ಬೈಲಹೊಂಗಲ: ಬಾಳು ಹಸನಾಗಲು ಸಂಸ್ಕಾರ ನೀಡಿ, ಬದುಕು ಪಾವನಗೊಳಿಸುವ ಶಕ್ತಿ ತಂದೆ-ತಾಯಿ ಮತ್ತು ಗುರುವಿಗಿದೆ. ಅವರೇ ಶ್ರೇಷ್ಠ ವ್ಯಕ್ತಿಗಳು ಎಂದು ಶಾಸಕ ಮಹಾಂತೇಶ ದೊಡಗೌಡರ ಹೇಳಿದರು.
ತಾಲೂಕಿನ ಹಣ್ಣಿಕೇರಿಯಲ್ಲಿ ಗುರವಾರ ಏರ್ಪಡಿಸಿದ್ದ ಹಿರೇಮಠದ ಜಾತ್ರಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾಡಾ ಅಧ್ಯಕ್ಷ ಡಾ. ವಿಶ್ವನಾಥ ಪಾಟೀಲ ಮಾತನಾಡಿ, ಜನ್ಮ ನೀಡಿದ ತಂದೆ-ತಾಯಿಯನ್ನು ಸದಾ ಗೌರವಿಸುತ್ತ ಅವರ ರಕ್ಷಣೆ ಮಾಡಬೇಕು. ಪಾಲಕರನ್ನು ವೃದ್ಧಾಶ್ರಮಕ್ಕೆ ತಳ್ಳುವ ಮನೋಭಾವ ಸರಿ ಅಲ್ಲ ಎಂದರು. ಬೈಲಹೊಂಗಲ ಮೂರು ಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಯುವಕರು ನಮ್ಮ ಶ್ರೇಷ್ಠ ಸಂಸ್ಕೃತಿ ಅಳವಡಿಸಿಕೊಂಡು ಆರೋಗ್ಯಭರಿತ ಜೀವನ ಸಾಗಿಸಬೇಕು ಎಂದರು. ಹಿರೇಮಠದ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ, ಗಂದಿಗವಾಡ ರಾಜಗುರು ಹಿರೇಮಠದ ಮೃತ್ಯುಂಜಯ ಸ್ವಾಮೀಜಿ ಪ್ರವಚನ ನೀಡಿದರು. ಗ್ರಾಪಂ ಅಧ್ಯಕ್ಷೆ ನೀಲವ್ವ ಶಂಕರಗೌಡ ಪಾಟೀಲ, ರಮೇಶ ಪರವಿನಾಯ್ಕರ, ಶ್ಯಾಮಸುಂದರ ಶಿಲೇದಾರ, ಸಿದ್ದು ವಾರಿ, ಜಗದೀಶ ಪಾಟೀಲ ಇತರರಿದ್ದರು.