ಸಕಲೇಶಪುರ: ಕಾಂಗ್ರೆಸ್ ಸರ್ಕಾರ ಹಿಂದು ವಿರೋಧಿ ನಡೆ ಅನುಸರಿಸುತ್ತಿದೆ ಎಂದು ಆರೋಪಿಸಿ ಹಾಗೂ ವಕ್ಫ್ ಬೋರ್ಡ್ ನೀತಿ ಖಂಡಿಸಿ ತಾಲೂಕು ಬಿಜೆಪಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.
ಪಟ್ಟಣದ ಹಳೇಬಸ್ ನಿಲ್ದಾಣದ ಬಳಿ ಜಮಾವಣೆಗೊಂಡ ತಾಲೂಕು ಬಿಜೆಪಿ ಮಂಡಲ ಕಾರ್ಯಕರ್ತರು, ಘೋಷಣೆಗಳನ್ನು ಕೂಗುತ್ತಾ ಪಟ್ಟಣದ ತಾಲೂಕು ಆಡಳಿತಸೌಧದವರೆಗೆ ಕಾಲ್ನಡಿಗೆ ಮೂಲಕ ಜಾಥಾ ನಡೆಸಿ ಪ್ರತಿಭಟನೆ ಆರಂಭಿಸಿದರು. ರಾಜ್ಯ ಸರ್ಕಾರ ಹಾಗೂ ವಕ್ಫ್ ಬೋರ್ಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಹಸೀಲ್ದಾರ್ ಮೇಘನಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಬಿಜೆಪಿ ತಾಲೂಕು ಅಧ್ಯಕ್ಷ ವಳಲಹಳ್ಳಿ ಅಶ್ವಥ್ ಮಾತನಾಡಿ, ರಾಜ್ಯದಲ್ಲಿ ಹಿಂದು ವಿರೋಧಿ ಧರ್ಮಾಧಾರಿತ ಕೋಮುವಾದಿ ಸರ್ಕಾರ ಆಡಳಿತ ನಡೆಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅತಿಯಾದ ಅಲ್ಪ ಸಂಖ್ಯಾತರ ಓಲೈಕೆಯಿಂದಾಗಿ ರಾಜ್ಯದ ರೈತರು, ಮಠಗಳು, ಶಾಲೆಗಳು ಮತ್ತು ಶತಮಾನಗಳ ಹಿಂದಿನ ದೇವಸ್ಥಾನಗಳ ಜಮೀನು ವಕ್ಫ್ ಬೋರ್ಡ್‌ಗೆ ಹೋಗುತ್ತಿರುವುದು ಆತಂಕಕಾರಿ ಎಂದರು.
ಕಾಂಗ್ರೆಸ್ ಜಾರಿಗೆ ತಂದಿರುವ ವಕ್ಫ್ ಬೋರ್ಡ್ ಕಾನೂನು ಯಾವುದೇ ಜಮೀನನ್ನು ತನ್ನ ಹೆಸರಿಗೆ ಬರೆಸಿಕೊಳ್ಳುವ, ಇದರ ವಿರುದ್ಧ ಯಾರೇ ಆಗಲಿ ನ್ಯಾಯಾಲಯದಲ್ಲೂ ಪ್ರಶ್ನೆ ಮಾಡಲಾರದಂತ ಕಾನೂನು ಹಕ್ಕನ್ನು ನೀಡಲಾಗಿದೆ. ಈ ನಿರಂಕುಶ ಸರ್ವಾಧಿಕಾರವನ್ನು ಮೊಟಕುಗೊಳಿಸಲು ಪ್ರಧಾನಿ ನರೇಂದ್ರ ಮೋದಿ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿದ್ದಾರೆ. ಇದನ್ನು ಮನಗಂಡ ಸಚಿವ ಜಮೀರ್ ಅಹಮ್ಮದ್ ಕಾಯ್ದೆ ಜಾರಿಗೂ ಮುನ್ನ ಸಾವಿರಾರು ಎಕರೆ ರೈತರ ಜಮೀನನ್ನು ವಕ್ಫ್ ಮಂಡಳಿಗೆ ಸೇರಿಸಲು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ಶಾಂತಿ, ಸಾಮರಸ್ಯದ ನಾಡಾಗಿದ್ದ ರಾಜ್ಯವನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೋಮು ದಳ್ಳುರಿಗೆ ತಳ್ಳಲಾಗುತ್ತಿದೆ. ವಾಲ್ಮೀಕಿ ಹಗರಣ, ಮುಡಾ ಹಗರಣಗಳಂತ ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಇದಿಷ್ಟು ಸಾಲದಂತೆ ಹುಬ್ಬಳ್ಳಿಯಲ್ಲಿ ನಡೆದ ಕೋಮುಗಲಭೆಯಲ್ಲಿ ಭಾಗಿಯಾದವರ ಮೊಕದ್ದಮೆ ಹಿಂಪಡೆಯುವ ಮೂಲಕ ಅತಿಯಾದ ಮುಸ್ಲಿಮರ ಓಲೈಕೆ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರ ರೈತರ ಜಮೀನನ್ನು ಮಾತ್ರಲ್ಲದೆ ಶಾಲಾ, ಕಾಲೇಜುಗಳು, ಮಠಗಳು ಹಾಗೂ ದೇವಸ್ಥಾನಗಳ ಜಮೀನನ್ನು ವಕ್ಫ್ ಬೋರ್ಡ್ ನೀಡಲು ಮುಂದಾಗಿರುವುದರಿಂದ ಹಿಂದುಗಳಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅಲ್ಪಸಂಖ್ಯಾತರ ಸಚಿವ ಜಮೀರ್ ಅಹಮ್ಮದ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ತಾಲೂಕು ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷರಾದ ಕೌಡಳ್ಳಿ ಲೋಹಿತ್ ಮಾತನಾಡಿ, ಸಿದ್ದರಾಮಯ್ಯ ಅವರ ಸರ್ಕಾರ ಭ್ರಷ್ಟಚಾರ ಮತ್ತು ಲೂಟಿಕೋರ ಸರ್ಕಾರವಾಗಿದೆ. ಕಾಂಗ್ರೆಸ್‌ರಾಜ್ಯದ ರೈತರ ಜಮೀನಿನ ಮೇಲೆ ಕಣ್ಣಿಟ್ಟಿದ್ದು, ಅಧಿಕಾರ ದಾಹಕ್ಕಾಗಿ ವಕ್ಫ್ ಮಂಡಲಿಯ ಆಸ್ತಿ ಕಬಳಕೆಯನ್ನು ಬೆಂಬಲಿಸುವ ಮೂಲಕ ರಾಜ್ಯದ ರೈತರನ್ನೇ ಬಲಿ ಕೊಡಲು ಹೊರಟಿದೆ ಎಂದು ಕಿಡಿಕಾರಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮಧು ಬೊಮ್ಮನಕೆರೆ, ಅಗ್ನಿ ಸೋಮಶೇಖರ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ನೇತ್ರಾವತಿ ಮಂಜುನಾಥ್, ಬಿಜೆಪಿ ವಕ್ತಾರ ಸಾ.ಸು.ವಿಶ್ವನಾಥ್, ಬಿಜೆಪಿ ನಗರ ಅಧ್ಯಕ್ಷ ದಿಂಬು ಲೋಕೇಶ್, ಯುವ ಮೋರ್ಚಾ ಅಧ್ಯಕ್ಷ ನಿಕಿಲ್, ಪುರಸಭಾ ಸದಸ್ಯೆ ವನಜಾಕ್ಷಿ, ಪಕ್ಷದ ಮುಖಂಡರಾದ ಶಿವಪ್ರಕಾಶ್ ಧನಾವತ್, ನವೀನ್ ಶೆಟ್ಟಿ, ಷಣ್ಮುಖ, ಆಶೀರ್ವಾದ್, ಬಿಜೆಪಿ ಶಕ್ತಿ ಕೇಂದ್ರ ಮತ್ತು ಬೂತ್ ಅಧ್ಯಕ್ಷರು, ಮಹಿಳಾ ಮೋರ್ಚಾ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.