ಹಾವೇರಿ: ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಯಾದ ಮನೆಗಳ ಪಂಚನಾಮೆ ನಡೆಸಿ ಶನಿವಾರ ಸಂಜೆಯೊಳಗೆ ಸಂತ್ರಸ್ತರಿಗೆ ಪರಿಹಾರ ವಿತರಿಸಬೇಕು ಎಂದು ತಹಸೀಲ್ದಾರ್ಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅತಿವೃಷ್ಟಿ ಹಾನಿ ಕುರಿತು ಶುಕ್ರವಾರ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ತಹಸೀಲ್ದಾರ್ಗಳೊಂದಿಗೆ ಸಭೆಯಲ್ಲಿ ಅವರು ಮಾತನಾಡಿದರು. ಹಾನಿಯಾದ ಪ್ರತಿ ಮನೆಗಳಿಗೆ ಖುದ್ದಾಗಿ ತಹಸೀಲ್ದಾರ್ಗಳು ಭೇಟಿ ನೀಡಿ, ಮನೆಯ ಹತ್ತಿರವಿರುವ ಫೋಟೋ ತೆಗೆದು ಕಳುಹಿಸಬೇಕು. ಪರಿಹಾರ ಪಾವತಿಸಿದ ಕುರಿತು ಜಿಲ್ಲಾಧಿಕಾರಿ ಮೂಲಕ ಶನಿವಾರ ಸಂಜೆಯೊಳಗಾಗಿ ವರದಿ ಕಳುಹಿಸಬೇಕು ಎಂದು ತಾಕೀತು ಮಾಡಿದರು.
ಲೋಕೋಪಯೋಗಿ ಇಲಾಖೆ ಹಾಗೂ ಪಂಚಾಯತ್ ರಾಜ್ ಇಲಾಖಾ ಕಾರ್ಯನಿರ್ವಾಹಕ ಇಂಜಿನಿಯರ್ಗಳು ಮಳೆಯಿಂದ ಹಾನಿಯಾದ ರಸ್ತೆ, ಸೇತುವೆಗಳ ಸರ್ವೆಯನ್ನು ಶನಿವಾರ ಪೂರ್ಣಗೊಳಿಸಿ ಮಾಹಿತಿ ನೀಡಬೇಕು. ರಸ್ತೆಗಳು ಸಂಪರ್ಕ ಕಡಿತಗೊಂಡರೆ ತಾತ್ಕಾಲಿಕವಾಗಿ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ತುರ್ತು ದುರಸ್ತಿ ಕೈಗೊಳ್ಳಬೇಕು ಎಂದರು.
ಬೆಳೆಹಾನಿ ಸಮೀಕ್ಷೆಗೆ ತಂಡಗಳನ್ನು ರಚಿಸಿಕೊಂಡು ತಕ್ಷಣವೇ ಕಾರ್ಯ ಆರಂಭಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕರಿಗೆ ಸೂಚಿಸಿದರು.
ಜಿಪಂ ಸಿಇಒ ರಮೇಶ ದೇಸಾಯಿ, ಎಡಿಸಿ ಎಂ. ಯೋಗೇಶ್ವರ, ಗ್ರಾಮೀಣ ಹಾಗೂ ನಗರ ಪ್ರದೇಶ, ನದಿ, ಹಳ್ಳ, ಕೆರೆ ಪಾತ್ರಗಳಲ್ಲಿರುವ ಗ್ರಾಮಗಳಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ವಿವರಿಸಿದರು.
ತಾಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ಅತಿವೃಷ್ಟಿ ಉಂಟಾದರೆ ನೆರೆಯಿಂದ ಜಿಲ್ಲೆಯ 144 ಗ್ರಾಮಗಳು ತೊಂದರೆಗೊಳಗಾಗಬಹುದೆಂದು ಗುರುತಿಸಲಾಗಿದೆ. ಈ ಗ್ರಾಮಗಳ ಜನರಿಗಾಗಿ ಕಾಳಜಿ ಕೇಂದ್ರ ತೆರೆಯಲು ಶಾಲಾ ಕಟ್ಟಡ ಹಾಗೂ ಸಮುದಾಯ ಭವನ ಸೇರಿ 151 ಸ್ಥಳಗಳನ್ನು ಗುರುತಿಸಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ, ಉಪವಿಭಾಗಾಧಿಕಾರಿ ಡಾ. ದಿಲೀಪ್ ಶಶಿ, ಎಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ತಹಸೀಲ್ದಾರ್ ಶಂಕರ ಜಿ.ಎಸ್., ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪ್ರದೀಪ ಇತರರಿದ್ದರು.