ಸಿನಿಮಾ

ಸಂಭ್ರಮದ ಕುರುಬನಕಟ್ಟೆ ಕಂಡಾಯ ಉತ್ಸವ

ಕೊಳ್ಳೇಗಾಲ: ಪಟ್ಟಣದ ಹೊಸಅಣಗಳ್ಳಿ ಬಡಾವಣೆಯಲ್ಲಿ ಬುಧವಾರ ರಾತ್ರಿ ಕುರುಬನಕಟ್ಟೆ ಕಂಡಾಯ ಉತ್ಸವ ಸಡಗರ ಮತ್ತು ಸಂಭ್ರಮದಿಂದ ನೆರವೇರಿತು.

ಮೀನಾಕ್ಷಿ ಸಮೇತ ಶ್ರೀ ಮರಳೇಶ್ವರ ದೇವಸ್ಥಾನದಲ್ಲಿ ಕಂಡಾಯಗಳಿಗೆ ದೇವರ ಗುಡ್ಡರು ಹೂ-ಹೊಂಬಾಳೆ ಇಟ್ಟು ಪೂಜೆ ಸಲ್ಲಿಸಿದ ಬಳಿಕ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮಾಡಲಾಯಿತು.

ಉತ್ಸವದ ಹಿನ್ನೆಲೆಯಲ್ಲಿ ಬಡಾವಣೆಯ ಪ್ರತಿ ಬೀದಿಯನ್ನು ದೀಪಾಲಂಕಾರ, ಹೂ, ಮಾವಿನ ಸೊಪ್ಪು, ರಂಗೋಲಿಗಳಿಂದ ಸಿಂಗರಿಸಲಾಗಿತ್ತು. ಅಣಗಳ್ಳಿ ಬಡಾವಣೆಗೆ ಬರುತ್ತಿದಂತೆ ಪಟಾಕಿ ಸಿಡಿಸಲಾಯಿತು. ಈ ವೇಳೆ ಯುವಕರು ಹಾಗೂ ಗ್ರಾಮಸ್ಥರು ಕುಣಿದು ಕುಪ್ಪಳಿಸಿದರು. ನಂತರ ಬಡಾವಣೆಯಲ್ಲಿರುವ ದೇವಾಲಯದಲ್ಲಿ ಕಂಡಾಯಗಳನ್ನು ಇರಿಸಿ ಪೂಜೆ ಸಲ್ಲಿಸಲಾಯಿತು.
ಗುರುವಾರ ಬೆಳಗ್ಗೆ ಬಡಾವಣೆಯ ಪ್ರತಿ ಬೀದಿಯಲ್ಲೂ ಕಂಡಾಯ ಉತ್ಸವ ಸಾಗಿತು. ಪ್ರತಿ ಮನೆಯಿಂದ ನೀರೆಯರು ಹಣ್ಣು ಕಾಯಿ ಸಮರ್ಪಿಸಿ ಪೂಜೆ ಸಲ್ಲಿಸುವ ಮೂಲಕ ಭಕ್ತಿ ಮೆರೆದರು. ರಸಸಂಜೆ ಕಾರ್ಯಕ್ರಮ ಗಮನ ಸೆಳೆಯಿತು.

ಬಡಾವಣೆಯ ಯಜಮಾನರಾದ ವೆಂಕಟರಾಮ್, ಮಹದೇವ, ಕೆ.ರಾಚಯ್ಯ, ನಾರಾಯಣಮೂರ್ತಿ, ದೊರೆರಾಜು, ಎಸ್.ಶಿವಣ್ಣ, ರಾಚಯ್ಯ ವಿಶ್ವರತ್ನ ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷ ಬಸವರಾಜು, ಕಾರ್ಯದರ್ಶಿ ನಂಜುಂಡಮೂರ್ತಿ, ಸಂಘಟನಾ ಕಾರ್ಯದರ್ಶಿ ಜೋಗಯ್ಯ, ಆರ್.ರಾಚಯ್ಯ, ಬಂಗಾರಪ್ಪ, ಹಳೇ ಅಣಗಳ್ಳಿ ಗ್ರಾಮದ ಮುಖಂಡ ಬಸವರಾಜು ಮತ್ತಿತರಿದ್ದರು.

Latest Posts

ಲೈಫ್‌ಸ್ಟೈಲ್