ಸಕಾಲಕ್ಕೆ ಸಾಲ ಮರುಪಾವತಿಸಿ

ಮಾಸ್ತಿ: ಸಾಲ ಪಡೆದ ಸ್ತ್ರೀಶಕ್ತಿ ಸಂಘಗಳು ಸಕಾಲಕ್ಕೆ ಸಂದಾಯ ಮಾಡದಿರುವುದರಿಂದ ಅರ್ಜಿ ಸಲ್ಲಿಸಿರುವ ಸಂಘಗಳಿಗೆ ಸಾಲ ವಿತರಣೆಗೆ ವಿಳಂಬವಾಗುತ್ತಿದೆ ಎಂದು ಡಿಸಿಸಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.

ಟೇಕಲ್ ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ಸಾಲ ಪಡೆದಿರುವ ಸಂಘದ ಪ್ರತಿನಿಧಿಗಳ ಮನೆಗಳಿಗೆ ಬುಧವಾರ ಭೇಟಿ ನೀಡಿ ಸಾಲ ಮರುಪಾವತಿ ಮಾಡುವಂತೆ ಮನವಿ ಮಾಡಿ ಮಾತನಾಡಿದರು.

ಪ್ರಾಮಾಣಿಕವಾಗಿ ಸಾಲ ಮರುಪಾವತಿಯಾದ ತಕ್ಷಣ ಇತರರಿಗೆ ತ್ವರಿತವಾಗಿ ಸಾಲ ನೀಡಲಾಗುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.

ಟೇಕಲ್​ನ ರೇಷ್ಮೆ ಬೆಳೆಗಾರರ ಹಾಗೂ ರೈತ ಸೇವೆ ಸಹಕಾರ ಸಂಘದ ಮೂಲಕ ಡಿಸಿಸಿ ಬ್ಯಾಂಕ್ ಒಟ್ಟು 196 ಸಂಘಗಳಿಗೆ ಶೂನ್ಯ ಬಡ್ಡಿಯಲ್ಲಿ ಸಾಲ ನೀಡಿದ್ದು, ಇದರಲ್ಲಿ ಪ್ರಾಮಾಣಿಕವಾಗಿ ಪ್ರತಿ ತಿಂಗಳು 50 ಸ್ತ್ರೀಶಕ್ತಿ ಸಂಘಗಳು ಮರುಪಾವತಿ ಮಾಡುತ್ತಿವೆ. 70 ಸಂಘಗಳು ಕೆಲ ಕಂತು ಜಮಾ ಮಾಡಿ ಕೆಲವು ಕಂತು ಉಳಿಸಿಕೊಂಡಿವೆ. 76 ಸಂಘಗಳು ಮಧ್ಯವರ್ತಿಗಳ ಮಾತು ಕೇಳಿ ಸಾಲ ಮರುಪಾವತಿ ಮಾಡಲು ವಿಳಂಬ ಮಾಡುತ್ತಿವೆ. ಇದಕ್ಕೆ ಆಸ್ಪದ ಕೊಡದೆ ಸಾಲದ ಹಣವನ್ನು ಮರುಪಾವತಿಸಿ ಬ್ಯಾಂಕ್ ಅಭಿವೃದ್ಧಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.

ಟೇಕಲ್ ವ್ಯಾಪ್ತಿಯ 10ಕ್ಕೂ ಹೆಚ್ಚು ಹಳ್ಳಿಗಳಿಗೆ ಭೇಟಿ ನೀಡಿ ಸಂಘದ ಸದಸ್ಯರೊಂದಿಗೆ ರ್ಚಚಿಸಿದರು. ಟೇಕಲ್ ಎಸ್​ಎಫ್​ಎಸ್​ಸಿ ಕಚೇರಿಯಲ್ಲಿ ಸಾಲ ಪಡೆದಿರುವವರ ಮಾಹಿತಿ ಮತ್ತು ಸುಸ್ತಿದಾರರ ಸಂಘಗಳ ವಿವರ ಪಡೆದರು.

ಟೇಕಲ್ ಎಸ್​ಎಫ್​ಎಸ್​ಸಿ ಅಧ್ಯಕ್ಷ ಡಿ.ರವೀಂದ್ರ, ನಿರ್ದೇಶಕ ಶ್ರೀನಿವಾಸ, ಸಿ.ಎಂ.ರವಿಕುಮಾರ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಡಿ.ಎಂ.ವೆಂಕಟಸ್ವಾಮಿ, ಸಿ.ಎಸ್.ಶಿವರಾಜ್, ಎನ್.ನಂಜುಂಡಪ್ಪ ಇದ್ದರು.

Leave a Reply

Your email address will not be published. Required fields are marked *