ನಂಜನಗೂಡು: ಶಾಲೆಯಲ್ಲಿ ನಿರ್ಮಾಣ ಮಾಡಿರುವ ಸಂಪ್‌ನಿಂದ (ತೊಟ್ಟಿ) ವಿದ್ಯಾರ್ಥಿಗಳು ಪ್ರತಿನಿತ್ಯ ಬಿಂದಿಗೆಯಿಂದ ನೀರು ತೆಗೆಯುತ್ತಿರುವುದು ಅಪಾಯಕ್ಕೆ ಆಹ್ವಾನ ನೀಡುವಂತಿದ್ದು ಸಾರ್ವಜನಿಕರಿಂದ ಆಕ್ಷೇಪಗಳು ಕೇಳಿ ಬರುತ್ತಿವೆ.
ನಂಜನಗೂಡು ತಾಲೂಕಿನ ವರುಣ ವಿಧಾನಸಭಾ ಕ್ಷೇತ್ರದ ಬಿಳಿಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಸಂಪ್‌ನಿಂದ ಪುಟ್ಟ ಮಕ್ಕಳು ಬಿಂದಿಗೆಯಿಂದ ನೀರನ್ನು ಹೊರತೆಗೆಯುತ್ತಿರುವುದು ಕಂಡು ಬಂತು. ಶಾಲೆಯ ಸಿಬ್ಬಂದಿ ಮಾಡಬೇಕಾದ ಕೆಲಸವನ್ನು ಮಕ್ಕಳ ಕೈಯಲ್ಲಿ ಮಾಡಿಸುತ್ತಿದ್ದಾರೆ. ಸುಮಾರು 10 ಅಡಿ ಆಳವಿರುವ ಸಂಪ್ ಒಳಗೆ ಏನದರೂ ಮಕ್ಕಳು ಆಯತಪ್ಪಿ ಬಿದ್ದರೆ ಅನಾಹುತ ಖಚಿತ.
ಶಾಲೆಯಲ್ಲಿ ಸುಮಾರು 90ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಆದರೆ, ಕೆಲಸಗಳ ನಿರ್ವಹಣೆಗೆ ಸಿಬ್ಬಂದಿ ನಿಯೋಜಿಸಿಲ್ಲ. ಹೀಗಾಗಿ ಮಕ್ಕಳಿಂದಲೇ ಶಾಲೆಯ ಬಹುತೇಕ ಕೆಲಸಗಳನ್ನು ಮಾಡಿಸುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಗಮನಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಶಾಲೆಯ ಸಂಪ್‌ನಲ್ಲಿ ನೀರು ತುಂಬುತ್ತಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಶಾಲೆಯ ಮುಖ್ಯ ಶಿಕ್ಷಕರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಈ ಬಗ್ಗೆ ಅಡುಗೆ ಸಿಬ್ಬಂದಿ, ನಾವು ಯಾವ ಮಕ್ಕಳಿಗೂ ನೀರು ತರುವಂತೆ ಸೂಚಿಸಿಲ್ಲ. ಆದರೂ ಒಬ್ಬ ಹುಡುಗ ಸಂಪ್ ಬಳಿ ನಿಂತಿರುವ ಫೋಟೋ ತೆಗೆದಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೂ ವಿಷಯಕ್ಕೆ ಸಂಬಂಧಿಸಿದಂತೆ ಕ್ರಮ ವಹಿಸಲಾಗಿದೆ.
ಎಂ.ಮಹೇಶ್, ಕ್ಷೇತ್ರ ಶಿಕ್ಷಣಾಧಿಕಾರಿ, ನಂಜನಗೂಡು
