ಸಂಶೋಧನೆ, ಕೌಶಲ ಇದ್ದರೆ ನಿಶ್ಚಿತ ಗುರಿ

ಹುಬ್ಬಳ್ಳಿ: ಸಂಶೋಧನಾ ಪ್ರವೃತ್ತಿ ಅಳವಡಿಸಿಕೊಂಡರೆ ಮತ್ತು ಕೌಶಲ ಗಳಿಸಿದರೆ ಯಾವುದೇ ರಂಗದಲ್ಲಿ ನಿಶ್ಚಿತ ಗುರಿ ತಲುಪಲು ಸಾಧ್ಯ ಎಂದು ನಿವೃತ್ತ ಲೆಫ್ಟಿನಂಟ್ ಜನರಲ್ ರಮೇಶ ಹಲಗಲಿ ಅಭಿಪ್ರಾಯಪಟ್ಟರು.

‘ವಿಜಯವಾಣಿ’, ‘ದಿಗ್ವಿಜಯ ಸುದ್ದಿ ವಾಹಿನಿ’ ಮಾಧ್ಯಮ ಸಹಯೋಗದಲ್ಲಿ ನಗರದ ಕೆಎಲ್​ಇ ಸಂಸ್ಥೆಯ ಎಸ್​ಎಂಎಸ್​ಆರ್ ಎಂಬಿಎ ಮಹಾವಿದ್ಯಾಲಯದಿಂದ ಬಿವಿಬಿ ಬಯೋಟೆಕ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ನೋಸ್ಟಾಲ್ಜಿಯಾ-2019’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಕೈಗಾರಿಕೆಗಳ ಮಧ್ಯೆ ಸಾಮ್ಯತೆ ತರುವ ವ್ಯವಸ್ಥೆ ಆಗಬೇಕು. ಶಿಕ್ಷಣ ನೀತಿಗಳು ಕೈಗಾರಿಕೆಗಳು ಕೇಳುವ ಕೌಶಲವನ್ನು ವಿದ್ಯಾರ್ಥಿಗಳಿಗೆ ಕಲಿಸುವಂತಿರಬೇಕು. ಇದರಿಂದ ಮಾತ್ರ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ. ಪ್ರತಿಯೊಂದಕ್ಕೂ ಸ್ಪೂರ್ತಿ ಪಡೆಯಬೇಕು. ಹೊಸತನ್ನು ಸಂಶೋಧಿಸುವ ಕಲೆ ರೂಪಿಸಿಕೊಳ್ಳಬೇಕು. ಸಾಧನೆ ಮಾಡಿ, ದೇಶಕ್ಕೆ ಯೋಗ್ಯ ಕೊಡುಗೆಯನ್ನು ಸಮರ್ಪಿಸಬೇಕು ಎಂದು ಕಿವಿ ಮಾತು ಹೇಳಿದರು. ಅಲ್ಲದೇ ತಾವು ಸೈನ್ಯದಲ್ಲಿರುವಾಗ ಪಡೆದ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.

ಎಸ್​ಎಂಎಸ್​ಆರ್ ಎಂಬಿಎ ಮುಖ್ಯಸ್ಥ ಡಾ. ಎಸ್.ವಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ವಿನಾಯಕ ಬಣಕಾರ, ಪ್ರೊ. ಜಿ.ಎಸ್. ಹಿರೇಮಠ, ಪ್ರೊ. ನಾಗರಾಜ, ವಿದ್ಯಾರ್ಥಿ ಸಮನ್ವಯಕಾರರಾದ ಸ್ನೇಹಾ ಕಲ್ಯಾಣಕರ, ವಿನಾಯಕ ಕಲ್ಲಂಗಡಿ, ಇತರರು ಇದ್ದರು. ಬಳಿಕ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ಆರಂಭವಾದವು.