ಭಾಲ್ಕಿ: ನಮ್ಮ ಸಂಪರ್ಕ ಭಾಷೆ ಕನ್ನಡವಾದರೆ ಮಾತ್ರ ಕರ್ನಾಟಕದಲ್ಲಿನ ಎಲ್ಲ ಸೌಲಭ್ಯಪಡೆಯಲು ನಾವು ಅರ್ಹರು ಎಂದು ಬಸವಕಲ್ಯಾಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಇಸಿಒ ರಾಜಕುಮಾರ ಸಾಲಿಮಠ ಹೇಳಿದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಶನಿವಾರ ಆಯೋಜಿಸಿದ್ದ ಕನ್ನಡ ಕಲರವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಕರ್ನಾಟಕದಲ್ಲಿ ವಾಸವಿದ್ದು, ಕರ್ನಾಟಕದ ಹಲವು ಸೌಲಭ್ಯಗಳನ್ನು ಪಡೆಯಬೇಕಾದರೆ ನಮ್ಮ ಸಂಪರ್ಕಭಾಷೆ ಕನ್ನಡವಾಗಿರಬೇಕು. ಭಾಷಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳಾದ ಮರಾಠಿ ಮತ್ತು ಉರ್ದು ಮಾಧ್ಯಮದ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿಯಲ್ಲಿ ಕನ್ನಡ ಭಾಷಾ ಪತ್ರಿಕೆಯಲ್ಲಿಯೇ ಹೆಚ್ಚು ಅನುತ್ತೀರ್ಣವಾಗುತ್ತಿರುವುದು ಆತಂಕದ ಸಂಗತಿಯಾಗಿದೆ. ಹೀಗಾಗಿ ಕಸಾಪ ವತಿಯಿಂದ ಭಾಷಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳಲ್ಲಿ ಕನ್ನಡ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕನ್ನಡ ಕಲರವ ಎನ್ನುವ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಹೇಳಿದರು.
ಕಸಾಪ ತಾಲೂಕು ಘಟಕದ ಅಧ್ಯಕ್ಷ ನಾಗಭೂಷಣ ಮಾಮಡಿ ಕಾರ್ಯಕ್ರಮ ಉದ್ಘಾಟಿಸಿ, ಕನ್ನಡಿಗರಾದ ನಾವೆಲ್ಲರೂ, ಕನ್ನಡ ಬಾರದವರಿಗೆ ಒಂದಕ್ಷರ ಕನ್ನಡ ಕಲಿಸುವ ಕಾರ್ಯಮಾಡಬೇಕು. ಇದು ನಾವು ಕನ್ನಡಕ್ಕೆ ಕೊಡುವ ದೊಡ್ಡ ಕೊಡುಗೆಯಾಗಿದೆ ಎಂದು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಯರಾಜ ದಾಬಶೆಟ್ಟಿ ಮಾತನಾಡಿದರು.
ಪ್ರಾಂಶುಪಾಲ ಸುಖದೇವ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಸುಂದರರಾಜ ಹುಣಜಿಕರ ಪ್ರಾಸ್ತಾವಿಕ ಮಾತನಾಡಿದರು. ಚಂದ್ರಕಾಂತ ತಳವಾಡೆ, ದೀಪಕ ಥಮಕೆ, ಉಪನ್ಯಾಸಕಿಯರಾದ ಲಕ್ಷ್ಮೀ, ಅನಿತಾ, ಸಂಸ್ಕೃತಿ, ಮಮಿತಾ ಇತರರಿದ್ದರು.ದೀಪಕ ಸ್ವಾಗತಿಸಿದರು. ಸುಂದರರಾಜ ನಿರೂಪಣೆ ಮಾಡಿದರು. ಚಂದ್ರಕಾಂತ ವಂದಿಸಿದರು.