ಸಕ್ರೆಬೈಲಿನ ಕನವರಿಕೆಯಲ್ಲಿ ಸುಭದ್ರೆ

ಶಿವಮೊಗ್ಗ: ಕಾಲಿನ ಸಮಸ್ಯೆಗೆ ಆರೈಕೆ ಪಡೆದು ಗುಣಮುಖವಾದ ನಂತರ ಉಡುಪಿ ಕೃಷ್ಣಮಠಕ್ಕೆ ಕಳುಹಿಸಿರುವ ಆನೆ ಸುಭದ್ರೆ ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳದೆ ಆಸಕ್ತಿಯಿಂದ ದಿನಚರಿಯಲ್ಲಿ ತೊಡಗಿಸಿಕೊಳ್ಳದಿರುವುದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಚಿಂತೆ ಮೂಡಿಸಿದೆ.

ಫುಟ್​ರೂಟ್ ಸಮಸ್ಯೆಯಿಂದ ನಡೆಯಲಾಗದ ಸ್ಥಿತಿಯಲ್ಲಿದ್ದ ಆನೆಯನ್ನು ಸಕ್ರೆಬೈಲು ಆನೆ ಬಿಡಾರಕ್ಕೆ 2015ರ ನವೆಂಬರ್​ನಲ್ಲಿ ಕರೆತರಲಾಗಿತ್ತು. ಕಳೆದ ನಾಲ್ಕು ವರ್ಷಗಳಲ್ಲಿ ಒಂದೆರಡು ಬಾರಿ ಉಡುಪಿಗೆ ಹೋಗಿಬಂದಿದ್ದು ಬಿಟ್ಟರೆ ಸುಭದ್ರೆಗೆ ಸಕ್ರೆಬೈಲು ಸ್ವಂತ ಮನೆಯಂತಾಗಿತ್ತು.

ಸುಭದ್ರೆಗೆ ಉಡುಪಿಯಲ್ಲಿ ಗಂಡಾಂತರ ತಂದಿದ್ದು ಆಕೆಯನ್ನು ನೋಡಿಕೊಳ್ಳುತ್ತಿದ್ದ ಮಾವುತ. ನಿಗದಿತವಾಗಿ ಸ್ನಾನ ಮಾಡಿಸುತ್ತಿರಲಿಲ್ಲ. ಆನೆ ಕಟ್ಟುತ್ತಿದ್ದ ಜಾಗವನ್ನು ಶುದ್ಧವಾಗಿಟ್ಟುಕೊಳ್ಳದ ಕಾರಣ ಕಾಲಿನ ಉಗುರು ಕೊಳೆಯುವಂತಾಗಿ ವಾಸನೆ ಬರುತ್ತಿತ್ತು. ಪಾದದ ಚರ್ಮ ಕಿತ್ತುಹೋಗಿತ್ತು. ಕಾಲುಗಳಲ್ಲಿ ಊತ ಕಾಣಿಸಿಕೊಂಡಿತ್ತು. ಒಂದು ಹಂತದಲ್ಲಿ ಸುಭದ್ರೆಗೆ ನಡೆಯುವುದೇ ಕಷ್ಟವಾಗಿತ್ತು ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳ ಅಭಿಪ್ರಾಯ.

ಈ ಸ್ಥಿತಿಯಲ್ಲಿದ್ದ ಆನೆಯನ್ನು ಸಕ್ರೆಬೈಲಿಗೆ ತಂದು ಉಪಚಾರ ಮಾಡಿದ ಬಳಿಕ ಸುಧಾರಿಸಿಕೊಂಡಿತ್ತು. 4-5 ಸೆಂಮೀ ದಪ್ಪದ ಆನೆ ಚರ್ಮಕ್ಕೆ ಚಿಕಿತ್ಸೆ ನೀಡುವುದು ನಿಜಕ್ಕೂ ಸವಾಲಾಗಿತ್ತು. ಹೀಗಾಗಿ 5*5 ಅಳತೆಯ ಸ್ವಲ್ಪ ಪ್ರಮಾಣದ ಗುಂಡಿ ತೆಗೆದು, ಟಾರ್ಪಲ್ ಹಾಕಿ ಅದರೊಳಗೆ ನೀರು ನಿಲ್ಲಿಸಿ ಅದಕ್ಕೆ ಆಂಟಿಬಯಾಟಿಕ್ ಮಿಶ್ರಣ ಮಾಡಿ ಅದರೊಳಗೆ ದಿನಕ್ಕೆರಡು ಬಾರಿ ಅರ್ಧ ತಾಸು ಆನೆಯನ್ನು ಅದರೊಳಗೆ ನಿಲ್ಲಿಸಿದ ಪರಿಣಾಮ ಉಗುರು ಹಾಗೂ ಪಾದಕ್ಕೆ ಆಗಿದ್ದ ಗಾಯ ಗುಣವಾಗಿತ್ತು.

