ಸಚಿವ ಖರ್ಗೆ ನಡೆಗೆ ಆಕ್ರೋಶ

ವಿಜಯವಾಣಿ ಸುದ್ದಿಜಾಲ ಜೇವರ್ಗಿ
ಶೋಕಾಚರಣೆ ಮಧ್ಯೆಯೂ ಸಂವಾದ ನಡೆಸುವ ಮೂಲಕ ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಶಿವೈಕ್ಯರಾದ ಸಿದ್ಧಗಂಗಾ ಶ್ರೀ ಮತ್ತು ಕೋಟ್ಯಂತರ ಭಕ್ತರಿಗೆ ಅವಮಾನಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ)ಯಿಂದ ಅಂಬೇಡ್ಕರ್ ವೃತ್ತದಲ್ಲಿ ಟೈರ್ಗೆ ಬೆಂಕಿ ಹಚ್ಚಿ, ರಸ್ತೆಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಲಾಯಿತು.

ಕರವೇ ತಾಲೂಕು ಅಧ್ಯಕ್ಷ ಶಿವಲಿಂಗ ಹಳ್ಳಿ ಮಾತನಾಡಿ, ಡಾ.ಶಿವಕುಮಾರ ಸ್ವಾಮೀಜಿ ಲಿಂಗೈಕ್ಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೂರು ದಿನ ಸರ್ಕಾರಿ ಶೋಕಾಚರಣೆಗೆ ಆದೇಶಿಸಿದೆ. ಈ ವೇಳೆ ಯಾವುದೇ ಸರ್ಕಾರಿ ಕಾರ್ಯಕ್ರಮ ನಡೆಸುವಂತಿಲ್ಲ. ಆದರೆ ಸಚಿವ ಪ್ರಿಯಾಂಕ್ ಇಲಾಖೆಯಿಂದ ಖಾಸಗಿ ಹೋಟೆಲ್ನಲ್ಲಿ ಸಂವಿಧಾನ ಸಂವಾದ ಕಾರ್ಯಕ್ರಮ ಆಯೋಜಿಸಿರುವುದು ಸರಿಯಲ್ಲ ಎಂದು ಕಿಡಿಕಾರಿದರು.

ಡಾ.ಶಿವಕುಮಾರ ಸ್ವಾಮೀಜಿಗೆ ಶೀಘ್ರ ಭಾರತ ರತ್ನ ನೀಡಬೇಕು. ನಿರ್ಲಕ್ಷೃ ವಹಿಸಿದರೆ ಮುಂದಿನ ದಿನಗಳಲ್ಲ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರಮುಖರಾದ ಸಂಗಮಾಶ ಬೂರಟ್ಟಿ, ಬಾಬು ಡೊಳ್ಳೆ, ನಿಂಗು ಸೋಮನಾಥ ಹಳ್ಳಿ ಇತರರಿದ್ದರು. ಬೀದರ್- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದ್ದರಿಂದ ವಾಹನ ಸವಾರರು, ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು.