ಸಂತೆಯಲ್ಲಿ ಕಳ್ಳರ ಕರಾಮತ್ತು

ರಟ್ಟಿಹಳ್ಳಿ:ಪಟ್ಟಣದಲ್ಲಿ ಪ್ರತಿ ಶುಕ್ರವಾರ ಜರುಗುವ ಸಂತೆ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಗ್ರಾಹಕರ ಮೊಬೈಲ್ ಕಳ್ಳತನ ಪ್ರಕರಣ ಹೆಚ್ಚುತ್ತಿದ್ದು, ಸ್ಥಳೀಯ ಪೊಲೀಸ್ ಇಲಾಖೆ ಹೆಚ್ಚಿನ ಜಾಗೃತಿ ವಹಿಸಬೇಕಾಗಿದೆ.

ಇಲ್ಲಿನ ಸಂತೆಗೆ ಪಟ್ಟಣದ ಸಾರ್ವಜನಿಕರು, ಕುಡುಪಲಿ, ಮಾದಪುರ, ಸಣ್ಣಗುಬ್ಬಿ, ಕಡೂರ, ಬುಳ್ಳಾಪುರ, ಮಕರಿ, ದೊಡ್ಡಗುಬ್ಬಿ, ನೇಶ್ವಿ, ಎಲಿವಾಳ, ಕಣವಿಸಿದ್ದಗೇರಿ, ತೋಟಗಂಡಿ, ಜೋಕನಾಳ, ಮಾಸೂರ ಸೇರಿ ಸುತ್ತಲಿನ 30ರಿಂದ 40 ಗ್ರಾಮಗಳಿಂದ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಹಳೇ ಬಸ್ ನಿಲ್ದಾಣ, ಕಾರಂಜಿ ಸರ್ಕಲ್, ಬೆಲ್ಲದ ಬೇಟಿ, ವೀರಭದ್ರೇಶ್ವರ ದೇವಸ್ಥಾನ ರಸ್ತೆಗಳಲ್ಲಿ ಸಂತೆಯನ್ನು ವಿಸ್ತಾರಗೊಳಿಸಲಾಗಿದೆ.

ಸ್ಮಾರ್ಟ್​ಫೋನ್ ಕಳವು:ಸಾಮಾನ್ಯವಾಗಿ ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಸಂತೆಯಲ್ಲಿ ಜನದಟ್ಟಣೆ ಕಡಿಮೆ ಇರುತ್ತದೆ. ಮಧ್ಯಾಹ್ನ 3ರಿಂದ ಸಂಜೆ 7ರವರೆಗೆ ರೈತಾಪಿ ಜನರು, ಸರ್ಕಾರಿ ನೌಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಮಾರುಕಟ್ಟೆಯಲ್ಲಿ ಜನಸಂದಣಿ ಹೆಚ್ಚಿರುತ್ತದೆ. ಈ ವೇಳೆ ಕಳ್ಳರು ಗ್ರಾಹಕರ ದುಬಾರಿ ಮೊಬೈಲ್​ಗಳನ್ನು ಚಾಣಾಕ್ಷತನದಿಂದ ಎಗರಿಸುತ್ತಾರೆ. ಸಂತೆಗೆ ಬರುವ ಗ್ರಾಹಕರ ಷರ್ಟ್, ಪ್ಯಾಂಟ್ ಕಿಸೆಗಳಲ್ಲಿರುವ ದೊಡ್ಡ ಸೈಜಿನ ಸ್ಮಾರ್ಟ್ ಫೋನ್​ಗಳ ಮೇಲೆ ಕಣ್ಣಿಡುವ ಕಳ್ಳರು ಅವರ ಹಿಂದೆಯೇ ಓಡಾಡಿಕೊಂಡು ಅವರ ಚಲನವಲನಗಳನ್ನು ಗಮನಿಸುತ್ತಾರೆ. ನಂತರ ತರಕಾರಿ ಕೊಳ್ಳುವ ಸಮಯದಲ್ಲಿ ಅವರಿಗೆ ಅರಿವಿಲ್ಲದಂತೆ ಫೋನ್​ಗಳನ್ನು ಎಗರಿಸಿ ಮಾಯವಾಗುತ್ತಾರೆ. ಮೊಬೈಲ್ ಕಳಕೊಂಡ ಗ್ರಾಹಕರು ತಮ್ಮ ನಂಬರಿಗೆ ಫೋನ್ ಮಾಡಿದರೆ ಸ್ವಚ್ ಆಫ್ ಆಗಿರುತ್ತದೆ.

