ಸಂಭ್ರಮದ ಗ್ರಾಮದೇವಿ ಜಾತ್ರೆ

ಅಕ್ಕಿಆಲೂರ: ಐದು ವರ್ಷಕ್ಕೊಮ್ಮೆ ಆಚರಿಸುವ ಗ್ರಾಮದೇವಿಯ ಜಾತ್ರೆ ಭಕ್ತರ ಹಷೋದ್ಘಾರ, ನಾಡಿನ ಹತ್ತಾರು ಕಲಾತಂಡಗಳ ವೈಭವಗಳ ಭವ್ಯ ಮೆರವಣಿಗೆಯೊಂದಿಗೆ ಮಂಗಳವಾರ ನಡೆಯಿತು.

ಗ್ರಾಮದೇವಿಗೆ ಉಡಿ ತುಂಬುವುದು, ಹೋಮ-ಹವನದ ನಂತರ ಹಳೂರ ಓಣಿಯ ಗ್ರಾಮದೇವಿ ದೇವಸ್ಥಾನದಿಂದ ದೇವಿಯನ್ನು ತಂದು ಪೇಟೆ ಓಣಿಯ ಪಾದಗಟ್ಟೆಯಲ್ಲಿ ಪ್ರತಿಷ್ಠಾಪಿಸಲಾಯಿತು. ರಾತ್ರಿ 10 ಗಂಟೆಗೆ ಹೂವಿನ ಅಲಂಕಾರದಿಂದ ಶೃಂಗರಿಸಲ್ಪಟ್ಟ ತೆರೆದ ವಾಹನದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿ ಮೆವರಣಿಗೆ ನಡೆಸಲಾಯಿತು. ಹಾನಗಲ್ಲ ತಾಲೂಕು ಸೇರಿ ಜಿಲ್ಲೆಯ ವಿವಿಧೆಡೆಯ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಬೆಳಗಿನ ಜಾವ 5ರವರೆಗೆ ಜರುಗಿದ ಮೆರವಣಿಗೆಯಲ್ಲಿ ಕೇರಳದ ಛಂಡೆವಾದ್ಯ, ವೀರಗಾಸೆ, ಪೂಜಾ ಕುಣಿತ, ನಂದಿ ಧ್ವಜ ಕುಣಿತ, ಗಾರಡಿ ಗೊಂಬೆ ಕುಣಿತ, ಡೊಳ್ಳು ಕುಣಿತ ಎಲ್ಲರ ಗಮನ ಸೆಳೆದವು.

ಚಲನಚಿತ್ರ ಗೀತೆಗಳಿಗೆ ಕುದುರೆ ಹೆಜ್ಜೆ ಹಾಕುತ್ತಿದ್ದುದು ಮತ್ತು ಬಾಯಲ್ಲಿ ಸೀಮೆ ಎಣ್ಣೆ ಹಾಕಿಕೊಂಡು ಬೆಂಕಿ ಉಗುಳುತ್ತಿದ್ದ ಕಲಾವಿದರ ಸಾಹಸ ಆಕರ್ಷಣೆಯಾಗಿತ್ತು. ಬೃಹತ್ ಧ್ವನಿವರ್ಧಕದಿಂದ ಹೊರಹೊಮ್ಮುತ್ತಿದ್ದ ಹಾಡುಗಳಿಗೆ ನೂರಾರು ಯುವಕ-ಯುವತಿಯರು ಹೆಜ್ಜೆ ಹಾಕಿದರು.

ಹಳೂರು ಓಣಿ, ಮುಷ್ಠಿಯವರ ಗಲ್ಲಿ, ಕೆಳಗಿನ ಓಣಿ, ಪೇಟೆ ಓಣಿಗಳಲ್ಲಿ ಅಹೋರಾತ್ರಿ ಸಂಚರಿಸಿದ ಮೆರವಣಿಗೆ ವೀಕ್ಷಿಸಿ ದೇವಿಯ ದರ್ಶನ ಪಡೆಯಲು ಸಾವಿರಾರು ಜನ ಸೇರಿದ್ದರು. ನಂತರ ಬೆಳಗ್ಗಿನ ಜಾವ 5ಕ್ಕೆ ಪಾದಗಟ್ಟೆಯಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿ ವಿವಿಧ ಧಾರ್ವಿುಕ ಸಂಸ್ಕಾರ ನೀಡಲಾಯಿತು.

ಪ್ರಾಣಿಬಲಿ ಇಲ್ಲ: 2015ರ ಗ್ರಾಮದೇವಿ ಜಾತ್ರೆಯಲ್ಲಿ ಕೋಣ ಬಲಿ ಕೊಡದೇ ರಕ್ತದಾನ ಶಿಬಿರದ ಮೂಲಕ ಜಾತ್ರೆ ಆಚರಿಸಲಾಗಿತ್ತು. ಅದೇ ಪರಂಪರೆಯನ್ನು ಈ ವರ್ಷವೂ ಮುಂದುವರಿಸಲಾಯಿತು. ವಾಡಿಕೆಯಂತೆ ದೇವಿ ಪ್ರತಿಷ್ಠಾಪನೆಯಾದ ನಂತರ ಕೋಣದಿಂದ ಸ್ವಲ್ಪ ರಕ್ತ ತೆಗೆದು ಅದರಿಂದ ಹುಲುಸು ತಯಾರಿಸಿ ಗ್ರಾಮದ ಗಡಿಭಾಗಗಳಿಗೆ ಚರಗ ಚೆಲ್ಲಲಾಯಿತು.