ಸಂವಿಧಾನದ ಮಹತ್ವ ಸಾರಲು ದಿನಾಚರಣೆ

ರಾಮನಗರ: ಸಂವಿಧಾನದ ಬಗ್ಗೆ ಭಾರತೀಯರಲ್ಲಿ ಜಾಗೃತಿ ಮೂಡಿಸಲು ಹಾಗೂ ಸಂವಿಧಾನದ ಧ್ಯೇಯವನ್ನು ತಿಳಿಸಿಕೊಡುವ ಉದ್ದೇಶದಿಂದ ಕಾನೂನು ದಿನಾಚರಣೆ ನಡೆಸಲಾಗುತ್ತಿದೆ ಎಂದು ಪ್ರಧಾನ ಜಿಲ್ಲಾ, ಸತ್ರ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಎಂ.ಜಿ.ಉಮಾ ಹೇಳಿದರು.

ಬಸವನಪುರ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಶುಕ್ರವಾರ ಸರ್ಕಾರಿ ಕಾನೂನು ಕಾಲೇಜು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ಹಾಗೂ ಕಾನೂನು ಸೇವೆಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. 2015ರಲ್ಲಿ ಡಾ.ಬಿ.ಆರ್ ಅಂಬೇಡ್ಕರ್ 125ನೇ ಜನ್ಮದಿನಾಚರಣೆಯ ಪ್ರಯುಕ್ತ ಕೇಂದ್ರ ಸರ್ಕಾರ ಸಂವಿಧಾನ ದಿನ ಆಚರಿಸಲು ಸುತ್ತೋಲೆ ಹೊರಡಿಸಿತ್ತು ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಎಸ್.ಹೊನ್ನಸ್ವಾಮಿ, ಪ್ರಾಂಶುಪಾಲ ಎನ್.ಎಸ್.ಅಂಬೇಡ್ಕರ್, ಕಾನೂನು ಸಹಾಯಕ ಪ್ರಾಧ್ಯಾಪಕರಾದ ಶಿವಣ್ಣ ನಾಯ್್ಕ ಕಾನೂನು ಸಹಾಯಕ ಪ್ರಾಧ್ಯಾಪಕ ಡಾ.ಸಿ.ಬಿ.ರಂಗನಾಥಯ್ಯ, ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಎಚ್.ಬಿ.ಶಿವಣ್ಣ ಇದ್ದರು.

ಸಂವಿಧಾನ ಪವಿತ್ರ ಗ್ರಂಥ: ಸಂವಿಧಾನವನ್ನು ಮದರ್ ಆಫ್ ಆಲ್ ಲಾಸ್ ಎನ್ನಲಾಗುತ್ತದೆ. ಇದು ಪವಿತ್ರ ಗ್ರಂಥ ಎಂದು ಎಂ.ಜಿ.ಉಮಾ ಹೇಳಿದರು. ಸ್ವಾತಂತ್ರ್ಯ ಭಾರತದ ದ್ಯೇಯೋದ್ದೇಶವೇನಿರಬೇಕು, ಮುಂದಿನ ಯೋಜನೆ ಹಾಗೂ ರಾಷ್ಟ್ರ ಯಾವ ರೀತಿ ಮುಂದೆ ಸಾಗಬೇಕು ಎನ್ನುವ ದಿಸೆಯಲ್ಲಿ ಹಲವು ಗಣ್ಯರು ಸೇರಿ ಸಂವಿಧಾನದ ಕರಡು ಸಿದ್ಧಪಡಿಸಿದರು. ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಕ್ಷತೆಯಲ್ಲಿ ಹಲವು ದೇಶಗಳ ಸಂವಿಧಾನವನ್ನು ಅಧ್ಯಯನ ನಡೆಸಿ ಹೊಸದಾಗಿ ರಚಿಸಲಾಯಿತು. ಸಂವಿಧಾನ ಅಳವಡಿಸಿಕೊಂಡು ಉತ್ತಮ ರೀತಿಯಲ್ಲಿ ಆಡಳಿತ ನಡೆಸಿದ್ದೇವೆ.