ಸಂತ್ರಸ್ತರಿಗೆ ತಪ್ಪದ ಸಂಕಷ್ಟ

ನರಗುಂದ: ಪ್ರವಾಹದಿಂದ ಕಳೆದೊಂದು ತಿಂಗಳಿನಿಂದ ತತ್ತರಿಸಿರುವ ತಾಲೂಕಿನ ಬೂದಿಹಾಳ ಗ್ರಾಮಸ್ಥರು ಚೇತರಿಸಿಕೊಳ್ಳುವ ಮುನ್ನವೇ ಗುರುವಾರ ಸುರಿದ ಮಳೆ ಆರ್ಭಟಕ್ಕೆ ಮನೆಗಳಿಗೆ ನೀರು ನುಗಿದ್ದು, ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮಲಪ್ರಭಾ ಪ್ರವಾಹದಿಂದಾಗಿ ಇತ್ತೀಚೆಗೆ ಬೂದಿಹಾಳ ಗ್ರಾಮವು ಸಂಪೂರ್ಣ ಜಲಾವೃತಗೊಂಡು ಅಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿತ್ತು. ನೂರಾರು ಎಕರೆ ಪ್ರದೇಶದಲ್ಲಿನ ಬೆಳೆ ಹಾನಿಗೀಡಾಗಿತ್ತು. ಗ್ರಾಮದಲ್ಲಿನ ಹಲವು ಮನೆಗಳು ಸಂಪೂರ್ಣ ಬಿದ್ದಿದ್ದವು. ಇದರಿಂದಾಗಿ ಗ್ರಾಮದ 225 ಕುಟುಂಬಗಳ 1115 ಜನರನ್ನು ಹೊಸ ಬೂದಿಹಾಳ ಗ್ರಾಮದಲ್ಲಿರುವ ಆಶ್ರಯ ಮನೆಗಳಿಗೆ ಸ್ಥಳಾಂತರಿಸಲಾಗಿತ್ತು.

ಬುಧವಾರ ರಾತ್ರಿ ಮತ್ತು ಗುರುವಾರ ಬೆಳಗ್ಗೆ ಸುರಿದ ಭಾರಿ ಮಳೆಯಿಂದಾಗಿ ಹೊಸ ಬೂದಿಹಾಳ ಗ್ರಾಮದಲ್ಲಿರುವ ಎಸ್​ಸಿ ಕಾಲನಿ ಹಾಗೂ ಇತರ ಆಶ್ರಯ ಮನೆಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿದೆ. ಅಲ್ಲದೆ, ಗ್ರಾಮದ ಪಕ್ಕದಲ್ಲಿರುವ ಕುಂಬಾರ ಕೆರೆ ಹತ್ತಿರದ ಅಡ್ಡಹಳ್ಳ ಹಾಗೂ ಕೊಣ್ಣೂರಿನ ಕೊಳಚೆ ಕಾಲುವೆ ಸಂಪೂರ್ಣ ತುಂಬಿ ಹರಿದ ಪರಿಣಾಮ ಗ್ರಾಮದ 60ಕ್ಕೂ ಹೆಚ್ಚು ಕುಟುಂಬಗಳ ಮನೆಗಳಿಗೆ ನೀರು ಪ್ರವೇಶಿಸಿದೆ. ಸ್ಥಳಾಂತರಗೊಂಡ ಬೂದಿಹಾಳ ಗ್ರಾಮದಲ್ಲಿನ ಮನೆಗಳಿರದ 15ಕ್ಕೂ ಅಧಿಕ ಕುಟುಂಬಗಳು ಅಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗುಡಿಸಲು ಹಾಕಿಕೊಂಡು ವಾಸಿಸುತ್ತಿದ್ದವು. ಆದರೆ, ಮಳೆಗೆ ಶಾಲಾ ಆವರಣ ಕೂಡ ಸಂಪೂರ್ಣ ಜಲಾವೃತಗೊಂಡಿದ್ದರಿಂದ ಈ ಕುಟುಂಬಸ್ಥರು ಹಾಗೂ ಶಾಲೆಗೆ ಬರುವ ಮಕ್ಕಳು ತೊಂದರೆ ಅನುಭವಿಸುವಂತಾಗಿದೆ. ಗ್ರಾಮಸ್ಥರ ಮಾಹಿತಿ ಮೇರೆಗೆ ಉಪ ತಹಸೀಲ್ದಾರ್ ಧರ್ಮಪ್ಪ ಉಪ್ಪಾರ ಹಾಗೂ ಕೊಣ್ಣೂರ ಕಂದಾಯ ನಿರೀಕ್ಷಕ ಕೆ.ಆರ್. ಆರೇರ ಗುರುವಾರ ಸಂಜೆ ಸ್ಥಳಕ್ಕೆ ಬಂದು ಬೂದಿಹಾಳ ಗ್ರಾಮಸ್ಥರ ಸಮಸ್ಯೆ ಪರಿಶೀಲಿಸಿ, ಕೊಣ್ಣೂರಿನ ಪರಿಹಾರ ಕೇಂದ್ರಕ್ಕೆ ಬಂದು ಊಟದ ಸೌಲಭ್ಯ ಪಡೆದುಕೊಳ್ಳಲು ತಿಳಿಸಿದ್ದಾರೆ.

