ದಾವಣಗೆರೆ: ಅಲ್ಲಿ ಸಾವಿರಾರು ವಿದ್ಯಾರ್ಥಿಗಳು ರಾಷ್ಟ್ರಧ್ವಜದ ಕೇಸರಿ, ಬಿಳಿ, ಹಸಿರು ಬಣ್ಣದಲ್ಲಿ ಭಾರತದ ಭವ್ಯ ಭೂಪಟ ಪ್ರದರ್ಶಿಸಿದರು. ಸುತ್ತಲೂ ರಾರಾಜಿಸಿದ ತ್ರಿವರ್ಣ ಧ್ವಜಗಳು ದೇಶಭಕ್ತಿ ಇಮ್ಮಡಿಗೊಳಿಸಿದವು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ (ಭಾರತದ ಸಂವಿಧಾನ ಪೀಠಿಕೆ ಜಾಗತಿಕ ವಾಚನ ಸರ್ವಜನರ ಏಕಧ್ವನಿ) ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯವಿದು.
ಕಾರ್ಯಕ್ರಮ ಆರಂಭದ ವೇಳೆಗೆ ಮೋಡಗಳು ಮಳೆಯ ಸಿಂಚನಗೈದವು. ಮಳೆಹನಿಗಳ ನಡುವೆಯೂ ಕದಲದ ಸಿದ್ದಗಂಗಾ ಶಾಲೆ ವಿದ್ಯಾರ್ಥಿಗಳು ಭಾರತದ ನಕ್ಷೆಯಾಕಾರದಲ್ಲಿ ನಿಲ್ಲುವ ಮೂಲಕ ಗಮನ ಸೆಳೆದರು. ದೇಶದ ಅಖಂಡತೆ ಸಾರಿದರು.
ಜಿಲ್ಲಾಡಳಿತ, ಜಿಪಂ, ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ನಾಡಗೀತೆಯೊಂದಿಗೆ ಆರಂಭವಾಯಿತು. ನಂತರ ಭಾರತ ಸಂವಿಧಾನದ ಪೀಠಿಕೆ ಓದುವ ಮೂಲಕ ಎಲ್ಲರಿಗೂ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಉದಾತ್ತ ಚಿಂತನೆ ಸಾರುವ ಭಾರತದ ಸಂವಿಧಾನಕ್ಕೆ ತನ್ನದೇ ಆದ ಇತಿಹಾಸವಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಆಧಾರಿತವಾಗಿ ದೇಶವನ್ನು ಸಮರ್ಥವಾಗಿ ಮುನ್ನಡೆಸಬೇಕಿದೆ ಎಂದರು.
ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್, ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್, ಎಡಿಸಿ ಪಿ.ಎನ್. ಲೋಕೇಶ್, ಜಿ.ಪಂ. ಉಪಕಾರ್ಯದರ್ಶಿ ಕೃಷ್ಣನಾಯ್ಕ, ಉಪವಿಭಾಗಾಧಿಕಾರಿ ದುರ್ಗಾಶ್ರೀ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಮೇಯರ್ ವಿನಾಯಕ ಪೈಲ್ವಾನ್, ಆಯುಕ್ತೆ ರೇಣುಕಾ ಇತರರು ಇದ್ದರು. ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ ಸ್ವಾಗತಿಸಿದರು.