ಕೂಡ್ಲಿಗಿ: ದೇಹದೊಂದಿಗೆ ಕಣ್ಣಿನ ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕು ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ಮೊಳಕಾಲ್ಮೂರು ತಾಲೂಕಿನ ಸಿದ್ದಯ್ಯನಕೋಟೆಯ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಶಾಖಾಮಠದಲ್ಲಿ ತುಮಕೂರಿನ ಅಕ್ಷರ ಐ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಭಾನುವಾರ ಮಾತನಾಡಿದರು. ಕಣ್ಣು ಮಾನವನ ದೇಹದ ಅತಿ ಸೂಕ್ಷ್ಮವಾದ ಅಂಗವಾಗಿದ್ದು, ಅದನ್ನು ಜಾಗ್ರತೆಯಿಂದ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಕಣ್ಣಿನ ಸಮಸ್ಯೆ ಗಂಭೀರ ಸ್ವರೂಪದ ಕಾಯಿಲೆಯಾಗಿ ಪರಿಣಮಿಸುತ್ತಿದೆ. ಆರಂಭದಲ್ಲೇ ತಪಾಸಣೆ ಮಾಡಿಸಿ, ಸಮಸ್ಯೆ ಕಂಡರೆ ಚಿಕಿತ್ಸೆ ಪಡೆಯಬೇಕು. ಚಿಕ್ಕಮಕ್ಕಳಿಂದ ವೃದ್ಧರವರೆಗೆ ಎಲ್ಲರಿಗೂ ಇತ್ತೀಚಿನ ದಿನಗಳಲ್ಲಿ ಕಣ್ಣಿನ ಸಮಸ್ಯೆ ಸಾಮಾನ್ಯವಾಗಿದೆ. ಅತಿಯಾದ ಮೊಬೈಲ್ ಬಳಕೆ, ಟಿವಿ ನೋಡುವುದು, ವಾಹನಗಳ ದಟ್ಟಣೆ ಹಾಗೂ ಕಾರ್ಖಾನೆಗಳು ಹೊರಸೂಸುವ ಕಾರ್ಬನ್ ಡೈ ಆಕ್ಸೈಡ್‌ನಿಂದ ಸಹ ಕಣ್ಣಿನ ಸಮಸ್ಯೆ ಬರುತ್ತದೆ. ಆದ್ದರಿಂದ ಸಕಾಲದಲ್ಲಿ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಬೇಕು. ಕಣ್ಣಿಗೆ ಪೂರಕವಾದ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಬಳಸಬೇಕು ಎಂದು ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.
ಸಿದ್ದಯ್ಯನಕೋಟೆ ಚಿತ್ತರಗಿ ಶಾಖಾ ಮಠದ ಬಸವಲಿಂಗ ಸ್ವಾಮೀಜಿ ಮಾತನಾಡಿ, ಕಣ್ಣು ದೇಹದ ಮುಖ್ಯ ಅಂಗವಾಗಿದ್ದು, ಅದರ ಬಗ್ಗೆ ಅಸಡ್ಡೆ ಮಾಡಿದರೆ ಬದುಕು ಅಂಧಕಾರವಾಗುವುದು. ಈ ಹಿನ್ನೆಲೆಯಲ್ಲಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅಕ್ಷರ ಐ ಫೌಂಡೇಷನ್ ಮೂಲಕ ಜಿಲ್ಲೆಯ ಗಡಿ ಗ್ರಾಮಗಳಲ್ಲಿ ಉಚಿತ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರ ಕೈಗೊಂಡಿರುವುದು ಸಾರ್ಥಕ ಕಾರ್ಯವಾಗಿದ್ದು, ಅದರ ಸದುಪಯೋಗ ಎಲ್ಲರೂ ಪಡೆಯಬೇಕು ಎಂದರು. ಒಂದು ಸಾವಿರಕ್ಕೂ ಹೆಚ್ಚು ಜನ ಕಣ್ಣಿನ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆದರು.
ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲ ಕೃಷ್ಣ, ಡಾ.ಪುಷ್ಪಾ, ಡಾ.ಅರುಣ್ ಕುಮಾರ, ತಾಪಂ ಮಾಜಿ ಸದಸ್ಯ ಮೀನಕೆರೆ ತಿಪ್ಪೇಸ್ವಾಮಿ, ಮಾದೆಹಳ್ಳಿ ನಜೀರ್, ಬಸವರಾಜ ಗೌಡ್ರು, ಟೈಲರ್ ನಾಗರಾಜ, ಹೊನ್ನೂರಪ್ಪ, ರಾಮಸಾಗರ ಹಟ್ಟಿ ಬೋರಣ್ಣ, ಮರುಳಸಿದ್ದಪ್ಪ ಇದ್ದರು.