ಹಾಸನ: ಕಾಡಾನೆ ದಾಳಿಯಿಂದ ವ್ಯಕ್ತಿ ಗಂಭೀರ ಗಾಯಗೊಂಡಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ವಡೂರು ಗ್ರಾಮದಲ್ಲಿ ಇಂದು ಮುಂಜಾನೆ ನಡೆದಿದೆ.
ಗ್ರಾಮದ ಮಂಜುನಾಥ್ (45) ಗಾಯಾಳು. ಮಂಗಳವಾರ ಮುಂಜಾನೆ ಜಮೀನಿನಲ್ಲಿ ಕೆಲಸ ಮಾಡಲು ತೆರಳುತ್ತಿದ್ದ ವೇಳೇ ಏಕಾಏಕಿ ದಾಳಿ ನಡೆಸಿರುವ ಒಂಟಿ ಸಲಗ ಮಂಜುನಾಥ್ ಅವರನ್ನು ಸೊಂಡಿಲಿನಿಂದ ಎತ್ತಿ ಎಸೆದು ಅವರ ಬಲಗಾಲನ್ನು ತುಳಿದು ಹಾಕಿದೆ. ಅದೃಷ್ಟವಶಾತ್ ಪ್ರಾಣಾಪಯದಿಂದ ಪಾರಾಗಿರುವ ಮಂಜುನಾಥ್ ಅವರನ್ನು ಚಿಕಿತ್ಸೆಗಾಗಿ ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಸಲಗನನ್ನು ಗ್ರಾಮದಿಂದ ಓಡಿಸುವ ಪ್ರಯತ್ನ ನಡೆಸಿದರು.
ಇತ್ತೀಚೆಗಷ್ಟೆ ತಾಲೂಕಿನ ಮರಡೀಕೆರೆ ಗ್ರಾನದಲ್ಲಿ ಕಾಡಾನೆ ದಾಳಿಗೆ ಸಿಲುಕಿ ರೈತನೊಬ್ಬ ಗಾಯಗೊಂಡಿದ್ದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ನಡೆದಿರುವುದು ತಾಲೂಕಿನ ಜನತೆಯನ್ನು ಆತಂಕಕ್ಕೀಡು ಮಾಡಿದೆ.
ತಾಲೂಕಿನ ವಡೂರು, ಕಿರುಹುಣಸೆ, ಹಾಲೇಬೇಲೂರು, ಕಿತ್ತಗಳಲೆ, ಇಬ್ಬಡಿ ಕೊಣ್ಣೂರು, ಶಾಂತಪುರ, ಜಾನೇಕೆರೆ, ಮಳಲಿ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ರೈತರ ಬೆಳೆದ ಭತ್ತ, ಮೆಣಸಿನಕಾಯಿ ಗಿಡ, ಶುಂಠಿ, ಕಾಫಿ ಸೇರಿದಂತೆ ಇನ್ನಿತರ ಬೆಳೆಗಳನ್ನು ನಾಶ ಮಾಡುವುದಲ್ಲದೆ ಮನುಷ್ಯರ ಮೇಲೆ ದಾಳಿ ನಡೆಸುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಈ ಭಾಗದ ರೈತರು ಬೆಳೆ ಉಳಿಸಿಕೊಳ್ಳಲು ತಮ್ಮ ಪ್ರಾಣವನ್ನೆ ಒತ್ತೆಇಡುವಂತಾಗಿದೆ.