More

  ಸಕ್ಕರೆ ಕಾರ್ಖಾನೆ ಬೂದಿಗೆ ಸಿಡಿದೆದ್ದ ರೈತರು- ಸಭೆ ನಡೆಸಲು ಎಡಿಸಿ ಇಂಗಿತ

  ದಾವಣಗೆರೆ: ಕುಕ್ಕ್ಕುವಾಡದ ದಾವಣಗೆರೆ ಸಕ್ಕರೆ ಕಾರ್ಖಾನೆಯ ಚಿಮಣಿ ಹೊರಸೂಸುವ ಬೂದಿಯಿಂದ ಪರಿಸರಕ್ಕೆ ಹಾನಿಯಾಗುತ್ತಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ನೆರೆಹೊರೆಯ ಗ್ರಾಮಸ್ಥರು ಸೋಮವಾರ, ಕಬ್ಬು ತುಂಬಿದ ಟ್ರಾೃಕ್ಟರ್‌ನೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
  ಹಳ್ಳಕ್ಕೆ ಬಿಡುತ್ತಿರುವ ಕಾರ್ಖಾನೆಯ ತ್ಯಾಜ್ಯದ ನೀರು ಕುಡಿದ ದನಕರುಗಳು ಜೀವಹಾನಿಗೆ ಒಳಗಾಗುತ್ತಿವೆ. ಚಿಮಣಿಯಿಂದ ಬರುವ ಬೂದಿಯು ಮನೆಗಳು, ಊಟದ ತಟ್ಟೆ ಹಾಗೂ ಬಟ್ಟೆಗಳ ಮೇಲೂ ಬೀಳುತ್ತಿದೆ. ಇದರಿಂದ ಜನರ ಜೀವನ ದುಸ್ತರವಾಗಿದೆ ಎಂದು ರೈತರು ಆರೋಪಿಸಿದರು.
  ಟನ್ ಕಬ್ಬಿಗೆ 3100 ರೂ. ಬೆಲೆ ನಿಗದಿ ಮಾಡಿದ್ದರೂ 2821 ರೂ. ನೀಡಲಾಗುತ್ತಿದೆ. ಕಬ್ಬು ಕಟಾವು ಮಾಡಿ ಮೂರು ತಿಂಗಳ ಬಳಿಕ ಹಣ ಪಾವತಿಸುತ್ತಿದ್ದು, ರೈತರಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದರು.
  ಇದಕ್ಕೂ ಮುನ್ನ ಕೊಳೇನಹಳ್ಳಿ, ಕನಗೊಂಡನಹಳ್ಳಿ, ಬಲ್ಲೂರು, ಶಿರಗಾನಹಳ್ಳಿ ನಾಗರಸನಹಳ್ಳಿ ಮೊದಲಾದ ಗ್ರಾಮದ ರೈತರು ಬಿಜೆಪಿ ರೈತ ಮೋರ್ಚಾ ಮುಖಂಡ ಬಿ.ಎಂ. ಸತೀಶ ನೇತೃತ್ವದಲ್ಲಿ ಕುಕ್ಕ್ಕುವಾಡ ಕಾರ್ಖಾನೆಯ ಎದುರು ಪ್ರತಿಭಟನೆ ನಡೆಸಿದರು.
  ಅಧಿಕಾರಿಗಳು ಸ್ಥಳಕ್ಕೆ ಬಂದು ಅಹವಾಲು ಆಲಿಸದಿದ್ದಾಗ ಸಿಡಿದೆದ್ದ ರೈತರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಪ್ರತಿಭಟನೆ ಮುಂದುವರಿಸಿದರು. ಸಭೆಯಲ್ಲಿದ್ದ ಡಿಸಿ ಶಿವಾನಂದ ಕಾಪಶಿ ಪ್ರತಿಭಟನಾಕಾರರನ್ನು ಭೇಟಿಯಾಗದ್ದರಿಂದ ಅವರ ವಿರುದ್ಧ ಘೋಷಣೆ ಕೂಗಿದರು.
  ಒಂದು ವಾರದೊಳಗಾಗಿ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ರೈತರ ಸಭೆ ಕರೆದು ಜಿಲ್ಲಾಧಿಕಾರಿ ಅವರು ಸಮಸ್ಯೆ ಇತ್ಯರ್ಥಗೊಳಿಸಬೇಕು. ಇಲ್ಲದಿದ್ದರೆ ದಾವಣಗೆರೆ ಬಂದ್‌ಗೆ ಕರೆ ನೀಡಲಾಗುವುದು ಎಂದು ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಎಚ್ಚರಿಸಿದರು.
  ಅಹವಾಲು ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ಬಿ.ಎನ್. ಲೋಕೇಶ್, ಮಾರ್ಚ್ 13ರಂದು ಕಾರ್ಖಾನೆ ಮಾಲೀಕರೊಂದಿಗೆ ರೈತರ ಸಭೆ ಕರೆದು ಚರ್ಚೆ ನಡೆಸಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆ ಅಂತ್ಯಗೊಂಡಿತು.
  ಪ್ರತಿಭಟನೆಯಲ್ಲಿ ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ರೈತ ಮುಖಂಡ ಎಚ್.ಆರ್.ಲಿಂಗರಾಜ್, ಬಲ್ಲೂರು ರವಿಕುಮಾರ್, ಹದಡಿ ಹಾಲಪ್ಪ, ಜೆಡಿಎಸ್ ಮುಖಂಡ ಜೆ. ಅಮಾನುಲ್ಲಾಖಾನ್, ಟಿ.ಅಸ್ಗರ್, ರೈತ ಮುಖಂಡರಾದ ಬಲ್ಲೂರು ಬಸವರಾಜ್, ಚಿನ್ನಹಳ್ಳಿ ನಾಗರಾಜ್, ಕನಕಗೊಂಡನಹಳ್ಳಿ ತಿಪ್ಪೇಸ್ವಾಮಿ, ಕುಕ್ಕ್ಕುವಾಡದ ರುದ್ರೇಗೌಡ, ಕೆ.ಓಂಕಾರಪ್ಪ, ಸ್ವಾಮಿ ನಿಂಗಪ್ಪ, ಕೆ.ಶರಣಪ್ಪ, ನಾಗರಸನಹಳ್ಳಿ ರುದ್ರೇಶ್, ವೈ.ಬಿ.ನಿಂಗಪ್ಪ ಇತರರು ಪಾಲ್ಗೊಂಡಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts