ಸಂವಿಧಾನ ರಕ್ಷಣೆ ಪ್ರತಿಯೊಬ್ಬರ ಹೊಣೆ

ಧಾರವಾಡ: ಇಂದು ಸಂವಿಧಾನ ಸುಟ್ಟು ಹಾಕಿದ ನಿದರ್ಶನಗಳು ನಡೆದಿವೆ. ಸಂವಿಧಾನ ರಕ್ಷಣೆ ಮಾಡಬೇಕಾದವರೇ ನಾಲಿಗೆ, ಕೈ ಕತ್ತರಿಸಿ ಎಂದು ಅಪ್ಪಣೆ ಮಾಡುತ್ತಿದ್ದಾರೆ. ಆದ್ದರಿಂದ ಬಾಬಾಸಾಹೇಬ ಅಂಬೇಡ್ಕರ್ ಅವರು ನೀಡಿದ ನಮ್ಮ ಸಂವಿಧಾನದ ರಕ್ಷಣೆ ಮಾಡಬೇಕಾದ ಹೊಣೆ ಪ್ರತಿಯೊಬ್ಬರದ್ದು ಎಂದು ಮಾಜಿ ಸಚಿವ ಎಚ್.ಸಿ. ಮಹಾದೇವಪ್ಪ ಹೇಳಿದರು.

ನಗರದ ಕರ್ನಾಟಕ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ವಿಭಾಗದಲ್ಲಿ ಗುರುವಾರ ಆಯೋಜಿಸಿದ್ದ ಡಾ. ಅಂಬೇಡ್ಕರರ 62ನೇ ಮಹಾ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮೃದ್ಧ ಭಾರತ ನಿರ್ಮಾಣ ಡಾ. ಅಂಬೇಡ್ಕರರ ಕನಸಾಗಿತ್ತು. ಹಾಗಾಗಿ ಮಹಾ ಪರಿನಿರ್ವಾಣ ದಿನ ನಮ್ಮ ಭವಿಷ್ಯ ರೂಪಿಸಿಕೊಳ್ಳಲು ಸಂಕಲ್ಪ ಮಾಡುವ ಮತ್ತು ಆತ್ಮಾವಲೋಕನದ ದಿನವಾಗಿದೆ ಎಂದರು.  ತೋಂಟದಾರ್ಯ ಶಾಖಾ ಮಠದ ಮುಂಡರಗಿಯ ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಮಾತನಾಡಿ, ಅಂಬೇಡ್ಕರರು ನೀಡಿದ ಸಂವಿಧಾನವೇ ನಮ್ಮಂಥ ಸ್ವಾಮೀಜಿಗಳಿಗೆ ಮಾತನಾಡುವ ಅವಕಾಶ ಕಲ್ಪಿಸಿದೆ. ಇಲ್ಲದೇ ಹೋಗಿದ್ದರೆ ಇಷ್ಟೊತ್ತಿಗೆ ನಮ್ಮನ್ನು ಗುಂಡಿಕ್ಕಿ ಕೊಲ್ಲುತ್ತಿದ್ದರು. ನಾನು ಹೊರಗಡೆ ಬಹಳ ಕಡೆ ಪ್ರಸಾದ ಮಾಡುವುದಕ್ಕೂ ವಿಚಾರ ಮಾಡುತ್ತೇನೆ. ಏಕೆಂದರೆ ವಿಷ ಹಾಕಿ ಬಿಡ್ತಾರಾ ಎನ್ನುಷ್ಟರ ಮಟ್ಟಿಗೆ ನನ್ನ ಪರಿಸ್ಥಿತಿ ಇದೆ. ನಾನು ಬ್ರಾಹ್ಮಣ ವಿರೋಧಿ ಅಲ್ಲ. ಎಂದಿಗೂ ಬ್ರಾಹ್ಮಣರನ್ನು ಬೈಯುವುದಿಲ್ಲ. ಬ್ರಾಹ್ಮಣರನ್ನು ಬೈಯುವುದು ನಮ್ಮ ದೇಶದಲ್ಲಿ ಅಪರಾಧವಾಗುತ್ತದೆ. ತುಪ್ಪ ತಿಂದವರಿಂದ ದೇಶ ಹಾಳಾಗಿದೆ ಹೊರತು ಮಾಂಸ ತಿಂದವರಿಂದಲ್ಲ ಎಂದು ಮಾತ್ರ ನಾನು ಹೇಳಿದ್ದೆ. ನಾನು ಹೇಳಿದ ರೀತಿಯೇ ಬೇರೆ, ಜನ ತಿಳಿದುಕೊಂಡಿದ್ದೇ ಬೇರೆ ಎಂದರು. ಉನ್ನತ ಶಿಕ್ಷಣ ಇಲಾಖೆಯ ನಿವೃತ್ತ ಪ್ರಧಾನ ಕಾರ್ಯದರ್ಶಿ ಸಿದ್ದಯ್ಯ ಮಾತನಾಡಿದರು. ಕವಿವಿ ಕುಲಪತಿ ಪ್ರೊ. ಪ್ರಮೋದ ಗಾಯಿ, ಜನವಾಡದ ಅಲ್ಲಮಪ್ರಭು ಆಶ್ರಮದ ಮಲ್ಲಿಕಾರ್ಜುನ ಸ್ವಾಮೀಜಿ, ಕುಲಸಚಿವರಾದ ಪ್ರೊ. ಕೆ.ಎಂ. ಹೊಸಮನಿ, ಡಾ. ಎನ್.ಎಂ. ಸಾಲಿ, ಹಣಕಾಸು ಅಧಿಕಾರಿ ಡಾ.  ಆರ್.ಎಲ್. ಹೈದ್ರಾಬಾದ, ಡಾ. ಶಿವರುದ್ರ ಕಲ್ಲೋಳಕರ, ಡಾ. ಜಿ.ಬಿ. ನಂದನ, ಡಾ. ಬಿ.ಕೆ.ಎಸ್. ವರ್ದನ್, ಅಂಬೇಡ್ಕರ್ ವಿಭಾಗದ ಸಂಯೋಜಕ ಡಾ. ಸುಭಾಸಚಂದ್ರ ನಾಟಿಕರ, ಇತರರಿದ್ದರು.