More

  ಸಂವಿಧಾನ ದೇಶದ ಸರ್ವಶ್ರೇಷ್ಠ ಗ್ರಂಥ

  ಮದ್ದೂರು: ಭಾರತದ ಸಂವಿಧಾನದ ಉಳಿವಿಗಾಗಿ ನಮ್ಮೆಲ್ಲರ ಹೋರಾಟ ನಿರಂತರವಾಗಿರಬೇಕು. ಸಂವಿಧಾನ ಭಾರತದ ಸರ್ವಶ್ರೇಷ್ಠ ಗ್ರಂಥ ಎಂದು ಶೋಷಿತ ಸಮುದಾಯಗಳ ವೇದಿಕೆಯ ರಾಜ್ಯಾಧ್ಯಕ್ಷ ಸುರೇಶ್ ಕಂಠಿ ಅಭಿಪ್ರಾಯಪಟ್ಟರು.

  ಪಟ್ಟಣದ ಪುರಸಭಾ ಕಚೇರಿ ಆವರಣದಲ್ಲಿ ಭಾನುವಾರ ಸಂಜೆ ಮದ್ದೂರು ತಾಲೂಕು ಡಾ.ಬಿ.ಆರ್.ಅಂಬೇಡ್ಕರ್ ಅಭಿಮಾನಿಗಳ ಬಳಗದ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ 133ನೇ ಜಯಂತಿಯ ಅಂಗವಾಗಿ ಆಯೋಜಿಸಿದ್ದ ಸಂವಿಧಾನ ಉಳಿಗಾಗಿ ನಮ್ಮ ಹೋರಾಟದ ಬೃಹತ್ ಜಾಥಾ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ದೀಪನಮನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

  ಡಾ.ಬಿ.ಆರ್.ಅಂಬೇಡ್ಕರ್ ಅವರು ವಿಶ್ವವೇ ಮೆಚ್ಚುವ ಸಂವಿಧಾನವನ್ನು ನೀಡಿದ್ದಾರೆ. ಕೆಲ ಮನುವಾದಿಗಳು ಸಂವಿಧಾನವನ್ನು ಬದಲಾಯಿಸುವ ಮಾತನಾಡುತ್ತಾರೆ. ಸಂವಿಧಾನದ ಬದಲಾವಣೆಗೆ ಕೈ ಹಾಕಿದರೆ ಭಾರತದಲ್ಲಿ ರಕ್ತಪಾತ ನಡೆಯುವುದರಲ್ಲಿ ಸಂಶಯವಿಲ್ಲ ಎಂದರು.
  ಶೋಷಿತ ಸಮುದಾಯದ ಜನರು ಆಗಾಗ ಸಂವಿಧಾನದ ಉಳಿವಿಗಾಗಿ ನಿರಂತರವಾಗಿ ಹೋರಾಟಗಳನ್ನು ರೂಪಿಸಿ ನಮ್ಮನಾಳುವ ಸರ್ಕಾರಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಬೇಕು ಎಂದು ಕರೆ ನೀಡಿದರು.

  ಅಂಬೇಡ್ಕರ್ ಅವರು ಜೀವನದಲ್ಲಿ ಅನುಭವಿಸಿದ ಕಷ್ಟ ಕಾರ್ಪಣ್ಯಗಳನ್ನು ಆಧಾರವಾಗಿಟ್ಟುಕೊಂಡು ಭಾತರದ ಕಟ್ಟ ಕಡೆಯ ವ್ಯಕ್ತಿಯೂ ನೆಮ್ಮದಿಯಾಗಿ ಬದುಕುವ ರೀತಿಯಲ್ಲಿ ಸಂವಿಧಾನವೆಂಬ ಅಸ್ತ್ರವನ್ನು ನೀಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಮೂಲಕ ಅಧಿಕಾರಕೇರಿದ ಕೆಲವರು ಸಂವಿಧಾನ ಬದಲಾಯಿಸುತ್ತೇವೆ ಎನ್ನುತ್ತಾರೆ. ಭಾರತದ ಪ್ರತಿಯೊಬ್ಬ ಪ್ರಜೆಯೂ ಸಂವಿಧಾನದ ಫಲಾನುಭವಿಯಾಗಿದ್ದು ಸಂವಿಧಾನದ ರಕ್ಷಣೆಗೆ ಕಂಕಣಬದ್ಧರಾಗಬೇಕು ಎಂದರು.

  ಬೃಹತ್ ಜಾಥಾ: ಪಟ್ಟಣದ ಶ್ರೀ ಉಗ್ರ ನರಸಿಂಹಸ್ವಾಮಿ ದೇಗುಲದ ಆವರಣದಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ ಬೃಹತ್ ಭಾವಚಿತ್ರಗಳನ್ನು ತೆರೆದ ವಾಹನದಲ್ಲಿಟ್ಟು ಡೋಳ್ಳು, ನಗಾರಿ, ತಮಟೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳೊಂದಿಗೆ, ನೀಲಿಮಯವಾದ ಶಾಲುಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮೆರವಣಿಗೆ ಮಾಡಲಾಯಿತು. ಈ ವೇಳೆ ಮೆರವಣಿಗೆಯ ಉದ್ದಕ್ಕೂ ಜೈ ಭೀಮ್ ಜಯಘೋಷ ಮೊಳಗಿಸಲಾಯಿತು.

  ನಂತರ ಪಟ್ಟಣದ ಪುರಸಭೆಯ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಯ ಸ್ಥಳಕ್ಕೆ ಆಗಮಿಸಿ ಭಾರಿ ಗಾತ್ರದ ಹೂವಿನ ಹಾರ ಹಾಕಿ ದೀಪ ನಮನ ಸಲ್ಲಿಸಲಾಯಿತು.

  ಜಿಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ವಿವಿಧ ಸಂಘಟನೆಗಳ ಮುಖಂಡರಾದ ವಿ.ಸಿ.ಉಮಾಶಂಕರ್, ಸೊ.ಶಿ.ಪ್ರಕಾಶ್, ಮುಡಿನಹಳ್ಳಿ ತಿಮ್ಮಯ್ಯ, ರಾಜೇಂದ್ರ, ಹೆಮ್ಮನಹಳ್ಳಿ ಕೃಷ್ಣಪ್ಪ, ರವಿಕುಮಾರ್, ರಾಘವೇಂದ್ರ, ಕರಡಕೆರೆ ಯೋಗೇಶ್, ರವಿಕುಮಾರ್, ರುದ್ರಯ್ಯ, ಕೆಸ್ತೂರು ಈಶ್ವರ್, ಸುರೇಶ, ಹುಲಿಗೆರಪುರ ಮಹಾದೇವು, ಕೃಷ್ಣ, ಗುಡಿಗೆರೆ ಬಸವರಾಜು, ಪೊಲೀಸ್ ಮಹಾದೇವು, ಬಿ.ಪಿ.ಗಿರೀಶ್, ಭಾನುಪ್ರಕಾಶ್ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts