ಸಂಸ್ಕೃತಿ ರಕ್ಷಣೆಗೆ ಉತ್ಸವ ಅವಶ್ಯ

ಹುಬ್ಬಳ್ಳಿ: ಉತ್ಸವಗಳು ವೈಭವದ ಪ್ರದರ್ಶನ ಜತೆಗೆ ಸಂಸ್ಕೃತಿಯನ್ನು ಸಂರಕ್ಷಿಸುವ ಕಾರ್ಯಕ್ರಮಗಳಾಗಿವೆ ಎಂದು ಶ್ರೀ ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

ತಾಲೂಕಿನ ವರೂರು ಗ್ರಾಮದ ಶ್ರೀ ವೀರೇಶ್ವರ ಶಾಂತಾಶ್ರಮದಲ್ಲಿ ಲಿಂಗೈಕ್ಯ ವೀರೇಶ್ವರ ಶರಣರ ಪುಣ್ಯಾರಾಧನೆ ಶತಮಾನೋತ್ಸವದ ನಿಮಿತ್ತ ಶುಕ್ರವಾರ ಜರುಗಿದ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಧರ್ಮಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ದೇಶದ ಪ್ರತಿಯೊಂದು ಗ್ರಾಮಗಳಲ್ಲಿ ವಿಶಿಷ್ಟ ಜಾನಪದ ಕಲೆಗಳು ಇರುವುದನ್ನು ನಾವು ಕಾಣುತ್ತೇವೆ. ಉತ್ಸವಗಳಲ್ಲಿ ಜಾನಪದ ಕಲಾಕಾರರು ತಮ್ಮ ಕಲೆಗಳನ್ನು ಪ್ರದರ್ಶಿಸುವುದನ್ನು ನೋಡುತ್ತೇವೆ. ಹೀಗೆ ವಿವಿಧ ಪ್ರಸಂಗಗಳಲ್ಲಿ ನಡೆಯುವ ಉತ್ಸವಗಳಲ್ಲಿ ಕಲೆಗಳ ಪ್ರದರ್ಶನ ಕಾರ್ಯಕ್ರಮ ಆಯೋಜಿಸುವುದರಿಂದ ಆ ಕಲೆ ಹಾಗೂ ಕಲಾಕಾರರನ್ನು ಸಂರಕ್ಷಿಸಿದಂತಾಗುತ್ತದೆ ಎಂದು ಶ್ರೀಗಳು ಹೇಳಿದರು.

ಅಂತೆಯೇ ಉತ್ಸವಗಳು ವೈಭವದ ಸಂಕೇತಗಳಾಗಿರದೇ ಸಂಸ್ಕೃತಿ ಹಾಗೂ ಪ್ರಾಚೀನ ಜಾನಪದ ಕಲೆಗಳ ಸಂರಕ್ಷಣೆ ಮಾಡುತ್ತಿವೆ. ಪ್ರಾಚೀನ ಕಾಲದಿಂದಲೂ ನಮ್ಮ ದೇಶದಲ್ಲಿ ಗುರುಗಳನ್ನು ಹಾಗೂ ದೇವರನ್ನು ಪಲ್ಲಕ್ಕಿಯಲ್ಲಿ ಬರಮಾಡಿಕೊಳ್ಳುವ ಪದ್ಧತಿ ನಡೆದುಕೊಂಡು ಬಂದಿದೆ. ಗ್ರಾಮದ ಎಲ್ಲ ವರ್ಗದ ಜನರು ಯಾವುದೇ ಭೇದವಿಲ್ಲದೆ ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದನ್ನು ನಾವು ಕಾಣಬಹುದಾಗಿದೆ ಎಂದರು.

ಪಂಚಪೀಠದ ಜಗದ್ಗುರುಗಳನ್ನು ಗ್ರಾಮದಲ್ಲಿ ಪ್ರಥಮ ಬಾರಿಗೆ ಬರಮಾಡಿಕೊಳ್ಳುವಾಗ ಅಡ್ಡಪಲ್ಲಕ್ಕಿಯಲ್ಲಿ ಸ್ವಾಗತಿಸುವ ಪದ್ಧತಿ ಪ್ರಾಚೀನವಾದುದು. ಆದರೆ, ಇತ್ತೀಚೆಗೆ ಪಂಚಪೀಠದ ಜಗದ್ಗುರುಗಳು ಆ ಪದ್ಧತಿಗೆ ವಿನಾಯಿತಿ ಕೊಟ್ಟು, ಭಕ್ತರು ತಮ್ಮ ಅಪೇಕ್ಷೆಯಂತೆ ಸ್ವಾಗತಿಸಬಹುದು ಎಂಬ ಸ್ವಾತಂತ್ರ್ಯ ನೀಡಿದ್ದಾರೆ ಎಂದು ಶ್ರೀಗಳು ತಿಳಿಸಿದರು.

ಗ್ರಾಮದ ಹಳೇ ಮಠದಿಂದ ಪ್ರಾರಂಭವಾದ ಅಡ್ಡಪಲ್ಲಕ್ಕಿ ಮಹೋತ್ಸವವು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಊರಿನ ಹೊರ ಭಾಗದಲ್ಲಿರುವ ನೂತನ ಮಠದವರೆಗೆ ಅತ್ಯಂತ ವಿಜೃಂಭಣೆಯಿಂದ ಆಗಮಿಸಿತು.