ಹೋರಾಟದ ಎಚ್ಚರಿಕೆ

‘ತುತ್ತು ಅನ್ನಕ್ಕಾಗಿ ನಿತ್ಯ 3 ಕಿಮೀ ದೂರದಲ್ಲಿರುವ ಕೊಣ್ಣೂರಿನ ಪರಿಹಾರ ಕೇಂದ್ರಕ್ಕೆ ಬರಲು ಆಗುವುದಿಲ್ಲ. ಬದಲಿಗೆ ಇಲ್ಲಿಯೇ ನಮಗೆ ಸುರಕ್ಷಿತ ಸ್ಥಳದಲ್ಲಿ ತಾತ್ಕಾಲಿಕ ತಗಡಿನ ಶೆಡ್ ನಿರ್ವಿುಸಬೇಕು. ಹೊಸ ಗ್ರಾಮದಲ್ಲಿರುವ ಚರಂಡಿಗಳನ್ನು ಸ್ವಚ್ಛಗೊಳಿಸಿ, ಸುಸಜ್ಜಿತ ರಸ್ತೆಗಳನ್ನು ನಿರ್ವಿುಸಬೇಕು. ಇಲ್ಲದಿದ್ದರೆ ಕಂದಾಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಧರಣಿ ನಡೆಸಬೇಕಾಗುತ್ತದೆ’ ಎಂದು ಗ್ರಾಮಸ್ಥ ರಾಮಚಂದ್ರ ಹಾದಿಮನಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಬಸಪ್ಪ ಪೂಜಾರ, ಅರ್ಜುನ ತಾಪಸಗಟ್ಟಿ, ಚಂದ್ರಪ್ಪ ಹೂಲಿಕೇರಿ, ಪುಂಡಲೀಕ ಹಾದಿಮನಿ, ಬಸವ್ವ ಪೂಜಾರ, ನಾಗವ್ವ ಪೂಜಾರ, ಉಮೇಶ ಮಾನೆ, ದುರಗವ್ವ ತಪಶೆಟ್ಟಿ, ಫಕೀರವ್ವ ಹಾದಿಮನಿ ಇತರರಿದ್ದರು.

ಸೂಕ್ತ ಕ್ರಮದ ಭರವಸೆ

ಉಪ ತಹಸೀಲ್ದಾರ್ ಧರ್ಮಪ್ಪ ಉಪ್ಪಾರ ಮಾತನಾಡಿ, ಜೋರಾಗಿ ಸುರಿದ ಮಳೆಯಿಂದಾಗಿ ಗ್ರಾಮದ ಬಳಿಯ ಅಡ್ಡಹಳ್ಳದ ಒತ್ತುವರಿ ನೀರು ಮತ್ತು ಕೊಳಚೆ ನೀರು ಹೆಚ್ಚಿನ ಪ್ರಮಾಣದಲ್ಲಿ ಬಂದು ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದೆ. ಇದರಿಂದಾಗಿ ಕೆಲ ಕುಟುಂಬದವರಿಗೆ ಸಮಸ್ಯೆಯಾಗಿದೆ. ಕೊಣ್ಣೂರಿನ ಪರಿಹಾರ ಕೇಂದ್ರಕ್ಕೆ ಬರುವಂತೆ ಅವರಿಗೆ ತಿಳಿಸಿದ್ದೇವೆ. ತಾತ್ಕಾಲಿಕ ತಗಡಿನ ಶೆಡ್ ನಿರ್ವಿುಸಿಕೊಡುವ ಕುರಿತು ಜಿಲ್ಲಾ ಮತ್ತು ತಾಲೂಕಾಡಳಿತದ ಮೇಲಧಿಕಾರಿಗಳ ಜೊತೆಗೆ ರ್ಚಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Leave a Reply

Your email address will not be published. Required fields are marked *