ಸಂತೆ ಮೈದಾನದಲ್ಲಿ ಒತ್ತುವರಿ ತೆರವು

ಚಿಕ್ಕಬಳ್ಳಾಪುರ:  ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಸೋಮವಾರ ನಗರದ ಹಳೇ ಸಂತೆ ಮೈದಾನ ಮಾರುಕಟ್ಟೆ ಸುತ್ತಲಿನ ಫುಟ್​ಪಾತ್ ಒತ್ತುವರಿಯನ್ನು ಸಂಚಾರಿ ಠಾಣೆ ಪೊಲೀಸರ ನೆರವಿನೊಂದಿಗೆ ನಗರಸಭೆ ತೆರವುಗೊಳಿಸಿತು.

ಫುಟ್​ಪಾತ್ ಮೇಲೆ ಹಲವು ವರ್ಷಗಳಿಂದಲೂ ವ್ಯಾಪಾರಸ್ಥರು ಸರಕುಗಳನ್ನಿಟ್ಟುಕೊಂಡು ವಹಿವಾಟು ನಡೆಸುತ್ತಿದ್ದರು. ಕೆಲ ಅಂಗಡಿ ಮಾಲೀಕರು ಅಡ್ಡಲಾಗಿ ಚಪ್ಪರಗಳನ್ನು ಹಾಕಿಕೊಂಡಿದ್ದರು. ಇದರಿಂದ ಜನರು ಓಡಾಡಲು ತೊಂದರೆ ಅನುಭವಿಸುತ್ತಿದ್ದರು. ಇದರ ನಡುವೆ ವ್ಯಾಪಕ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಯಿತು.

ಇದರ ಕುರಿತು ಭಾನುವಾರವೇ ಸಂಬಂಧಪಟ್ಟ ವ್ಯಾಪಾರಸ್ಥರಿಗೆ ಮಾಹಿತಿ ನೀಡಲಾಗಿತ್ತು. ಆದರೂ ತೆರವುಗೊಳಿಸಿರಲಿಲ್ಲ. ಇದರಿಂದ ಪೌರಕಾರ್ವಿುಕರು ಮಾರುಕಟ್ಟೆ ಎಡ ಮತ್ತು ಬಲಬದಿ ಫುಟ್​ಪಾತ್ ಮೇಲಿನ ಸರಕುಗಳನ್ನು ತೆಗೆಸಿದರು. ಅಡ್ಡಲಾಗಿದ್ದ ಚಪ್ಪರದ ಮರ ಕಂಬಗಳನ್ನು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡರು.

ಮಾರುಕಟ್ಟೆ ಅಂಗಡಿಗಳಲ್ಲೇ ವಹಿವಾಟು ನಡೆಸಬೇಕು. ಯಾವುದೇ ಕಾರಣಕ್ಕೂ ಫುಟ್​ಪಾತ್ ಒತ್ತುವರಿ ಮಾಡಿಕೊಳ್ಳಬಾರದು. ಈಗಾಗಲೇ ಹಲವು ಬಾರಿ ಎಚ್ಚರಿಕೆ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ನಿರ್ಲಕ್ಷಿ್ಯಸಿದರೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುತ್ತದೆ ಎಂದು ಸಂಚಾರಿ ಠಾಣೆ ಸಬ್ ಇನ್ಸ್​ಪೆಕ್ಟರ್ ಓಂಪ್ರಕಾಶ್​ಗೌಡ ಎಚ್ಚರಿಕೆ ನೀಡಿದರು. ಪೌರಾಯುಕ್ತ ಉಮಾಕಾಂತ್, ಸಂಚಾರಿ ಠಾಣೆ ಸಹಾಯಕ ಸಬ್ ಇನ್ಸ್​ಪೆಕ್ಟರ್ ವೇಣುಗೋಪಾಲ್ ಮತ್ತಿತರರಿದ್ದರು.

