ಸಂಸದರ ವಿರುದ್ಧ ಮುನಿಸು ದೆಹಲಿಗೆ ಶಿಫ್ಟ್

ಕೋಲಾರ: ಎಂಟನೇ ಗೆಲುವಿನೊಂದಿಗೆ ಸಂಸತ್ತಿಗೆ ಪ್ರವೇಶ ಮಾಡಿ ಇತಿಹಾಸ ನಿರ್ವಿುಸಲು ಇಚ್ಛಿಸಿರುವ ಕೆ.ಎಚ್.ಮುನಿಯಪ್ಪ ಅವರನ್ನು ಚುನಾವಣೆ ಅಖಾಡಕ್ಕೆ ಬರದಂತೆ ಮಾಡಲು ಕಾಂಗ್ರೆಸ್ಸಿನ ದೊಡ್ಡ ಪಡೆ ಲಾಬಿ ನಡೆಸುತ್ತಿದೆ.

ಸತತ ಏಳು ಬಾರಿ ಗೆದ್ದು ಸೋಲಿಲ್ಲದ ಸರದಾರ ಎಂದು ಕರೆಸಿಕೊಂಡಿರುವ ಮುನಿಯಪ್ಪ ವಿರುದ್ಧ ಕಾಂಗ್ರೆಸ್ಸಿಗರಿಗೆ ವೈಯುಕ್ತಿಕ ದ್ವೇಷ ಇಲ್ಲದಿದ್ದರೂ ರಾಜಕೀಯ ಕಾರಣಗಳಿಂದ ಅಂತರ ಕಾಯ್ದುಕೊಂಡಿರುವ ಮುಖಂಡರು ಮುನಿಯಪ್ಪ ಅವರ ನಾಗಾಲೋಟಕ್ಕೆ ಬ್ರೇಕ್ ಹಾಕಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

2-3 ವರ್ಷಗಳಿಂದ ಅದುಮಿಟ್ಟುಕೊಂಡಿದ್ದ ಅಗ್ನಿಜ್ವಾಲೆ ಉಗುಳುವ ಮೂಲಕ ತಮ್ಮ ತಾಕತ್ತು ತೋರಿಸಲು ಪಣತೊಟ್ಟಿರುವ ಮುನಿಯಪ್ಪ ವಿರೋಧಿಗಳು ನಮ್ಮ ಇಷ್ಟಕ್ಕೆ ವಿರುದ್ಧವಾಗಿ ಟಿಕೆಟ್ ನೀಡಿದಲ್ಲಿ ಕೋಲಾರ ಕ್ಷೇತ್ರ ಕೈ ತಪ್ಪಲಿದೆ ಎಂದು ಖಡಕ್ ಸಂದೇಶ ನೀಡಲು ದೆಹಲಿ ತಲುಪಿದ್ದಾರೆ.

ಇಷ್ಟು ದಿನ ಮುನಿಯಪ್ಪ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸುವ ಮೂಲಕ ದನಿ ಎತ್ತಲು ಅಸಹಾಯಕರಾಗಿದ್ದ ಇನ್ನಿತರರನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಸ್ಪೀಕರ್ ಕೆ.ಆರ್.ರಮೇಶ್​ಕುಮಾರ್ ಕ್ಷೇತ್ರದಲ್ಲಿ ಬದಲಾವಣೆ ತರಲು ನಾಯಕತ್ವ ವಹಿಸಿಕೊಂಡಿರುವುದು ರಾಜಕೀಯ ವಲಯದಲ್ಲಿ ಸುಂಟರಗಾಳಿ ಏಳುವಂತೆ ಮಾಡಿದೆ.

