ಸಂಶೋಧನೆಯಿಂದ ಉತ್ಕೃಷ್ಟತೆ

ಧಾರವಾಡ: ಪದವಿ ಶಿಕ್ಷಣದ ಪುನಃಶ್ಚೇತನವಾಗಬೇಕಾದರೆ ಬೋಧಕರ ಮೇಲೆ ಹಣ ಹೂಡಿಕೆ ಮಾಡಬೇಕು. ಸಿಬ್ಬಂದಿ- ಬೋಧಕರು- ಸಂಶೋಧನೆಯಲ್ಲಿ ಉತ್ಕೃಷ್ಟತೆ ಸಾಧಿಸಬೇಕು ಎಂದು ಖ್ಯಾತ ಶಿಕ್ಷಣ ತಜ್ಞ ಡಾ. ಕೆ. ರಾಮಚಂದ್ರನ್ ಹೇಳಿದರು.

ನಗರದ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಭವನದಲ್ಲಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘವು ಕವಿವಿ ವಿಶ್ವವಿದ್ಯಾಲಯ ಧನಸಹಾಯ ಆಯೋಗ- ಎಚ್​ಆರ್​ಡಿ ಕೇಂದ್ರ, ನ್ಯಾಕ್ ಸಂಸ್ಥೆ, ಬೆಂಗಳೂರು ಸೆಂಟರ್ ಫಾರ್ ಎಜುಕೇಶನ್ ಆಂಡ್ ಸೋಶಿಯಲ್ ಸರ್ವೀಸ್ ಸಹಯೋಗದೊಂದಿಗೆ ಆಯೋಜಿಸಿರುವ ‘ಪದವಿ ಶಿಕ್ಷಣದ ಪುನಃಶ್ಚೇತನ’ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ನವದೆಹಲಿಯ ಶಿಕ್ಷಣ ಸಲಹಾ ಮಂಡಳಿ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ಸದಸ್ಯ ಡಾ. ಎಂ.ಕೆ. ಶ್ರೀಧರ ಮಾತನಾಡಿ, ಪ್ರಸ್ತುತ ದಿನಮಾನದಲ್ಲಿ ವಿದ್ಯಾರ್ಥಿಗಳ ವಿಚಾರಧಾರೆಗಳು ಉನ್ನತವಾಗಬೇಕು. ಅವರಲ್ಲಿ ಜ್ಞಾನಾರ್ಜನೆಯ ಜತೆಗೆ ಕೌಶಲ ವೃದ್ಧಿ ಆಗಬೇಕು. ಬ್ರಿಟಿಷರು ಬಿಟ್ಟು ಹೋದ ಎಸಿಎಸ್ (ಆರ್ಟ್ಸ್, ಕಾಮರ್ಸ್, ಸೈನ್ಸ್) ಮಾದರಿ ಇಂದಿಗೂ ಮುಂದುವರಿದಿದೆ. ಎಂಬಿಬಿಎಸ್, ಇಂಜಿನಿಯರಿಂಗ್, ಇತರ ತಾಂತ್ರಿಕ ಕೋರ್ಸ್ ಪ್ರವೇಶ ಸಿಗದವರು ಎಸಿಎಸ್ ಸೇರುತ್ತಾರೆ ಎಂಬ ನಂಬಿಕೆ ಇದೆ. ಈ ಮೂರು ವಿಭಾಗ ಸೇರುವ ವಿದ್ಯಾರ್ಥಿಗಳು ತಮ್ಮ ಕೋರ್ಸ್ ಹೊರತುಪಡಿಸಿ ಇನ್ನಿತರ ಪದವಿ ಕೋರ್ಸ್​ಗಳತ್ತ ತಲೆ ಹಾಕುವುದಿಲ್ಲ. ವಿಭಾಗಗಳ ವಿಂಗಡಣೆಯಿಂದಾಗಿ ಬೇರೆ ವಿಷಯಗಳ ಜ್ಞಾನಾರ್ಜನೆಗೆ ಅವಕಾಶ ದೊರೆಯದಂತಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕವಿವಿ ಕುಲಪತಿ ಪೊ›. ಪ್ರಮೋದ ಗಾಯಿ ಮಾತನಾಡಿ, ಶಿಕ್ಷಣ ವ್ಯವಸ್ಥೆಯಲ್ಲಿ ಸಂಪೂರ್ಣ ಬದಲಾವಣೆ ತರುವ ಅಗತ್ಯವಿದೆ. ಆ ಉದ್ದೇಶದಿಂದ ಜರುಗುತ್ತಿರುವ ಸಮ್ಮೇಳನದಲ್ಲಿ ಚರ್ಚೆಯಾಗುವ ಎಲ್ಲ ಆಯಾಮಗಳನ್ನು ಅನುಷ್ಠಾನಗೊಳಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ಅಧ್ಯಕ್ಷ ಡಾ. ರಘು ಅಕಮಂಚಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಲಾ ಪದವಿ ಇಂದು ತಾತ್ಸಾರಕ್ಕೊಳಗಾಗುತ್ತಿದೆ. ಕಲಾ ಹೊರತುಪಡಿಸಿ ಇತರ ಪದವಿ ಪೂರೈಸಿದ ವಿದ್ಯಾರ್ಥಿಗಳಿಗೂ ಉದ್ಯೋಗಾವಕಾಶಗಳು ಕ್ಷೀಣಿಸುತ್ತಿವೆ. ಜ್ಞಾನದ ಜೊತೆ ಕೌಶಲದ ಅವಶ್ಯಕತೆ ಇದೆ. ಉನ್ನತ ಶಿಕ್ಷಣ ವಿದ್ಯಾರ್ಥಿಗಳನ್ನು ಸ್ವಾವಲಂಬಿ ಜೀವನ ನಡೆಸಲು ಉತ್ತೇಜಿಸಬೇಕು ಎಂದರು.

ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ ಕುಲಪತಿ ಪೊ›. ಶಿವಾನಂದ ಹೊಸಮನಿ, ಬೆಂಗಳೂರು ಜೈನ ವಿಶ್ವ ವಿದ್ಯಾಲಯದ ಪ್ರಭಾರ ಕುಲಪತಿ ಡಾ. ಸಂದೀಪ ಶಾಸ್ತ್ರಿ, ನವದೆಹಲಿಯ ಅಖಿಲ ಭಾರತೀಯ ರಾಷ್ಟ್ರೀಯ ಶಿಕ್ಷಕ ಮಹಾಸಂಘದ ಸಂಘಟಕ ಮಹೇಂದ್ರ ಕುಮಾರ, ಕವಿವಿ ಕುಲಸಚಿವರಾದ ಪೊ›. ಸಿ.ಬಿ. ಹೊನ್ನು ಸಿದ್ಧಾರ್ಥ, ಮೌಲ್ಯಮಾಪನ ಕುಲಸಚಿವ ಪೊ›. ಎನ್.ಎಂ. ಸಾಲಿ, ಕವಿವಿ ಯುಜಿಸಿ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ನಿರ್ದೇಶಕ ಪೊ›. ಹರೀಶ ರಾಮಸ್ವಾಮಿ, ವಿವಿಧ ಕಾಲೇಜುಗಳ ಅಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಡಾ. ಜಿ.ಕೆ. ಬಡಿಗೇರ ಸ್ವಾಗತಿಸಿದರು. ಪೊ›. ಪ್ರಸನ್ನ ಪಂಡರಿ ನಿರೂಪಿಸಿದರು. ಡಾ. ಬಿ.ಎಸ್. ತಲ್ಲೂರ ವಂದಿಸಿದರು.

ಪಠ್ಯಕ್ರಮ ಸಿದ್ಧಪಡಿಸುವುದರಿಂದ ಹಿಡಿದು ಮೌಲ್ಯಮಾಪನದವರೆಗೆ ಹಲವರು ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ ಬೋಧಕರ ಪಾತ್ರ ಗೌಣವಾಗುತ್ತಿದೆ. ಜತೆಗೆ ವಿಶ್ವವಿದ್ಯಾಲಯ ಹಾಗೂ ಮಹಾವಿದ್ಯಾಲಯಗಳ ನಡುವೆ ಸಹಕಾರ ಇಲ್ಲದಿರುವುದು ವಿಷಾದಕರ. | ಡಾ. ಎಂ.ಕೆ. ಶ್ರೀಧರ