ಹೂವಿನಹಡಗಲಿ: ದೆಹಲಿಯಲ್ಲಿ ಕಾಂಗ್ರೆಸ್ ಕಚೇರಿ ಉದ್ಘಾಟನೆ ಸಂದರ್ಭದಲ್ಲಿ ದೇಶದ ಅವಹೇಳನ ಮಾಡಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿ ಪಟ್ಟಣದ ಶಾಸ್ತ್ರಿ ವೃತ್ತದಲ್ಲಿ ಬಿಜೆಪಿ ಯುವಮೋರ್ಚಾದಿಂದ ಶುಕ್ರವಾರ ಪ್ರತಿಭಟನೆ ನಡೆಸಿ ಪೊಲೀಸರಿಗೆ ಮನವಿ ಸಲ್ಲಿಸಲಾಯಿತು.
ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದ್ ಜಾಡರ್ ಮಾತನಾಡಿ, ದೇಶದಲ್ಲಿ ಸುಸಜ್ಜಿತವಾಗಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ನಡೆ ಸಹಿಸಿಕೊಳ್ಳಲಾಗದೆ ನಾವು ದೇಶದ ವಿರುದ್ಧ ಹೋರಾಟ ನಡೆಸಬೇಕು ಎಂಬ ಹೇಳಿಕೆ ನೀಡಿರುವ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.
ಯುವ ಮೋರ್ಚಾ ತಾಲೂಕು ಅಧ್ಯಕ್ಷ ಪುನೀತ್ ದೊಡ್ಡಮನಿ ಮಾತನಾಡಿ, ಕಾಂಗ್ರೆಸ್ಸಿಗರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ ಎಂದು ಹೇಳುತ್ತಾರೆ. ಆದರೆ ಅಂದಿನ ಕಾಂಗ್ರೆಸಿಗರೂ ಈಗಿಲ್ಲ. ಈಗ ಬಿಜೆಪಿ ಆಡಳಿತವನ್ನು ನೋಡಲಾಗದೆ. ನಾವು ಬಿಜೆಪಿ, ಆರ್‌ಎಸ್‌ಎಸ್ ವಿರುದ್ಧ ಹೋರಾಟ ಮಾಡುವುದಲ್ಲ ದೇಶದ ವಿರುದ್ಧ ಹೋರಾಟ ಮಾಡಬೇಕು ರಾಹುಲ್ ಗಾಂಧಿ ಹೇಳಿರುವುದು ದೇಶ ದ್ರೋಹಿ ನಡೆಯಾಗಿದೆ. ರಾಹುಲ್ ವಿರುದ್ಧ ಕ್ರಮ ವಹಿಸಿ ಸಂವಿಧಾನ ರಕ್ಷಿಸಬೇಕು ಎಂದು ಒತ್ತಾಯಿಸಿದರು.