ಸಂಶೋಧನೆ, ಅಭಿವೃದ್ಧಿಯೇ ಶಕ್ತಿ

ಧಾರವಾಡ: ಮುಂದುವರಿದ ರಾಷ್ಟ್ರಗಳೊಂದಿಗೆ ಸಮನಾಗಿ ನಿಲ್ಲಲು ಭಾರತಕ್ಕೆ ಬಾಹ್ಯಾಕಾಶ ತಂತ್ರಜ್ಞಾನದಲ್ಲಿನ ಸಂಶೋಧನೆ ಮತ್ತು ಅಭಿವೃದ್ಧಿಯೇ ಶಕ್ತಿಯಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ನಿವೃತ್ತ ಅಧ್ಯಕ್ಷ ಪದ್ಮಶ್ರೀ ಎ.ಎಸ್. ಕಿರಣಕುಮಾರ ಹೇಳಿದರು.

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಕವಿವಿ ಆವರಣದ ಸುವರ್ಣ ಸಾಂಸ್ಕೃತಿಕ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿರುವ ಎರಡು ದಿನಗಳ ‘ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ’ ಸಮ್ಮೇಳನದ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರತಿಯೊಬ್ಬ ಮನುಷ್ಯನಲ್ಲಿ ಓರ್ವ ವಿಜ್ಞಾನಿ ಇರುತ್ತಾನೆ. ಇಂದು ಪ್ರಪಂಚದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಮೊಬೈಲ್ ಮೂಲಕ ಬೆರಳ ತುದಿಯಲ್ಲಿ ತಿಳಿದುಕೊಳ್ಳಬಹುದು. ಟಿಪ್ಪು ಸುಲ್ತಾನ್​ನ ಕಾಲದಲ್ಲೇ ಮೊದಲ ಬಾರಿಗೆ ರಾಕೆಟ್ ಉಡಾವಣೆ ಮಾಡಲಾಗಿತ್ತು. ಆಗಲೇ ಪಾಶ್ಚಾತ್ಯ ರಾಷ್ಟ್ರಗಳು ಅದನ್ನು ಅಳವಡಿಸಿಕೊಳ್ಳಲು ಮುಂದಾಗಿದ್ದವು. ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರಿ ರಾಕೆಟ್ ಮೂಲಕ ಅಂಚೆ ರವಾನೆಗೆ ಯತ್ನಿಸಿದ್ದರು ಎಂದರು.

ಬೆಳೆ ಇಳುವರಿ, ಚಂಡಮಾರುತ, ಹವಾಮಾನ, ಮಳೆ ಮಾಹಿತಿ ಸಿಗುತ್ತಿರುವುದು ತಂತ್ರಜ್ಞಾನದಿಂದ. ಚಂದ್ರಯಾನ, ಮಂಗಳಯಾನಕ್ಕೆ ರಾಕೆಟ್ ಉಡಾವಣೆಯ ಮೂಲಕ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುತ್ತಿದೆ. ಸಂಪನ್ಮೂಲ ಕೊರತೆ ಇದ್ದರೂ ನಿರ್ದಿಷ್ಟ ಗುರಿ ಇಟ್ಟುಕೊಂಡು ಪ್ರತಿ ಕ್ಷಣವೂ ಹೊಸದನ್ನು ಕಲಿಯುವ, ಸಂಶೋಧಿಸುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದರು.

ಸಮ್ಮೇಳ ಉದ್ಘಾಟಿಸಿ ಮಾತನಾಡಿದ ವಿಪ ಸಭಾಪತಿ ಬಸವರಾಜ ಹೊರಟ್ಟಿ, ವೈದ್ಯರು, ಇಂಜಿನಿಯರ್​ಗಳು ಸಿಗುತ್ತಾರೆ. ಆದರೆ, ವಿಜ್ಞಾನಿಗಳು ವಿರಳ. ಹಾಗಾಗಿ ಪಾಲಕರು ಮಕ್ಕಳಲ್ಲಿ ವಿಜ್ಞಾನ- ತಂತ್ರಜ್ಞಾನದ ಆಸಕ್ತಿ ಬೆಳೆಸಿ ವಿಜ್ಞಾನಿ ಗಳನ್ನು ತಯಾರು ಮಾಡಿ ದೇಶಕ್ಕೆ ಕೊಡುಗೆ ನೀಡಬೇಕು ಎಂದರು.

ವಿಜ್ಞಾನಿಗಳಿಗೆ ದೇಶ- ವಿದೇಶಗಳಲ್ಲಿ ಗೌರವವಿದೆ. ಅದಕ್ಕೆ ಇಸ್ರೋ ನಿವೃತ್ತ ಅಧ್ಯಕ್ಷ ಎ.ಎಸ್. ಕಿರಣಕುಮಾರ ಸಾಕ್ಷಿ. ಅವರು ನಮ್ಮ ದೇಶದ ಆಸ್ತಿ. ವಿದ್ಯಾರ್ಥಿಗಳು ಅವರನ್ನು ಆದರ್ಶವಾಗಿಟ್ಟುಕೊಳ್ಳಬೇಕು. 2004ರಲ್ಲಿ ತಾವು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವನಾಗಿದ್ದಾಗ ದೇಶದಲ್ಲೇ ಮೊದಲ ಬಾರಿ ಕರ್ನಾಟಕದಲ್ಲಿ ಐಟಿ ಅಕಾಡೆಮಿ ಸ್ಥಾಪಿಸಲಾಗಿತ್ತು ಎಂದು ಸ್ಮರಿಸಿದರು.

ಸಂಸದ ಪ್ರಲ್ಹಾದ ಜೋಶಿ ಮಾತನಾಡಿದರು. ಅಕಾಡೆಮಿ ಅಧ್ಯಕ್ಷ ಪದ್ಮಶ್ರೀ ಡಾ. ಎಸ್.ಕೆ. ಶಿವಕುಮಾರ, ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಪ್ರೊ. ಕೆ.ಬಿ. ಗುಡಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕವಿವಿ ಕುಲಪತಿ ಪ್ರೊ. ಪ್ರಮೋದ ಗಾಯಿ ಅಧ್ಯಕ್ಷತೆ ವಹಿಸಿದ್ದರು. ಡಾ. ಎಚ್.ಆರ್. ಕೃಷ್ಣಮೂರ್ತಿ, ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕ ಪ್ರೊ. ಎಸ್.ಎಂ. ಶಿವಪ್ರಸಾದ್, ಇತರರಿದ್ದರು. ಅಕಾಡೆಮಿ ಸಿಇಒ ಡಾ. ಎಂ.ಎಂ. ರಮೇಶ್ ಸ್ವಾಗತಿಸಿದರು. ಕುಲಸಚಿವ ಪ್ರೊ. ಕಲ್ಲಪ್ಪ ಹೊಸಮನಿ ವಂದಿಸಿದರು.