ಅಥಣಿ ಗ್ರಾಮೀಣ: ಸಮರ್ಪಕ ರಸ್ತೆ, ಗುಣಮಟ್ಟದ ಶಿಕ್ಷಣ, ಕೃಷಿ ಭೂಮಿಗೆ ನೀರು ಒದಗಿಸಿ ಅಥಣಿ ಕ್ಷೇತ್ರದ ಜನರಿಗೆ ಸ್ವಾವಲಂಬಿ ಬದುಕು ಸಾಗಿಸಲು ಅವಶ್ಯವಿರುವ ಮೂಲಸೌಕರ್ಯ ಒದಗಿಸುವವರೆಗೆ ವಿರಮಿಸುವುದಿಲ್ಲ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಅಥಣಿ ತಾಲೂಕಿನ ಬಡಚಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ೧ ಕೋಟಿ ರೂ. ವೆಚ್ಚದಲ್ಲಿ ಬಡಚಿಯಿಂದ ಬುರ್ಲಟ್ಟಿವರೆಗಿನ ರಸ್ತೆ ಡಾಂಬರೀಕರಣ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. ಈ ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗಿದೆ. ಕೆರೆ-ಕಟ್ಟೆಗಳು ಬತ್ತಿ ಅಂತರ್ಜಲ ಪಾತಾಳಕ್ಕೆ ಕುಸಿದಿದೆ. ತಾಲೂಕಿನ ಪೂರ್ವ ಭಾಗದ ಗ್ರಾಮಗಳ ಜನರ ಕುಡಿಯುವ ನೀರಿನ ಅಲೆದಾಟ ತಪ್ಪಿಸಲು ಈಗಾಗಲೇ ಹಿಪ್ಪರಗಿ ಅಣೆಕಟ್ಟೆಯಿಂದ ಕೃಷ್ಣಾ ನದಿಗೆ ೦.೧೫ ಟಿಎಂಸಿ ನೀರು ಹರಿಬಿಡಲಾಗಿದೆ. ರೈತರು ಯಾವುದೇ ಕಾರಣಕ್ಕೂ ಬೆಳೆಗಳಿಗೆ ನೀರು ಹಾಯಿಸಲು ಪೈಪೋಟಿಗೆ ಇಳಿಯಬಾರದು. ಜನ ಹಾಗೂ ಜಾನುವಾರುಗಳಿಗೆ ನೀರು ಒದಗಿಸುವುದು ನಮ್ಮ ಮೊದಲ ಆದ್ಯತೆ ಎಂದರು.
ಮುಂಬರುವ ಜೂನ್‌ನಲ್ಲಿ ೧೫೦ಕೋಟಿ ರೂ. ವೆಚ್ಚದ ಕೆರೆ ತುಂಬುವ ಯೋಜನೆ ಪೂರ್ಣಗೊಳ್ಳಲಿದ್ದು, ಅದರಿಂದ ೧೪ ಕೆರೆಗಳಿಗೆ ನೀರು ತುಂಬಲಾಗುವುದು. ಅಲ್ಲದೆ ೧೪೮೬ಕೋಟಿ ರೂ. ವೆಚ್ಚದ ಅಮ್ಮಾಜೇಶ್ವರಿ ಕೊಟ್ಟಲಗಿ ನೀರಾವರಿ ಯೋಜನೆ ಕಾಮಗಾರಿಯೂ ಭರದಿಂದ ಸಾಗಿದೆ. ಇದರಿಂದ ಕರಿಮಸೂತಿ, ತುಂಗಳ-ಸಾವಳಗಿ ಏತ ನೀರಾವರಿ ಹಾಗೂ ಕೆರೆ ತುಂಬುವ ಯೋಜನೆ ವಂಚಿತ ರೈತರ ಜಮೀನುಗಳಿಗೆ ನೀರು ಒದಗಿಸಲಾಗುವುದು ಎಂದರು.
ಪಿಕೆಪಿಎಸ್ ಅಧ್ಯಕ್ಷ ಅಣ್ಣಪ್ಪ ಖೋತ, ಗ್ರಾಪಂ ಅಧ್ಯಕ್ಷ ಬೀರಪ್ಪ ಪೂಜಾರಿ, ಲೋಕೋಪಯೋಗಿ ಎಇಇ ಜಯಾನಂದ ಹಿರೇಮಠ, ಅಭಿಯಂತ ಮಲ್ಲಿಕಾರ್ಜುನ ಮಗದುಮ್ಮ, ವಿನೋದ ವಿರಸಗೊಂಡ, ಅಶೋಕ ಕರಿಬಸಪ್ಪಗೋಳ, ರವಿ ಪಾಟೀಲ, ಈಶ್ವರ ಸನದಿ, ಪುಂಡಲೀಕ ಪೂಜಾರಿ, ಈರಪ್ಪ ಆಜೂರ, ಮುತ್ತು ಪಾಟೀಲ, ಇಸಾಕಲಿ ನದಾಫ್, ಶಿವಕುಮಾರ ದೇಸಾಯಿ, ಶ್ರೀಶೈಲ ಬಾಡಗಿ ಇತರರಿದ್ದರು.