ಕೋಲಾರ ಕ್ಷೇತ್ರ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿದ್ದು, ಕೆಜಿಎಫ್​ನಲ್ಲಿ ಮಗಳು ಶಾಸಕಿ ರೂಪಾ, ಮಾಲೂರಿನಲ್ಲಿ ಕೆ.ವೈ.ನಂಜೇಗೌಡ ಹೊರತುಪಡಿಸಿ ಇನ್ನುಳಿದ 5 ಕ್ಷೇತ್ರಗಳಲ್ಲಿ ಮುನಿಯಪ್ಪ ವಿರುದ್ಧ ಬಂಡಾಯ ಕಂಡು ಬಂದಿದೆ. ದೆಹಲಿಯಲ್ಲಿ ಪ್ರಭಾವ ಬೀರಿ ಬಿ.ಫಾರಂ ತರುವ ಶಕ್ತಿ ಮುನಿಯಪ್ಪಗೆ ಇದೆ ಎಂಬುದನ್ನು ಅರಿತಿರುವ ವಿರೋಧಿಗಳು ಹೈಕಮಾಂಡ್ ಮೇಲೆ ಒತ್ತಡ ತರಲು ಮುಂದಾಗಿದ್ದಾರೆ.ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ಕೆಲವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಹಾಗೂ ಇತರ ನಾಯಕರು, ವಿರೋಧಿ ಅಲೆ ಹೆಚ್ಚಾಗಿರುವುದರಿಂದ ಅಭ್ಯರ್ಥಿ ಬದಲಾಯಿಸುವುದು ಸೂಕ್ತವೆಂದು ತಿಳಿಸಿದ್ದರೂ ಉತ್ತರ ಸಿಗದಿರುವುದರಿಂದ ಶಾಸಕರು ಮತ್ತು ಪಕ್ಷದಲ್ಲಿ ಪ್ರಮುಖ ಹುದ್ದೆಗಳನ್ನು ಹೊಂದಿರುವ ಟೀಂ ಜತೆಗೆ ರಮೇಶ್​ಕುಮಾರ್ ದೆಹಲಿಗೆ ತೆರಳಿದ್ದಾರೆೆ. ಬುಧವಾರ ಮಧ್ಯಾಹ್ನ ದೆಹಲಿ ತಲುಪಿರುವ ತಂಡದಲ್ಲಿ ಮುಳಬಾಗಿಲು ಶಾಸಕ ಎಚ್.ನಾಗೇಶ್, ಬಂಗಾರಪೇಟೆಯ ಎಸ್.ಎನ್. ನಾರಾಯಣಸ್ವಾಮಿ, ಶಿಡ್ಲಘಟ್ಟದ ವಿ.ಮುನಿಯಪ್ಪ, ಎಂಎಲ್​ಸಿ ನಜೀರ್ ಅಹಮ್ಮದ್, ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಸೇರಿಕೊಂಡಿದ್ದಾರೆ.

ಅಚ್ಚರಿಯ ಸಂಗತಿ ಎಂದರೆ ಮುನಿಯಪ್ಪ ಅವರ ಆಪ್ತರಲ್ಲಿ ಒಬ್ಬರಾದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಸಹ ನಿಯೋಗದಲ್ಲಿದ್ದು ಹೈಕಮಾಂಡ್​ಗೆ ತಮ್ಮ ಅಭಿಪ್ರಾಯ ತಿಳಿಸಲು ಇಚ್ಛಿಸಿರುವುದು ಕುತೂಹಲ ಮೂಡಿಸಿದೆ. ಎಐಸಿಸಿ ಅಧ್ಯಕ್ಷ ರಾಹುಲ್​ಗಾಂಧಿ ಚೆನ್ನೈಗೆ ಹೋಗಿದ್ದರಿಂದ ಭೇಟಿ ಸಾಧ್ಯವಾಗಿಲ್ಲ, ಗುರುವಾರ ಭೇಟಿಗೆ ಅವಕಾಶ ಸಿಗುವ ಸಾಧ್ಯತೆ ಇದೆ.

ಒಂದು ವೇಳೆ ಗುರುವಾರವೂ ರಾಹುಲ್ ಲಭ್ಯವಾಗದಿದ್ದರೆ ಸೋನಿಯಾ ಗಾಂಧಿಯನ್ನು ಭೇಟಿಯಾಗಿ ದೂರು ನೀಡುವ ಮೂಲಕ ರಾಹುಲ್ ಗಮನ ಸೆಳೆಯುವ ಉದ್ದೇಶ ಹೊಂದಲಾಗಿದೆ. ರಾಹುಲ್ ಮತ್ತು ಸೋನಿಯಾ ಅವರ ಭೇಟಿಗೆ ಅವಕಾಶ ಮಾಡಿಕೊಡುವಂತೆ ವೇಣುಗೋಪಾಲ್ ಅವರನ್ನು ಕೋರಲಾಗಿದ್ದು ಭೇಟಿಯಾಗುವವರೆಗೆ ದೆಹಲಿಯಲ್ಲೇ ಮೊಕ್ಕಾಂ ಹೂಡುವುದು ಅನಿವಾರ್ಯವಾಗಬಹುದು.