ಜಾಗದ ಕೊರತೆ : ಸುಮಾರು 35 ವರ್ಷಗಳಿಂದ ಇಲ್ಲಿನ ಹಳೇ ಬಸ್ ನಿಲ್ದಾಣದ ಬಳಿ ಸಂತೆ ನಡೆಯುತ್ತಿದೆ. ತಾಲೂಕು ಮಧ್ಯವರ್ತಿ ಸ್ಥಳವಾದ್ದರಿಂದ ಇಲ್ಲಿನ ಸಂತೆಗೆ ದಿನೇದಿನೆ ವ್ಯಾಪಾರಸ್ಥರು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಜನದಟ್ಟಣೆ ಅಧಿಕವಾಗಿರುತ್ತದೆ. ಆದರೆ, ಸಂತೆಯಲ್ಲಿ ಜಾಗದ ಕೊರತೆ ಇರುವುದರಿಂದ ಸಂತೆ ಎನ್ನುವುದು ಕಿಷ್ಕಿಂಧೆಯಂತಾಗಿದೆ. ವ್ಯಾಪಾರಸ್ಥರಿಗೆ ಸರಿಯಾಗಿ ತಮ್ಮ ಸಾಮಾನು ಸರಂಜಾಮುಗಳನ್ನು ಇಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಸಂತೆಗೆ ಪ್ರತ್ಯೇಕ ವಿಶಾಲವಾದ ಮೈದಾನದ ಅವಶ್ಯಕತೆ ಇದ್ದು, ಸ್ಥಳೀಯ ಆಡಳಿತ ಗಮನಹರಿಸಬೇಕು ಎಂದು ವ್ಯಾಪಾರಸ್ಥರು ಹಾಗೂ ರೈತರು ಒತ್ತಾಯಿಸಿದ್ದಾರೆ.

ಹೆಚ್ಚುತ್ತಿರುವ ಸ್ಮಾರ್ಟ್​ಪೋನ್ ಕಳ್ಳತನ ಪ್ರಕರಣ

ಕಳೆದ 4-5 ವಾರಗಳ ಸಂತೆಗಳಲ್ಲಿ 15ಕ್ಕೂ ಹೆಚ್ಚು ಸ್ಮಾರ್ಟ್​ಪೋನ್​ಗಳು ಕಳ್ಳತನವಾಗಿರುವ ಕುರಿತು ಸಾರ್ವಜನಕರು ದೂರಿದ್ದಾರೆ. ಕೆಲವು ಗ್ರಾಹಕರು ರಸೀದಿ ಇದ್ದರಷ್ಟೇ ಪೊಲೀಸ್ ಠಾಣೆಗೆ ದೂರು ನೀಡುತ್ತಾರೆ. ಸ್ಥಳೀಯ ಪೊಲೀಸ್ ಇಲಾಖೆ ಪ್ರತಿ ವಾರದ ಸಂತೆಗಳಲ್ಲಿ 2-3 ಪೊಲೀಸ್ ಸಿಬ್ಬಂದಿಯನ್ನು ಮಾತ್ರ ನಿಯೋಜನೆ ಮಾಡುತ್ತಿದೆ. ಒಂದು ವೇಳೆ ಬೇರೆಡೆ ಬಂದೋಬಸ್ತ್ ಇದ್ದಲ್ಲಿ ಮಾರುಕಟ್ಟೆಯಲ್ಲಿ ಪೊಲೀಸರೇ ಇರುವುದಿಲ್ಲ. ಇದು ಕಳ್ಳರಿಗೆ ವರದಾನವಾಗಿ ಪರಿಣಮಿಸಿದೆ.

ಸುಮಾರು ದಿವಸಗಳಿಂದ ಇಲ್ಲಿನ ಸಂತೆಯಲ್ಲಿ ಮೊಬೈಲ್​ಫೋನ್ ಕಳ್ಳತನದ ಬಗ್ಗೆ ಠಾಣೆಗೆ ಮಾಹಿತಿ ಬಂದಿದೆ. ಸಂತೆಗಾಗಿ ಪ್ರತಿ ವಾರ 3 ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುತ್ತಿದೆ. ಮೊಬೈಲ್ ಕಳ್ಳರ ಬಗ್ಗೆ ಪೊಲೀಸ್ ಸಿಬ್ಬಂದಿಗೆ ಹೆಚ್ಚಿನ ಜಾಗ್ರತೆ ವಹಿಸಲು ತಿಳಿಸಲಾಗುವುದು. ಗ್ರಾಹಕರಿಗೆ ಯಾವುದೇ ವ್ಯಕ್ತಿಯ ಬಗ್ಗೆ ಅನುಮಾನ ಬಂದರೆ ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು.

| ಬಿ.ಎಸ್. ಅರವಿಂದ ಪಿ.ಎಸ್.ಐ ರಟ್ಟಿಹಳ್ಳಿ

ಕಳೆದ ವಾರದ ಸಂತೆಯಲ್ಲಿ ನನ್ನ 18 ಸಾವಿರದ ಮೊಬೈಲ್ ಹಾಗೂ ಗೆಳೆಯರೊಬ್ಬರ ಮೊಬೈಲ್ ಅನ್ನು ಸಂತೆಯಲ್ಲಿ ಕಳವು ಮಾಡಲಾಗಿದೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ನಾವು ಜಾಗರೂಕತೆಯಿಂದ ಇದ್ದರೂ ಕಳ್ಳರು ನಮ್ಮನ್ನು ಯಾಮಾರಿಸುತ್ತಾರೆ. ಪೊಲೀಸರು ಕಳ್ಳರ ಕರಾಮತ್ತಿಗೆ ಕಡಿವಾಣ ಹಾಕಬೇಕಿದೆ.

| ಮಹೇಶ ಕೆರೂರು ಶಿಕ್ಷಕ