದ್ದೂರಿಯಾಗಿ ಸ್ವಾಗತಿಸಿದರು.

ಡೊಳ್ಳು ಕುಣಿತ, ವಿವಿಧ ವಾದ್ಯಮೇಳಗಳೊಂದಿಗೆ ಸಚಿವರನ್ನು ಬರಮಾಡಿಕೊಳ್ಳಲಾಯಿತು. ಕೆಲ ಕಾರ್ಯಕರ್ತರು ಹೂಗುಚ್ಛ ನೀಡಿದರೆ, ಕೆಲವರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಕುಂದಗೋಳ ತಾಲೂಕಿನ ವಿವಿಧ ಗ್ರಾಮಗಳಿಂದಲೂ ಜನ ಆಗಮಿಸಿದ್ದರು.

ಶಾಸಕ ಪ್ರಸಾದ ಅಬ್ಬಯ್ಯ, ಮಹಾನಗರ ಜಿಲ್ಲಾ ಹಾಗೂ ಧಾರವಾಡ ಜಿಲ್ಲಾ ಗ್ರಾಮೀಣ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಬಂಕಾಪುರ ಚೌಕ್ ಹಾಗೂ ನ್ಯೂ ಇಂಗ್ಲಿಷ್ ಸ್ಕೂಲ್​ನಲ್ಲಿ ಸಚಿವರು ಪಕ್ಷದ ಕಾರ್ಯಕರ್ತರನ್ನು ಭೇಟಿಯಾದರು. ನಂತರ ಸಿದ್ಧಾರೂಢಮಠ, ಇಂಡಿಪಂಪ್ ವೃತ್ತದ ಬಳಿಯ ಸೈಯದ್ ಫತೆಶಾ ವಲಿ ದರ್ಗಾಕ್ಕೆ ಭೇಟಿ ನೀಡಿದರು. ಇಂದಿರಾಗಾಜಿನ ಮನೆ ಆವರಣದಲ್ಲಿನ ಮಹರ್ಷಿ ವಾಲ್ಮೀಕಿ ಪುತ್ಥಳಿ ಹಾಗೂ ಬಸವವನದ ಬಸವೇಶ್ವರ ಪ್ರತಿಮೆ, ರಾಣಿ ಚನ್ನಮ್ಮ ಪ್ರತಿಮೆ, ಸಂಗೊಳ್ಳಿ ರಾಯಣ್ಣ ಪ್ರತಿಮೆ, ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಿದರು.

ನಂತರ ಮಾಜಿ ಸಚಿವ ಜಬ್ಬಾರಖಾನ್ ಹೊನ್ನಳ್ಳಿ, ನಾಡೋಜ ಡಾ. ಪಾಟೀಲ ಪುಟ್ಟಪ್ಪ ನಿವಾಸಕ್ಕೆ ಭೇಟಿ ನೀಡಿದರು. ಅಲ್ಲಿಂದ ಕೇಶ್ವಾಪುರಕ್ಕೆ ತೆರಳಿ ಮದರ್ ಥೆರೇಸಾ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಗಬ್ಬೂರಿಗೆ ಬರುವುದಕ್ಕೂ ಮುನ್ನ ಛಬ್ಬಿ, ಹುಬ್ಬಳ್ಳಿ ಹೊರವಲಯದ ಹೆದ್ದಾರಿ, ಕುಂದಗೋಳ ಕ್ರಾಸ್ ಮೊದಲಾದೆಡೆ ಸಚಿವರನ್ನು ಸಾರ್ವಜನಿಕರು ಸ್ವಾಗತಿಸಿದರು.

ಸಂಚಾರಕ್ಕೆ ಅಡಚಣೆ

ಸಚಿವ ಶಿವಳ್ಳಿ ಆಗಮನದ ಹಿನ್ನೆಲೆಯಲ್ಲಿ ನಗರದ ಪುಣೆ-ಬೆಂಗಳೂರು ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಕೆಲಹೊತ್ತು ಅಡಚಣೆ ಉಂಟಾಯಿತು. ಸಚಿವರು ಬರುವುದಕ್ಕೂ ಮುನ್ನ ಹಾಗೂ ಮೆರವಣಿಗೆ ವೇಳೆ ಕಿಲೋ ಮೀಟರ್​ಗಟ್ಟಲೇ ವಾಹನಗಳು ನಿಂತಿದ್ದವು. ಇದರಿಂದಾಗಿ ಪ್ರಯಾಣಿಕರು ಅರ್ಧ ಗಂಟೆಗೂ ಹೆಚ್ಚು ಕಾಲ ಪರದಾಡಿದರು.

