ಸಂಸದ ನಳಿನ್ ಗಡೀಪಾರಿಗೆ ಪಟ್ಟು

ಮಂಗಳೂರು: ಗಾಂಧೀಜಿ ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆ ಪರ ಟ್ವೀಟ್ ಮಾಡಿದ, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಗಡಿಪಾರು ಮಾಡಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆಗ್ರಹಿಸಿದರು.

ನಳಿನ್ ಕುಮಾರ್ ಹಾಕಿದ ಅವಹೇಳನಕಾರಿ ಟ್ವೀಟ್ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಶನಿವಾರ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ವಿಶ್ವದ 140 ರಾಷ್ಟ್ರಗಳಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆ ಇದೆ. ಅವರ ಹುಟ್ಟು ಹಬ್ಬವನ್ನು ಪ್ರಪಂಚಾದ್ಯಂತ ಅಹಿಂಸಾ ದಿನವಾಗಿ ಆಚರಿಸುತ್ತಾರೆ. ಅಂತಹ ಮಹಾತ್ಮರ ಬಗ್ಗೆ ನಳಿನ್ ಕೀಳು ಭಾವನೆ ವ್ಯಕ್ತಪಡಿಸಿರುವುದು ಸರಿಯಲ್ಲ. ಗಾಂಧೀಜಿ ಹೋರಾಟದಿಂದ ಸ್ವಾತಂತ್ರೃ ಲಭಿಸಿ ಪ್ರಜಾಪ್ರಭುತ್ವ ದೇಶವಾದ ಪರಿಣಾಮ ಇಂದು ಮೋದಿ ಪ್ರಧಾನಿ, ನಳಿನ್ ಸಂಸದರಾಗಿ ಮೆರೆಯುತ್ತಿದ್ದಾರೆ ಎಂದರು.
ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಮಾತನಾಡಿ, ನಳಿನ್ ಸಂವಿಧಾನದ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಮುಂದೆ ಇಂತಹ ಮಾತುಗಳನ್ನಾಡದಂತೆ ಎಚ್ಚರಿಕೆ ನೀಡಬೇಕು ಎಂದು ಒತ್ತಾಯಿಸಿದರು.

ಕೆಪಿಸಿಸಿ ಸದಸ್ಯ ಸುರೇಶ್ ಬಲ್ಲಾಳ್, ಮನಪಾ ಮುಖ್ಯಸಚೇತಕ ಶಶಿಧರ್ ಹೆಗ್ಡೆ, ದ.ಕ ಜಿಲ್ಲಾ ಉಪಾಧ್ಯಕ್ಷ ಬಾಲರಾಜ್ ರೈ, ಬ್ಲಾಕ್ ಅಧ್ಯಕ್ಷರಾದ ಬೇಬಿ ಕುಂದರ್, ಸದಾಶಿವ ಶೆಟ್ಟಿ, ವಿಶ್ವಾಸ್ ಕುಮಾರ್ ದಾಸ್, ಅಪ್ಪಿ, ಜೆಸಿಂತಾ ಆಲ್ಫ್ರೆಡ್, ಶಕುಂತಲಾ ಕಾಮತ್, ಆಶಾ ಡಿಸಿಲ್ವ, ವಾಸು ಪೂಜಾರಿ, ರತಿಕಲಾ ಕೊಟ್ಟಾರಿ, ವೆಂಕಪ್ಪ ಪೂಜಾರಿ, ಬಿ.ಎಂ.ಅಬ್ಬಾಸ್ ಅಲಿ, ಅಶ್ರ್ ಸೇವಾದಳ, ಎ ಸಿ.ವಿನಯರಾಜ್, ರಮಾನಂದ ಪೂಜಾರಿ, ಟಿ.ಕೆ.ಸುಧೀರ್, ನೀರಜ್ ಪಾಲ್, ಗಣೇಶ್ ಪೂಜಾರಿ, ಸಂತೋಷ್ ಕುಮಾರ್ ಶೆಟ್ಟಿ, ನಝೀರ್ ಬಜಾಲ್, ಬಿ. ಎಂ.ಭಾರತಿ, ಸಿ.ಎಂ.ಮುಸ್ತಾ, ಎಂ.ಪಿ.ಮನುರಾಜ್, ಮಲಾರ್ ಮೋನು ಮತ್ತಿತರರು ಭಾಗವಹಿಸಿದ್ದರು. ಯು.ಎಚ್.ಖಾಲಿದ್ ಉಜಿರೆ ನಿರೂಪಿಸಿದರು. ಬಿ.ಎ.ಮಹಮ್ಮದ್ ಹನ್ೀ ವಂದಿಸಿದರು.

ಬಿಜೆಪಿ ಹೈಕಮಾಂಡ್ ಬೆಂಬಲದಿಂದ ಅನಂತ ಕುಮಾರ್ ಹೆಗಡೆ, ನಳಿನ್ ಕುಮಾರ್ ಕಟೀಲು ಮನಬಂದಂತೆ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ. ಅವರಿಗೆ ಪ್ರಧಾನಿ ಮೋದಿ ಆಶೀರ್ವಾದ ಇದೆ. ಮಹಾತ್ಮ ಗಾಂಧಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗಿಲ್ಲ.
ಬಿ.ರಮಾನಾಥ ರೈ ಮಾಜಿ ಸಚಿವ