ಮಾವುತ ಲಿಯಾಖತ್ ಆರೈಕೆಯಲ್ಲಿ ಪ್ರತಿದಿನ ಸುಭದ್ರೆಗೆ 250-300 ಕೆಜಿ ಸೊಪ್ಪು, ಸೋಯಾಬಿನ್, ಉದ್ದು, ಹುರುಳಿ, ಕುಚಲಕ್ಕಿ, ಗ್ಲೂಕೋಸ್ ಪುಡಿ ನೀಡಲಾಯಿತು. ಉತ್ತಮ ಆರೈಕೆ ಪರಿಣಾಮ ಸುಭದ್ರೆ ಸಂಪೂರ್ಣ ಗುಣಮುಖಳಾಗಿದ್ದಳು.

ವಿಶೇಷ ಸಂದರ್ಭದಲ್ಲಿ ಉಡುಪಿಗೆ:ಸುಭದ್ರೆಗೆ ಉಡುಪಿ ಹಾಗೂ ಸಕ್ರೆಬೈಲಿನ ನಡುವಿನ ಪ್ರಯಾಣ ಅಭ್ಯಾಸವಾಗಿಬಿಟ್ಟಿದೆ. 2015ರ ನವೆಂಬರ್​ನಲ್ಲಿ ಚಿಕಿತ್ಸೆಗೆಂದು ಬಂದಿದ್ದ ಸುಭದ್ರೆಯನ್ನು 2016ರ ಪರ್ಯಾಯದ ಸಂದರ್ಭದಲ್ಲಿ ಉಡುಪಿಗೆ ಕೊಂಡೊಯ್ಯಲಾಗಿತ್ತು. ಮತ್ತದೇ ವರ್ಷ ಸೆಪ್ಟೆಂಬರ್​ನಲ್ಲಿ ಸಕ್ರೆಬೈಲಿಗೆ ಕಳಿಸಲಾಗಿತ್ತು.

2018ರ ಪರ್ಯಾಯಕ್ಕೆಂದು ಮತ್ತೆ ಉಡುಪಿಗೆ ಕರೆದುಕೊಂಡು ಹೋಗಲಾಗಿತ್ತು. ಪರ್ಯಾಯದ ಬಳಿಕ ಮತ್ತೆ ಸಕ್ರೆಬೈಲಿಗೆ ಕಳಿಸಲಾಗಿತ್ತು. ಮುಂದಿನ ತಿಂಗಳು ಕೃಷ್ಣ ಮಠದಲ್ಲಿ ಸ್ವರ್ಣ ಗೋಪುರ ಸಮರ್ಪಣೆ ಹಾಗೂ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮ ಇರುವುದರಿಂದ ಸುಭದ್ರೆಯನ್ನು ಒಂದೂವರೆ ತಿಂಗಳ ಹಿಂದೆ ಉಡುಪಿಗೆ ಕರೆದೊಯ್ಯಲಾಗಿತ್ತು.

ಸಕ್ರೆಬೈಲಿನ ಆನೆ:ಸಕ್ರೆಬೈಲು ಆನೆ ಬಿಡಾರದಲ್ಲಿ ಜನಿಸಿದ ಸುಭದ್ರೆಗೆ ಮೂರು ವರ್ಷವಾಗಿದ್ದಾಗ ವನ್ಯಜೀವಿ ಕಾಯ್ದೆ ಪ್ರಕಾರವೇ ಆಕೆಯನ್ನು ಕೃಷ್ಣ ಮಠಕ್ಕೆ ಕರೆದೊಯ್ಯಲಾಗಿತ್ತು. ಆನಂತರ ಆಕೆ ಬಿಡಾರಕ್ಕೆ ಮರಳಿದ್ದು 23 ವರ್ಷಗಳ ನಂತರ ಅನಾರೋಗ್ಯಕ್ಕೆ ತುತ್ತಾದಾಗಲೇ.

ರೀತಿ ರಿವಾಜು ಮರೆಯದ ಆನೆ:ಕಳೆದ ಐದು ವರ್ಷಗಳಲ್ಲಿ ಸುಭದ್ರೆ ಸಕ್ರೆಬೈಲು ಆನೆ ಬಿಡಾರ ಹಾಗೂ ಸಮೀಪದಲ್ಲಿರುವ ಮಾವುತನ ಮನೆಯ ಆವರಣದಲ್ಲಿ ಇದ್ದಿದ್ದೇ ಹೆಚ್ಚು. ಆದರೆ ಉಡುಪಿಗೆ ಹೋದಾಗ ಆಕೆ ತನ್ನ ಕರ್ತವ್ಯ ಹಾಗೂ ದಿನಚರಿಯನ್ನು ಮರೆಯುವುದಿಲ್ಲ ಎಂಬುದು ವಿಶೇಷ. ಪೂಜೆ, ಮೆರವಣಿಗೆ ಸಮಯದಲ್ಲಿ ಅಚ್ಚುಕಟ್ಟಾಗಿ ತನ್ನ ಪಾತ್ರವನ್ನು ನಿಭಾಯಿಸುವ ರೀತಿ ಎಲ್ಲರನ್ನೂ ಬೆರಗಾಗಿಸಿತ್ತು. ಆದರೆ ಇತ್ತೀಚೆಗೆ ಆಕೆಗೆ ಮತ್ತೆ ನಿರಾಸಕ್ತಿ ಕಾಡುತ್ತಿದೆ.

Leave a Reply

Your email address will not be published. Required fields are marked *