ಪ್ರಾಮಾಣಿಕ ಪ್ರಯತ್ನ

ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಸಿ.ಎಂ. ಜೊತೆ ರ್ಚಚಿಸಿ ಪರಿಹರಿಸುವುದಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಸಚಿವ ಸಿ.ಎಸ್. ಶಿವಳ್ಳಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಮುಂದೆ ಬಹಳಷ್ಟು ಸವಾಲು, ಜವಾಬ್ದಾರಿಗಳಿವೆ. ಅವುಗಳನ್ನು ಸ್ವೀಕರಿಸಿ ಉತ್ತಮ ಕಾರ್ಯ ಮಾಡುತ್ತೇವೆ. ಸಂಪುಟ ವಿಸ್ತರಣೆ ಬಗ್ಗೆ ಜೆಡಿಎಸ್-ಕಾಂಗ್ರೆಸ್​ನಲ್ಲಿ ಉಂಟಾಗಿರುವ ಅಸಮಾಧಾನವನ್ನು ಹೋಗಲಾಡಿಸುವುದಕ್ಕೆ ಪಕ್ಷಗಳ ವರಿಷ್ಠರು ನಿರ್ಧಾರ ಕೈಗೊಳ್ಳಲಿದ್ದಾರೆ. ನಾನೂ ಸಹ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇನೆ. ನನಗೆ ಇಂಥದ್ದೇ ಖಾತೆ ಬೇಕು ಎಂದು ಬೇಡಿಕೆ ಇಟ್ಟಿಲ್ಲ. ಹೈಕಮಾಂಡ್ ಯಾವ ಖಾತೆ ಕೊಟ್ಟರೂ ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಫ್ಲೆಕ್ಸ್, ಬ್ಯಾನರ್ ತೆರವು

ಸಚಿವ ಸಿ.ಎಸ್. ಶಿವಳ್ಳಿ ಅವರಿಗೆ ಸ್ವಾಗತ ಕೋರಿ ಚನ್ನಮ್ಮ ವೃತ್ತದಲ್ಲಿ ಅಳವಡಿಸಿದ್ದ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಹಾಗೂ ಕಟೌಟ್​ಗಳನ್ನುಪಾಲಿಕೆ ಸಿಬ್ಬಂದಿ ತೆರವುಗೊಳಿಸಿದರು. ನಗರದ ಸೌಂದರೀಕರಣ ಕಾಪಾಡುವ ದೃಷ್ಟಿಯಿಂದ ಬ್ಯಾನರ್, ಬಂಟಿಂಗ್ಸ್ ಅಳವಡಿಸದಂತೆ ಸುಪ್ರೀಂಕೋರ್ಟ್ ಆದೇಶಿಸಿರುವ ಹಿನ್ನೆಲೆಯಲ್ಲಿ ಪಾಲಿಕೆ ಸಿಬ್ಬಂದಿ ತೆರವು ಮಾಡಿದರು. ಬ್ಯಾನರ್ ಅಳವಡಿಸಿದವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಇನ್ನೊಂದೆಡೆ ಗಬ್ಬೂರು ವೃತ್ತದಲ್ಲಿ ಅಳವಡಿಸಿದ್ದ ಬ್ಯಾನರ್, ಬಂಟಿಂಗ್ಸ್​ಗಳು ಹಾಗೇ ರಾರಾಜಿಸುತ್ತಿದ್ದವು. ಗಬ್ಬೂರಿನ ಪೊಲೀಸ್ ಟವರ್ ಅನ್ನೂ ಲೆಕ್ಕಿಸದೆ ಶಿವಳ್ಳಿ ಅವರ ಕಟೌಟ್​ಗಳನ್ನು ಅಳವಡಿಸಲಾಗಿತ್ತು. ಬಂದೋಬಸ್ತ್​ನಲ್ಲಿದ್ದ ಪೊಲೀಸರು ಚಕಾರ ಎತ್ತಲಿಲ್ಲ.