ಮೈಸೂರು: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ್ ವಿರುದ್ಧ ನಗರದಲ್ಲಿ ಗುರುವಾರ ಎರಡು ಕಡೆ ಪ್ರತ್ಯೇಕ ಪ್ರತಿಭಟನೆ ನಡೆಯಿತು.
ನಗರದ ದಾಸಪ್ಪ ವೃತ್ತದಲ್ಲಿ ಸಚಿವರ ಪ್ರತಿಕೃತಿ ದಹಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ವಿವಿಧ ಘೋಷಣೆಗಳ ಭಿತ್ತಿಪತ್ರವನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.
ಟಿಪ್ಪು ಸುಲ್ತಾನ್ ತಲೆ ತೆಗೆದಂತೆ ಸಿದ್ದರಾಮಯ್ಯನವರನ್ನು ಹೊಡೆದು ಹಾಕಬೇಕು ಎಂದು ಸಚಿವ ಅಶ್ವತ್ಥನಾರಾಯಣ ನೀಡಿದ ಹೇಳಿಕೆ ಖಂಡನೀಯ. ಇದು ಕೊಲೆ ಮಾಡಲು ಪ್ರಚೋದನೆಯಾಗಿದೆ. ಈ ಹೇಳಿಕೆ ಶಿಕ್ಷಾರ್ಹ ಅಪರಾಧವಾಗಿದ್ದು, ಭಾರತೀಯ ದಂಡ ಸಂಹಿತೆ 108 ಮತ್ತು 505 ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹ್ಯಾರಿಸ್ ನಲಪಾಡ್ ಮಾತನಾಡಿ, ಸಚಿವ ಅಶ್ವತ್ಥನಾರಾಯಣ ವಿಷಾದ ವ್ಯಕ್ತಪಡಿಸಿದರೆ ಸಾಲದು, ಕ್ಷಮೆಯಾಚಿಸಬೇಕು. ನೀವು ಸಚಿವರಾಗಿ ಏನು ಸಾಧನೆ ಮಾಡಿದೀರಾ?. ಇವರ ಮಿದುಳಿಗೂ, ಬಾಯಿಗೂ ಸಂಪರ್ಕ ಇಲ್ಲದಂತಾಗಿದೆ. ಹೀಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ನಿವಾಸಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.
ಯುವ ಘಟಕದ ನಗರಾಧ್ಯಕ್ಷ ಅಬ್ರಾರ್, ರವಿಕುಮಾರ್, ಚಂದ್ರು, ಮೋಸಿನ್ ಖಾನ್, ಎಂ.ರಾಜೇಶ್, ದೀಪಕ್, ಶಿವಣ್ಣ, ಪೈಲ್ವಾನ್ ಸುನಿಲ್, ರಾಕೇಶ್‌ಗೌಡ, ಮಲ್ಲೇಶ್, ಭರತ್, ಆನಂದ್, ಉಮೇಶ್ ಭಾಗವಹಿಸಿದ್ದರು.
ಸಚಿವ ಸಂಪುಟದಿಂದ ಕೈ ಬಿಡುವಂತೆ ಒತ್ತಾಯ
ಸಿದ್ದರಾಮಯ್ಯನವರ ತಲೆ ತೆಗೆಯಬೇಕು ಎಂದು ಹೇಳಿಕೆ ನೀಡಿರುವ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರನ್ನು ಕೂಡಲೇ ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.
ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಬಳಿ ಜಮಾವಣೆಗೊಂಡ ಪ್ರತಿಭಟನಾಕಾರರು, ಸಚಿವರ ಭಾವಚಿತ್ರ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ರಾಜ್ಯದ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗೆ ದುಡಿಯುವ ಬದಲು ಗೂಂಡಾ ವರ್ತನೆ ಹಾಗೂ ದ್ವೇಷ ರಾಜಕಾರಣ ಮಾಡಲು ಹೊರಟಿದ್ದಾರೆ. ಟಿಪ್ಪು ರೀತಿ ಸಿದ್ದರಾಮಯ್ಯ ಅವರನ್ನು ಹತ್ಯೆ ಮಾಡಿ ಎಂಬುದಾಗಿ ಕಾರ್ಯಕರ್ತರಿಗೆ ಕರೆ ನೀಡಿರುವುದು ಖಂಡನೀಯ ಎಂದು ಆಗ್ರಹಿಸಿದರು.
ಸಿದ್ದರಾಮಯ್ಯ ಜನಪ್ರಿಯತೆಯಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಕೈ ತಪ್ಪುವ ಹತಾಶೆಯಲ್ಲಿ ಬಿಜೆಪಿ ಈ ರೀತಿ ಹತ್ಯೆಗೆ ಸಂಚು ರೂಪಿಸಿದೆ. ಹಿಂದೆ ಮಡಿಕೇರಿಯಲ್ಲಿ ಪ್ರವಾಹದ ಅಧ್ಯಯನಕ್ಕೆ ಹೋದ ಸಂದರ್ಭದಲ್ಲಿ ಇದೇ ರೀತಿ ಸಂಚು ರೂಪಿಸಿತ್ತು. ಈಗ ಸಚಿವರು ಹತ್ಯೆಗೆ ಕರೆಕೊಡುವ ಮೂಲಕ ಸಿದ್ದರಾಮಯ್ಯ ಅವರನ್ನು ಕೊಲ್ಲಲು ಹೊರಟಿದೆ. ಇನ್ನಾದರೂ ಎಚ್ಚೆತ್ತುಕೊಳ್ಳುವ ಮೂಲಕ ಬಿಜೆಪಿಯವರು ತಮ್ಮ ನಡವಳಿಕೆ ತಿದ್ದಿಕೊಳ್ಳಬೇಕು. ಇಲ್ಲವಾದರೆ ಸಿದ್ದರಾಮಯ್ಯ ಅಭಿಮಾನಿಗಳು ಬಿಜೆಪಿಯನ್ನು ರಾಜ್ಯದಲ್ಲಿ ನಿಲ್ಲದಂತೆ ಮಾಡುತ್ತಾರೆ ಎಂದು ಎಚ್ಚರಿಸಿದರು.
ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮ್, ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷ ಡಿ.ನಾಗಭೂಷಣ್, ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ದ್ಯಾವಪ್ಪ ನಾಯಕ, ಜಿಲ್ಲಾ ಕುಂಬಾರರ ಸಂಘದ ಜಿಲ್ಲಾಧ್ಯಕ್ಷ ಎಚ್.ಎಸ್.ಪ್ರಕಾಶ್, ಜಿಲ್ಲಾ ಸವಿತ ಸಮಾಜದ ಅಧ್ಯಕ್ಷ ಎನ್.ಆರ್.ನಾಗೇಶ್, ಜಿಲ್ಲಾ ವಿಶ್ವಕರ್ಮ ಮಹಾಮಂಡಲದ ಅಧ್ಯಕ್ಷ ಸಿ.ಟಿ.ಆಚಾರ್ಯ, ಸಿದ್ದರಾಮಯ್ಯ ಬ್ರಿಗೇಡ್ ಅಧ್ಯಕ್ಷ ಹಿನಕಲ್ ಉದಯ್, ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ಯೋಗೇಶ್ ಉಪ್ಪಾರ್, ಮುಖಂಡರಾದ ವಿದ್ಯಾ, ಭವ್ಯಾ, ಶೋಭಾ, ಛಾಯಾ, ರಾಜೇಶ್ವರಿ ಇನ್ನಿತರರು ಇದ್ದರು.