ಸಚಿವ ಡಿ.ಕೆ.ಶಿವಕುಮಾರನನ್ನು ಸಂಪುಟದಿಂದ ವಜಾ ಮಾಡಲಿ

ಬಳ್ಳಾರಿ: ಜಿಲ್ಲೆಯ ಗಣಿ ಲೂಟಿ ಮಾಡಿದ ಗಾಲಿ ಜನಾರ್ದನ ರೆಡ್ಡಿಯಂತೆ ಸಚಿವ ಡಿ.ಕೆ.ಶಿವಕುಮಾರ ಸಹ ಮಹಾನ್ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಆರೋಪಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಕೆ. ಶಿವಕುಮಾರ್ ಜಿಲ್ಲೆಯ  15 ಸಾವಿರ ಕೋಟಿ ರೂ. ಕೊಳ್ಳೆ ಹೊಡೆಯಲು ಉಸ್ತುವಾರಿ ವಹಿಸಿಕೊಂಡಿದ್ದಾರೆ. 2003ರಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ವೇಳೆ ಕಾನೂನುಬಾಹಿರವಾಗಿ ಬೆನಗಾನಹಳ್ಳಿಯಲ್ಲಿ 4 ಎಕರೆ 20 ಗುಂಟೆ ಜಮೀನನ್ನು ಕಬಳಿಸಿದ್ದಾರೆ ಎಂದರು.

ಸಮಾಜದಲ್ಲಿ ರಾಜಕೀಯ, ಹಣ, ತೋಳ್ಬಲ ಬಳಸಿ ಭ್ರಷ್ಟಾಚಾರದಲ್ಲಿ ಡಿ.ಕೆ. ಶಿವಕುಮಾರ ತೊಡಗಿಸಿಕೊಂಡಿದ್ದಾರೆ. ಅಲ್ಲದೇ, ಆದಾಯವಿಲ್ಲ ಪುತ್ರಿ, ತಾಯಿ ಹೆಸರಿನ ಮೇಲೆ ಕೋಟ್ಯಾಂತರ ರೂ. ಆಸ್ತಿಯನ್ನು ಮಾಡಿದ್ದಾರೆ. ಸದ್ಯ ಜಿಲ್ಲೆಯ ಖನಿಜ ಸಂಪತ್ತನ್ನು ಕಬಳಿಸಲು ಬಂದಿರುವ ಡಿ.ಕೆ. ಶಿವಕುಮಾರಿಗೆ ಜನತೆ ತಕ್ಕ ಪಾಠ ಕಲಿಸಬೇಕು. ಕೂಡಲೇ ಇವರನ್ನು ಸಚಿವ ಸಂಪುಟದಿಂದ ವಜಾಮಾಡಬೇಕು ಎಂದು ಒತ್ತಾಯಿಸಿದರು.

ದೇಶದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಅವರ ಆಡಳಿತದಿಂದ ದೇಶದ ಪರಿಸ್ಥಿತಿ ಗಂಭೀರವಾಗಿದೆ. ಜನತೆ, ರೈತರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಖಾಸಗೀಕರಣದಿಂದ ಜನತೆ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಭ್ರಷ್ಟಾಚಾರದಿಂದ ದೇಶದ ಜನತೆ ನಲುಗಿದ್ದಾರೆ. ಇದಕ್ಕೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜನತೆ ತಕ್ಕಪಾಠ ಕಲಿಸಬೇಕು ಎಂದರು.
ಮುಖಂಡರಾದ ಚಂದ್ರಶೇಖರ, ಐ.ಜಿ.ಮಲ್ಲಿ, ಮಲ್ಲಿಕಾರ್ಜುನ ರೆಡ್ಡಿ ಇದ್ದರು.