ಸಂಸ್ಕೃತಿಯ ರಕ್ಷಣೆ ಇಂದಿನ ಅಗತ್ಯ

ಕುಮಟಾ: ಕೇವಲ ಆದಾಯ ಗಳಿಕೆಯಲ್ಲಿ ಮಾತ್ರವಲ್ಲದೇ ನಮ್ಮ ನೆಲ, ಜಲ, ಸಂಸ್ಕೃತಿಯ ಉಳಿಕೆಯಲ್ಲೂ ಮನಸ್ಸುಗಳು ಜಾಗೃತವಾಗಬೇಕಿದೆ ಎಂದು ಹಿರೇಹಡಗಲಿ ಹಾಲಸ್ವಾಮಿ ಮಹಾಸಂಸ್ಥಾನದ ಶ್ರೀ ಅಭಿನವ ಹಾಲಸ್ವಾಮೀಜಿಗಳುಗಳು ಅಭಿಪ್ರಾಯಪಟ್ಟರು.

ಮಣಕಿ ಮೈದಾನದಲ್ಲಿ ಯುಗಾದಿ ಉತ್ಸವ ಸಮಿತಿಯಿಂದ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಭಾರತೀಯ ಕಾಲಗಣನೆಯಲ್ಲಿ ಬರುವ ಪಂಚಾಂಗದಲ್ಲಿ ಎಲ್ಲರ ಹಿತವಿದೆ ಎಂದರು.

ಪ್ರಾಸ್ತಾವಿಕ ಮಾತನಾಡಿದ ಸಮಿತಿಯ ಸಂಚಾಲಕ ಮುರಲೀಧರ ಪ್ರಭು, ಭಾರತೀಯ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸುವ ಜೊತೆಗೆ ಈ ನೆಲ-ಜಲದ ತತ್ಕಾಲದ ಅಗತ್ಯತೆಗಳನ್ನೂ ನಿಭಾಯಿಸುವ ಹೊಣೆ ನಮ್ಮ ಮೇಲಿದೆ. ವಾಲಗಳ್ಳಿಯ ನೀರ್​ಕೆರೆ ಹಾಗೂ ಪಟ್ಟಣದ ಜೋಡುಕೆರೆ ಹೂಳೆತ್ತಿ ಸ್ವಚ್ಛಗೊಳಿಸಿ ಆವರಣ ನಿರ್ವಿುಸಿ ಅಭಿವೃದ್ಧಿ ಪಡಿಸಿದ್ದೇವೆ ಎಂದರು.

ಬೇವು-ಬೆಲ್ಲ ವಿತರಣೆ, ಮಾತಾಪಿತೃ ಪೂಜೆ ನಡೆಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧಕರಾದ ಅಜಯ್ ಪಿಕಳೆ, ಮೋಹನ ನಾಯ್ಕ, ಶಶಿಕುಮಾರ ನಾಯ್ಕ, ಮಂಜುನಾಥ ರೆಡ್ಡಿ, ಸಂದೇಶ ಹರಿಕಂತ್ರ, ಪ್ರಶಾಂತ ಕುಮಟಾಕರರನ್ನು ಯುಗಾದಿ ಸಿಂಚನ ಪ್ರಶಸ್ತಿಯಿತ್ತು ಸನ್ಮಾನಿಸಲಾಯಿತು.

ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ಎಸ್.ಜಿ. ನಾಯ್ಕ ಸ್ವಾಗತಿಸಿದರು. ವಿಘ್ನೇಶ ಶೆಟ್ಟಿ ಯುಗಾದಿ ಹಾಡು ಹಾಡಿದರು. ಡಾ. ಗೋಪಾಲಕೃಷ್ಣ ಹೆಗಡೆ ಪಂಚಾಂಗ ಶ್ರವಣ ನಡೆಸಿಕೊಟ್ಟರು. ಕೋಶಾಧ್ಯಕ್ಷ ಜಿ. ಎಸ್.ಹೆಗಡೆ ವಂದಿಸಿದರು. ಈಶ್ವರ ಭಟ್ಟ ನಿರೂಪಿಸಿದರು. ರಾಜುಶೆಟ್ಟಿ, ಅರಣು ಹೆಗಡೆ, ಕಿಟ್ಟ ನಾಯ್ಕ, ರೋಹಿದಾಸ ಗಾವಡಿ, ಅರುಣ ಮಣಕಿಕರ, ಗಜಾನನ ವೆಂಗುರ್ಲೆಕರ, ಡಾ. ಸುರೇಶ ಹೆಗಡೆ ಇನ್ನಿತರರು ಸಹಕರಿಸಿದರು. ಬಳಿಕ ’ಸಂಪೂರ್ಣ ಕುರುಕ್ಷೇತ್ರ’ ನೃತ್ಯವೈಭವ ಕಾರ್ಯಕ್ರಮ ನಡೆಯಿತು.

ಯುಗಾದಿ ಉತ್ಸವ ಸಮಿತಿಯ ರಾಜುಶೆಟ್ಟಿ, ಸುರೇಶ ಭಟ್ಟ. ಕಿಟ್ಟ ನಾಯ್ಕ, ಹೇಮಂತಕುಮಾರ ಗಾಂವಕರ, ವಿಜಯಾನಂದ ಗೋಳಿ, ತಿಮ್ಮಪ್ಪ ಮುಕ್ರಿ ಇನ್ನಿತರರು ಇದ್ದರು.

ಶೋಭಾಯಾತ್ರೆ
ದೇವರಹಕ್ಕಲ ಶಾಂತಿಕಾ ಪರಮೇಶ್ವರಿ ದೇವಸ್ಥಾನದಿಂದ ಮಣಕಿ ಮೈದಾನಕ್ಕೆ ಶೋಭಾಯಾತ್ರೆ ನಡೆಯಿತು. 18ಕ್ಕೂ ಹೆಚ್ಚು ಸಮಾಜಗಳಿಂದ 25ಕ್ಕೂ ಹೆಚ್ಚು ವಿವಿಧ ಸ್ತಬ್ಧಚಿತ್ರಣಗಳು, ವಾದ್ಯ, ಕುಣಿತ ಸೇರಿದಂತೆ ಪಾರಂಪರಿಕ ವಿಶೇಷಗಳು ಗಮನಸೆಳೆಯಿತು. ವಾಯುಸೇನೆಯ ಪೈಲಟ್ ಅಭಿನಂದನ್ ವರ್ಧಮಾನ ಹಾಗೂ ಯುದ್ಧ ವಿಮಾನದ ಟ್ಯಾಬ್ಲೋ ಆಕರ್ಷಿಸಿತು.