ಸಕ್ರಿಯವಾಗಿದ್ದರೆ ಸಹಕಾರ ಕ್ಷೇತ್ರ ಬಲವರ್ಧನೆ

ಕೋಲಾರ: ಸಹಕಾರ ಸಂಘಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಿದಾಗ ಸಹಕಾರ ಕ್ಷೇತ್ರದ ಬಲವರ್ಧನೆ ಸಾಧ್ಯ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಹೇಳಿದರು.

ನಗರದ ಸಹಕಾರ ಯೂನಿಯನ್ ಸಭಾಂಗಣದಲ್ಲಿ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟ, ಡಿಸಿಸಿ ಬ್ಯಾಂಕ್, ಕೋಚಿಮುಲ್ ಹಾಗೂ ಸಹಕಾರ ಸಂಘಗಳ ಆಶ್ರಯದಲ್ಲಿ 65ನೇ ಅಖಿಲ ಭಾರತ ಸಹಕಾರ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಹಕಾರ ಕ್ಷೇತ್ರದಲ್ಲಿ ಕೆಲಸ ಮಾಡುವವರು ರಾಜಕೀಯ ಹೊರತುಪಡಿಸಿ ಕೆಲಸ ಮಾಡಬೇಕು. ಸಹಕಾರಿ ಸಂಸ್ಥೆಗಳಲ್ಲಿ ಉತ್ತಮ ಆಡಳಿತ ನಡೆಯುತ್ತಿರುವುದರಿಂದ ಸಮಾಜದಲ್ಲಿ ಗೌರವ ಸಿಗುತ್ತಿದೆ. ಬೇರೆ ಯಾವುದೇ ಕ್ಷೇತ್ರದ ಮೂಲಕ ಜನರಿಗೆ ಸೌಕರ್ಯ ಕಲ್ಪಿಸಲು ಸಾಧ್ಯವಿಲ್ಲ, ಅಂತಹ ಕಾರ್ಯ ಸಹಕಾರಿ ಕ್ಷೇತ್ರದಿಂದ ಸಾಧ್ಯ ಎಂದರು.

ಹೈನೋದ್ಯಮ ಅವಿಭಜಿತ ಕೋಲಾರ ಜಿಲ್ಲೆಯ ರೈತರ ಜೀವನಾಡಿ. ಹೈನೋದ್ಯಮದಿಂದಲೇ ರೈತರು ಆತ್ಮಸ್ಥೈರ್ಯದಿಂದ ಬದುಕು ರೂಪಿಸಿಕೊಳ್ಳಲು ಸಹಕಾರಿಯಾಗಿದೆ. ರೈತರಿಗೆ ಮೋಸ ಮಾಡಿದ ಸಂಘಗಳು ಬೆಳೆಯಲು ಸಾಧ್ಯವಿಲ್ಲ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಹೊಳಲಿ ಪ್ರಕಾಶ್ ಮಾತನಾಡಿ, ನಗರದ ಒಕ್ಕೂಟದ ಜಾಗವನ್ನು ನಗರಸಭೆ ಒತ್ತುವರಿಗೆ ಮುಂದಾಗಿದೆ. ಅದನ್ನು ಉಳಿಸಿಕೊಂಡು 66ನೇ ಸಪ್ತಾಹದ ಒಳಗೆ ವಾಣಿಜ್ಯ ಮಳಿಗೆ ನಿರ್ವಿುಸಲು ಆಡಳಿತ ಮಂಡಳಿ ಮುಂದಾಗಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಎಂ.ವೆಂಕಟಸ್ವಾಮಿ, ನಿರ್ದೇಶಕರಾದ ಉರಗಿಲಿ ರುದ್ರಸ್ವಾಮಿ, ಎಚ್.ಕೃಷ್ಣಪ್ಪ, ಸುರೇಶ್, ಎ.ಸಿ.ಭಾಸ್ಕರ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸೋಮಣ್ಣ, ಕೋಚಿಮುಲ್ ಉಪ ವ್ಯವಸ್ಥಾಪಕ ಡಾ.ಎ.ಸಿ.ಶ್ರೀನಿವಾಸಗೌಡ, ಒಕ್ಕೂಟದ ಸಿಇಒ ಭಾರತಿ ಹಾಜರಿದ್ದರು. ಒಕ್ಕೂಟ ಮತ್ತು ಡಿಸಿಸಿ ಬ್ಯಾಂಕ್ ಕಚೇರಿ ಆವರಣದಲ್ಲಿ ಸಹಕಾರಿ ಧ್ವಜಾರೋಹಣ ನೆರವೇರಿಸಲಾಯಿತು.

ಸಹಕಾರ ರಂಗದ ಅಭಿವೃದ್ಧಿಗೆ ಆಡಳಿತ ಮಂಡಳಿ ಸಹಕರಿಸಿದರೆ ಸುಸಜ್ಜಿತ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗುವುದು. ಟಿಎಪಿಸಿಎಂಸ್ ಸಂಸ್ಥೆಯಿಂದ ಜಾಗ ನೀಡಿದರೆ ಬಿತ್ತನೆ ಬೀಜ ಮಾರಾಟ ಕೇಂದ್ರ, ಬೆಳೆ ಖರೀದಿಸುವ ಕೇಂದ್ರ ಸ್ಥಾಪಿಸುವ ಪ್ರಯತ್ನ ನಡೆಸಲಾಗುವುದು.

| ಎನ್.ವೆಂಕಟೇಶ್, ಡಿಸಿಸಿ ಬ್ಯಾಂಕ್ ಸಿಇಒ