ಲಕ್ಷ್ಮೇಶ್ವರ: ಪರಸ್ಪರ ಪ್ರೀತಿ-ಸ್ನೇಹ, ಬಾಂಧವ್ಯ-ಸೌಹಾರ್ಧ ಬೆಸೆಯುವ ರಂಗಿನೋಕುಳಿ ಹಬ್ಬವನ್ನು ಮಂಗಳವಾರ ಪಟ್ಟಣ ಮತ್ತು ಶಿಗ್ಲಿಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಪರಸ್ಪರ ಬಣ್ಣ ಹಚ್ಚಿ ಶುಭಾಶಯ ವಿನಿಮಯ ಮಾಡಿಕೊಂಡರು. ಡಿಜೆ ಅಬ್ಬರದ ಸಂಗೀತಕ್ಕೆ ಯುವಕರು, ಮಕ್ಕಳು ಕುಣಿದು ಕುಪ್ಪಳಿಸಿದರು. ರೇನ್ ಡಾನ್ಸ್ ಮಾಡಿ ಸಂಭ್ರಮಿಸಿದರು.
ಪಟ್ಟಣದ ಹಳ್ಳದ ಕೇರಿ ಓಣಿಯ ಯುವಕ ಸಂಘದವರು ಟ್ರ್ಯಾಕ್ಟರ್ನಲ್ಲಿ ಪಕ್ಷಿಯ ಆಕೃತಿಯಲ್ಲಿ ರತಿ-ಕಾಮಣ್ಣನ ಮೂರ್ತಿಯನ್ನಿರಿಸಿ ಡಿಜೆ ಅಬ್ಬರದ ಕುಣಿತದೊಂದಿಗೆ ಮೆರವಣಿಗೆ ಮಾಡಿದರು. ಪಿಎಸ್ಐ ನಾಗರಾಜ ಗಡದ ಹಾಗೂ ಬಿಜೆಪಿ ಮಂಡಲ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ ಮೆರವಣಿಗೆಗೆ ಚಾಲನೆ ನೀಡಿದರು. ಪುರಸಭೆ ಮಾಜಿ ಅಧ್ಕಕ್ಷೆ ಜಯಕ್ಕ ಅಂದಲಗಿ, ಎಂ.ಆರ್. ಪಾಟೀಲ, ನಿಂಗಪ್ಪ ಬನ್ನಿ, ಶಿವು ಕಟಗಿ, ನವೀನ ಬೆಳ್ಳಟ್ಟಿ, ಅನಿಲ ಮುಳಗುಂದ, ಶಕ್ತಿ ಕತ್ತಿ, ಬಸವರಾಜ ಚಕ್ರಸಾಲಿ, ಮಂಜುನಾಥ ಗೊರವರ, ಹಲವರಿದ್ದರು.
ಕೃತಕ ಮಳೆಯ ಸಿಂಚನ: ಪಟ್ಟಣದ ಹಾವಳಿ ಆಂಜನೇಯ ದೇವಸ್ಥಾನದ ಹತ್ತಿರ ಹಿಂದು ಸೇವಾ ಪ್ರತಿಷ್ಠಾನ ಯುವಕರು ಮತ್ತು ಸೊಪ್ಪಿನಕೇರಿ ಓಣಿಯ ಸತಾನತ ಹಿಂದು ಯುವಕ ಮಂಡಳದಿಂದ ಯುವಕರು ರೇನ್ ಡಾನ್ಸ್ ಏರ್ಪಡಿಸಿದ್ದರು. ಬಣ್ಣದ ಬಟ್ಟೆಯ ಪೆಂಡಾಲ್ನಲ್ಲಿ ಕೃತಕ ಮಳೆಯ ಸಿಂಚನಗೈದು ರಂಗಿನೋಕುಳಿ ಆಡಿದರು. ಡಿಜೆಯ ಅಬ್ಬರದ ಸಂಗೀತಕ್ಕೆ ಪಟ್ಟಣದ ಯುವಕರು, ಮಕ್ಕಳು, ಹಿರಿಯರು ಸಹಿತ ಕುಣಿದು ಕುಪ್ಪಳ್ಳಿಸಿದರು. ಚಿತ್ರಕಲಾವಿದ ಪ್ರವೀಣ ಗಾಯಕರ ತಮ್ಮ ಕಲಾ ನೈಪುಣ್ಯತೆಯ ಮೂಲಕ ಯುವಕರು, ಮಕ್ಕಳ ಮುಖದಲ್ಲಿ ರಂಗು ತಂದರು.
ಮಕ್ಕಳಾಟವೇ ಜೋರು: ಶಾಲಾ-ಕಾಲೇಜು ಹೆಣ್ಣು ಮಕ್ಕಳು ಗೆಳತಿಯರ ಮನೆಗೆ ಹೋಗಿ ಬಣ್ಣ ಹಚ್ಚಿ ಸೆಲ್ಪಿಯೊಂದಿಗೆ ಖುಷಿಪಟ್ಟರು. ಹುಡುಗರು ಅಣುಕು ಶವಯಾತ್ರೆ, ಹಲಗೆ ಬಾರಿಸುತ್ತಾ ಕುಣಿದು ಕುಪ್ಪಳಿಸಿದರು. ಪಟ್ಟಣದ ಬಸ್ತಿಬಣ, ಪೇಠಬಣ, ವಿನಾಯಕ ನಗರ, ರಂಭಾಪುರಿ ನಗರ, ಸರಾಫ ಬಜಾರ, ಅಂಬೇಡ್ಕರ್ ನಗರ, ಇಂದಿರಾನಗರ, ಡೋರ್ಗಲ್ಲಿ, ಹುಲಗೇರಿಬಣ ಸೇರಿದಂತೆ ಹಲವೆಡೆ ಪ್ರತಿಷ್ಠಾಪಿಸಿದ್ದ ರತಿ ಮನ್ಮಥರ ಮತ್ತು ಹುಲಗಾಮನ ಆಕೃತಿ ಮುಂದೆ ಬಣ್ಣ ಎರಚಿ ಹಲಗೆಯ ನಾದಕ್ಕೆ ಕುಣಿದು ಕೇಕೆ ಹಾಕಿ ಸಂಭ್ರಮಿಸಿದರು. ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಆವರಣದಲ್ಲಿ ನಿತ್ಯ ಯೋಗಾಭ್ಯಾಸ ಮಾಡುತ್ತಿರುವ ಯೋಗ ಸಮಿತಿ ಸದಸ್ಯರು ವಿಶೇಷವಾಗಿ ಬಣ್ಣದ ಹಬ್ಬ ಆಚರಿಸಿದರು.
