More

  ಸಿಐಟಿಯು ಕಾರ್ಯಕರ್ತರಿಂದ ಪ್ರತಿಭಟನೆ

  ಸಿದ್ದಾಪುರ: ಕಾರ್ಮಿಕ ವಿರೋಧಿ ನೀತಿ, ಬೆಲೆ ಏರಿಕೆ ವಿರೋಧಿಸಿ ಗುರುವಾರ ಸಿದ್ದಾಪುರದ ಬಸ್ ನಿಲ್ದಾಣದಲ್ಲಿ ಸಿಐಟಿಯು ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರಲ್ಲದೆ, ಪ್ರಧಾನಿಗೆ ಪತ್ರ ಬರೆದು ಹಲವು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.


  ಸಿಐಟಿಯು ಸಂಘಟನೆಯ ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಮಾತನಾಡಿ, 2024ರ ಲೋಕಸಭಾ ಚುನಾವಣೆ ಮತ್ತೆ ಪ್ರಾರಂಭವಾಗುತ್ತಿದೆ. ಎನ್‌ಡಿಎ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು 10 ವರ್ಷಗಳಾಗಿವೆ. ಚುನಾವಣೆಗೂ ಮೊದಲು ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ತಿಳಿಸಿದಂತೆ 2 ಕೋಟಿ ಉದ್ಯೋಗದ ಸೃಷ್ಟಿ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ., ಡಾ.ಸ್ವಾಮಿನಾಥನ್ ಅವರ ಶಿಫಾರಸಿನಂತೆ ಬೆಂಬಲ ಬೆಲೆಯ ಕಾನೂನು ರಚಿಸುವುದಾಗಿ ಹೇಳಿ ವರ್ಷಗಳೇ ಕಳೆದಿವೆ. ಆದರೆ ‘ಸಬ್ ಕಾ ಸಾಥ್’ ಎಂದು ಜನಸಾಮಾನ್ಯರು ಕೊಂಡುಕೊಳ್ಳುವ ಸಾಮರ್ಥ್ಯವನ್ನು ಕುಗ್ಗಿಸಿ, ಆಹಾರ, ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ಅನುದಾನಗಳನ್ನು ಹೆಚ್ಚಳ ಮಾಡುವ ಬದಲಿಗೆ ಅನುದಾನ ಕಡಿತ ಮಾಡಿ ಆರೋಗ್ಯ ಮತ್ತು ಶಿಕ್ಷಣವನ್ನು ಸಂಪೂರ್ಣವಾಗಿ ಖಾಸಗೀಕರಣಗೊಳಿಸಿದ್ದಾರೆ. ಜನರಿಗೆ 2700 ಕ್ಯಾಲರಿ ಆಹಾರ ಪ್ರತಿದಿನ ಸಿಗದ ಪರಿಣಾಮ ಇಂದು ಭಾರತ ಹಸಿವಿನ ಸೂಚ್ಯಂಕದಲ್ಲಿ 111ನೇ ಸ್ಥಾನಕ್ಕೆ ಕುಸಿದಿದೆ ಎಂದು ಆರೋಪಿಸಿದರು.


  ಆರ್ಥಿಕ ಬಿಕ್ಕಟ್ಟನ್ನು ಕರೊನಾ ಮುಂಚಿತವಾಗಿದ್ದ ಬೆಳವಣಿಗೆಗೆ ಹೋಲಿಸದೆ ಕರೊನಾ ನಂತರದ ಬೆಳವಣಿಗೆಗೆ ಹೋಲಿಸಿ ಆರ್ಥಿಕ ಬಿಕ್ಕಟ್ಟು ಸುಧಾರಿಸಿದೆ ಎಂದು ಹೇಳಲಾಗುತ್ತಿದೆ. ಆರ್ಥಿಕ ಬಿಕ್ಕಟ್ಟು ಸುಧಾರಿಸಿದ್ದರೆ ಕಾರ್ಮಿಕ ಕಾನೂನುಗಳ ತಿದ್ದುಪಡಿ ಮಾಡಿ ಮುಷ್ಕರದ ಹಕ್ಕು ಮತ್ತು ಸಾಮೂಹಿಕ ಚೌಕಾಸಿಯ ಹಕ್ಕನ್ನು ಏಕೆ ಕಸಿಯಲಾಗುತ್ತಿದೆ ಎಂದು ಪ್ರಶ್ನಿಸಿದರು.


  ಸರ್ಕಾರ ಸಂಪೂರ್ಣವಾಗಿ ತನ್ನ ನೀತಿಗಳನ್ನು ಬದಲಾಯಿಸಬೇಕೆಂದು ಒತ್ತಾಯಿಸಿ ದೇಶದ ಎಲ್ಲ ರೈತರು, ಕೂಲಿಕಾರರು, ಕಾರ್ಮಿಕರು ಒಂದಾಗಿ ಚಳವಳಿ ನಡೆಸುತ್ತಿದ್ದಾರೆ. ಇಂತಹ ಚಳವಳಿಗಳ ಮೇಲೆ ದೆಹಲಿಯಲ್ಲಿ ಪೊಲೀಸ್ ದಬ್ಬಾಳಿಕೆ ಮಾಡಿರುವುದನ್ನು ಖಂಡನೀಯ ಎಂದರು.


  ಬರಪೀಡಿತ ಕರ್ನಾಟಕ ರೈತರ ನೆರವಿಗೆ ಕೇಂದ್ರ ಸರ್ಕಾರ ಮುಂದಾಗಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟು ಸಾವಿರಾರು ಜನರು ಸಹಿ ಮಾಡಿರುವ ಪತ್ರವನ್ನು ಅಂಚೆ ಕಚೇರಿಗಳ ಮೂಲಕ ಪ್ರಧಾನಮಂತ್ರಿಗೆ ಕಳಿಸಲು ಜಿಲ್ಲಾಧಿಕಾರಿಗೆ ಕಳಿಸಲಾಯಿತು.


  ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಸಿ.ಸಾಬು, ಜಿಲ್ಲಾ ಖಜಾಂಚಿ ಕುಟ್ಟಪ್ಪನ್, ಉಪಾಧ್ಯಕ್ಷ ಮಹದೇವ್, ಮುಖಂಡರಾದ ಟಿ.ಟಿ. ಉದಯನ್, ಚಂದ್ರನ್, ಶಿವರಾಮನ್, ಮುಸ್ತಫಾ, ಮಹದೇವ ಎಂ.ಜಿ ಜೋಸ್, ಶೌಕತ್ ಮತ್ತಿತರರು ಪಾಲ್ಗೊಂಡಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts