ಶೃಂಗೇರಿ: ಸತ್ಯ, ಔದಾರ್ಯ, ದೇಶಪ್ರೇಮ, ಶೌರ್ಯ, ಕರುಣೆ, ಧರ್ಮ ಸಹಿಷ್ಣುತೆ, ಅಹಿಂಸೆಗಳು ಕನ್ನಡಿಗರ ಬದುಕನ್ನು ತಿದ್ದಿ ರೂಪಿಸಿದಂತಹ ಅಮೂಲ್ಯ ಮೌಲ್ಯಗಳು. ನಮ್ಮ ಸಂಸ್ಕೃತಿಯಿಂದ ಕರ್ನಾಟಕ ವಿಶಿಷ್ಟ ಸ್ಥಾನ ಪಡೆದಿದೆ ಎಂದು ಅಡ್ಡಗದ್ದೆ ಗ್ರಾಪಂ ಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಕರುವಾನೆ ಶ್ರೀನಿವಾಸ್‌ಮೂರ್ತಿ ಹೇಳಿದರು.
ಕಾವಡಿ ಕೃಷಿಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ತಾಲೂಕು ಕಸಾಪ, ಅಡ್ಡಗದ್ದೆ ಗ್ರಾಪಂ ಘಟಕ ಹಾಗೂ ಗ್ರಾಮ ಸಮ್ಮೇಳನ ಸಮಿತಿ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಗ್ರಾಪಂ ಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಿ.ಶ 450ರಲ್ಲಿ ದೊರೆತ ಹಲ್ಮಿಡಿ ಶಿಲಾಶಾಸನ ಕನ್ನಡದ ದೊಡ್ಡ ಶಾಸನ. ಕ್ರಿಸ್ತ ಪೂರ್ವದಿಂದ ಕನ್ನಡದಲ್ಲಿ ಜಾನಪದ ಸಾಹಿತ್ಯವಿದ್ದು ಕಳೆ ಕೀಳುವಾಗ, ತೊಟ್ಟಿಲು ತೂಗುವಾಗ, ಹಬ್ಬಗಳಲ್ಲಿ ಕೂಡಾ ಕನ್ನಡಿಗರು ಹಾಡಿ, ಕುಣಿದು ಸಂಭ್ರಮಿಸುತ್ತಿದ್ದರು. ಬಾದಾಮಿ ಚಾಲುಕ್ಯರ ಕಾಲದ ಏಳನೇ ಶತಮಾನದಲ್ಲಿ ಕನ್ನಡದ ಲಲಿತಸಾಹಿತ್ಯ ಆರಂಭವಾಗಿತ್ತು. ರಾಷ್ಟ್ರಕೂಟ ನೃಪತುಂಗ ಚಕ್ರವರ್ತಿ ಕಾಲದಲ್ಲಿ ರಚಿಸಿದ ಕವಿರಾಜ ಮಾರ್ಗ ಅನನ್ಯತೆಯನ್ನು ಸಾರಿದ ಅಪೂರ್ವ ಗ್ರಂಥ. ಛಾಂದೋಗ್ಯ ಉಪನಿಷತ್ತಿನಲ್ಲಿ ಬರುವ ಮಟಚಿ ಪದವು ಮಿಡತೆ ಎಂಬ ಕನ್ನಡ ಪದ. ಕ್ರಿ.ಪೂ ಮೂರನೇ ಶತಮಾನದ ಬ್ರಹ್ಮಗಿರಿ ಶಾಸನದಲ್ಲಿ ಇಸಲಿ ಎಂಬ ಅಚ್ಚ ಕನ್ನಡ ಪದವಿದೆ. ಇಂಥ ಅಪೂರ್ವ ಸಾಹಿತ್ಯದ ಕನ್ನಡಭಾಷೆಯ ಅಸ್ತಿತ್ವ ಉಳಿಸುವಲ್ಲಿ ಕನ್ನಡಿಗರ ಪಾತ್ರ ಉನ್ನತವಾದುದು ಎಂದು ಹೇಳಿದರು.
ಪ್ರಾಚೀನ ಮಾನವನ ಸಂಸ್ಕೃತಿಯ ಬೆಳವಣಿಗೆಯಲ್ಲಿ ಕೃಷ್ಣ, ಘಟಪ್ರಭ, ಮಲಪ್ರಭ, ತುಂಗಭದ್ರಾ, ಕಾವೇರಿ ನದಿಯ ದಂಡೆಗಳು ಮಹತ್ತರ ಪಾತ್ರ ವಹಿಸಿವೆ. ಬಾದಾಮಿ, ಐಹೊಳೆ, ಬನವಾಸಿ, ಪಟ್ಟದಕಲ್ಲು, ಶ್ರೀರಂಗಪಟ್ಟಣ ಮುಂತಾದ ಕ್ಷೇತ್ರಗಳು ಸಾಂಸ್ಕೃತಿಕ ನೆಲೆಬೀಡಾಗಿದ್ದು, ಕನ್ನಡ ಭಾಷೆ ಬೆಳವಣಿಗೆಗೆ ತಮ್ಮದೇ ಆದಂತಹ ಕೊಡುಗೆ ನೀಡುವಲ್ಲಿ ಯಶಸ್ಸು ಕಂಡಿವೆ ಎಂದರು.
ಶ್ರೀ ಶಾರದಾಪೀಠದ ಅಧಿಕಾರಿ ಉಮೇಶ್ ಹರಿಹರ ಮಾತನಾಡಿ, ದ್ರಾವಿಡ ಭಾಷೆ ಕನ್ನಡಕ್ಕೆ 1,200 ವರ್ಷಗಳ ಇತಿಹಾಸವಿದೆ. ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ನಮ್ಮೆಲ್ಲರ ಹೆಮ್ಮೆಯ ಭಾಷೆ. ದೇಶದ ಎರಡನೇ ಭಾಷೆಯಾಗಿ ಹೊರಹೊಮ್ಮಿದ ಕನ್ನಡಭಾಷೆಗೆ ಹಂಪಿಯ ಭುವನೇಶ್ವರಿ ತಾಯಿ. 1915ರಲ್ಲಿ ಸ್ಥಾಪನೆಗೊಂಡ ಕನ್ನಡ ಸಾಹಿತ್ಯ ಪರಿಷತ್ ಭಾಷೆಯ ಅಸ್ಮಿತೆ ಕಾಪಾಡಲು ನಿರಂತರ ಪರಿಶ್ರಮಿಸಿದೆ ಎಂದರು.
ಪ್ರತಿ ಕನ್ನಡಿಗನೂ ಕನ್ನಡ ಪುಸ್ತಕಗಳನ್ನು ಖರೀದಿಸಿ ಓದುವ ಮೂಲಕ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಬೇಕು. ಜಗತ್ತನ್ನು ತಂತ್ರಜ್ಞಾನ ಆಳುತ್ತಿದೆ. ಇಂತಹ ಸನ್ನಿವೇಶದಲ್ಲಿ ಕನ್ನಡಿಗರು ಒಗ್ಗೂಡಿ ಭಾಷೆಯ ಅಸ್ತಿತ್ವ ಉಳಿಸಬೇಕು. ಆಂಗ್ಲ ವ್ಯಾಮೋಹಕ್ಕೆ ಒಳಗಾಗಿರುವ ನಾವು ಮಾತೃಭಾಷೆ ಮರೆಯಬಾರದು. ಕನ್ನಡ ಉನ್ನತೀಕರಣಕ್ಕೆ ಸಂವಿಧಾನದ ಮೂರು ಅಂಗಗಳು ಹೆಚ್ಚಿನ ಕಾಳಜಿಯಿಂದ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಗ್ರಾಪಂ ಉಪಾಧ್ಯಕ್ಷೆ ವಿನೋದಾ ಬಾಚಿನಕೊಪ್ಪ, ಕಸಾಪ ಗ್ರಾಪಂ ಘಟಕದ ಅಧ್ಯಕ್ಷ ಶ್ರೀಧರರಾವ್ ಅಣ್ಣುಕುಡಿಗೆ, ಹೋಬಳಿ ಘಟಕದ ಅಧ್ಯಕ್ಷ ದಿನೇಶ್ ಅಂಗುರ್ಡಿ, ಪಿಎಸಿಎಸ್ ನಿರ್ದೇಶಕ ತಿಮ್ಮಪ್ಪ, ಸ್ವಾಗತ ಸಮಿತಿ ಉಪಾಧ್ಯಕ್ಷ ಕೃಷ್ಣಮೂರ್ತಿ ಹೆಬ್ಬಿಗೆ, ಗ್ರಾಪಂ ಮಾಜಿ ಅಧ್ಯಕ್ಷ ಕೆ.ಡಿ.ಸುರೇಶ್, ತಾಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಅಂಬ್ಲೂರು ರಾಮಕೃಷ್ಣ ಇದ್ದರು.
ಸಮ್ಮೇಳನದ ರಾಷ್ಟ್ರಧ್ವಜಾರೋಹಣವನ್ನು ತಹಸೀಲ್ದಾರ್ ಅನೂಪ್ ಸಂಜೋಗ್ ನೆರವೇರಿಸಿದರು. ಪರಿಷತ್ತಿನ ಧ್ವಜಾರೋಹಣವನ್ನು ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ ಹಾಗೂ ನಾಡಧ್ವಜಾರೋಹಣವನ್ನು ಅಡ್ಡಗದ್ದೆ ಗ್ರಾಪಂ ಅಧ್ಯಕ್ಷ ಸುಂದರೇಶ್ ಹೆಬ್ಬಿಗೆ ನೆರವೇರಿಸಿದರು. ಕವಿಲುಕುಡಿಗೆ ಬಸ್ ನಿಲ್ದಾಣದಿಂದ ಸಮ್ಮೇಳನ ಸ್ಥಳದ ತನಕ ಸಾಗಿ ಬಂದ ಮೆರವಣಿಗೆಯನ್ನು ತಾಲೂಕು ಕಸಾಪ ಗೌರವ ಸಲಹೆಗಾರ ಬಾ.ರಾ.ಶ್ರೀಕಂಠಯ್ಯ ಉದ್ಘಾಟಿಸಿದರು. ವಸ್ತುಪ್ರದರ್ಶನಗಳ ಮಳಿಗೆಯನ್ನು ಅಡ್ಡಗದ್ದೆ ಪಿಎಸಿಎಸ್ ಅಧ್ಯಕ್ಷ ಬೇಗಾನೆ ಪ್ರಸನ್ನ ಉದ್ಘಾಟಿಸಿದರು. ಸಮ್ಮೇಳನಾಧ್ಯಕ್ಷರ ಭಾಷಣ ಪ್ರತಿಯನ್ನು ಜಿಲ್ಲಾ ಕಸಾಪ ಸಂಚಾಲಕಿ ಪುಷ್ಪಾ ಲಕ್ಷ್ಮೀನಾರಾಯಣ್ ಬಿಡುಗಡೆಗೊಳಿಸಿದರು.