ಅಲ್ಲಲ್ಲಿ ಮಾತಿನ ಚಕಮಕಿ:  ದುಬಾರಿ ಬಾಡಿಗೆ ಪಾವತಿಸಲಾಗದೆ ಮಾರುಕಟ್ಟೆ ರಸ್ತೆಬದಿಯಲ್ಲಿ ತರಕಾರಿ, ಸೊಪ್ಪು, ಹೂವು ಹಣ್ಣು, ಇತರ ಸಾಮಗ್ರಿಗಳನ್ನಿಟ್ಟುಕೊಂಡು ವಹಿವಾಟು ನಡೆಸಲಾಗುತ್ತಿದೆ. ಇದೀಗ ಖಾಲಿ ಮಾಡಿಸುತ್ತಿರುವ ಹಿನ್ನೆಲೆಯಲ್ಲಿ ನಷ್ಟ ಉಂಟಾಗುತ್ತದೆ. ಆರ್ಥಿಕ ಸಂಕಷ್ಟದಿಂದ ಕುಟುಂಬ ಬೀದಿಪಾಲಾಗುತ್ತದೆ ಎಂದು ಹಲವರು ಅಳಲು ತೋಡಿಕೊಂಡರು. ಕೊನೆಗೆ ಎಚ್ಚರಿಕೆಗೆ ತೆರವುಗೊಳಿಸಿದರು. ಇನ್ನೂ ಇತರೆಡೆ ಅಕ್ರಮ ಒತ್ತುವರಿಯಾಗಿದ್ದರೂ ಸುಮ್ಮನಿರುವ ಅಧಿಕಾರಿಗಳು, ಬಡ ಮತ್ತು ಮಧ್ಯಮ ವರ್ಗದ ವ್ಯಾಪಾರಸ್ಥರನ್ನು ಮಾತ್ರ ತೆರವುಗೊಳಿಸುತ್ತಿದ್ದಾರೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದರು.

ಖಾಲಿ ಇರುವ ನಗರಸಭೆ ಮಳಿಗೆ:  ಮಾರುಕಟ್ಟೆಯಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ತರಕಾರಿ, ಮಾಂಸ ಮಾರಾಟ ಮಳಿಗೆ ನಿರ್ವಿುಸಲಾಗಿದೆ. ಆದರೆ, ಇವುಗಳನ್ನು ಹರಾಜು ಹಾಕಿ, ಬಾಡಿಗೆಗೆ ನೀಡಿಲ್ಲ. ಹಲವು ತಿಂಗಳಿಂದಲೂ ಸಬೂಬುಗಳನ್ನು ಹೇಳಿಕೊಂಡು ಕಾಲಹರಣ ಮಾಡಲಾಗುತ್ತಿದೆ. ಇದರಿಂದ ನಗರಸಭೆ ಆದಾಯಕ್ಕೆ ಖೋತಾ ಬಿದ್ದಿದೆ. ಮತ್ತೊಂದೆಡೆ ಉತ್ತಮ ನಿರ್ವಹಣೆ ಇಲ್ಲದೆ ಕಟ್ಟಡ ದಿನೇದಿನೆ ಹಾಳಾಗುತ್ತಿದೆ. ಎಲ್ಲೆಂದರಲ್ಲಿ ತ್ಯಾಜ್ಯ ಎಸೆದಿದ್ದು, ಅಕ್ರಮವಾಗಿ ವಸ್ತುಗಳನ್ನು ದಾಸ್ತಾನಿಟ್ಟುಕೊಳ್ಳಲಾಗಿದೆ. ಅನೈತಿಕ ಚಟುವಟಿಕೆ ತಾಣವಾಗಿ ಪರಿವರ್ತನೆಯಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಮಳಿಗೆ ನಿರ್ವಣದ ವೇಳೆ ಅಂಗಡಿಗಳನ್ನು ಬಾಡಿಗೆ ವಿಚಾರದಲ್ಲಿ ಸ್ಥಳೀಯ ವ್ಯಾಪಾರಸ್ಥರಿಗೆ ಮೊದಲ ಆದ್ಯತೆ ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ದುಬಾರಿ ಮುಂಗಡ ಮತ್ತು ಬಾಡಿಗೆ ಹಣ ಬಡ ವ್ಯಾಪಾರಸ್ಥರಿಗೆ ಎಟುಕದಂತಾಗಿದ್ದು, ಹರಾಜು ಪ್ರಕ್ರಿಯೆ ಮುಂದೂಡಲಾಗುತ್ತಿದೆ.

Leave a Reply

Your email address will not be published. Required fields are marked *