ಸಂತೃಪ್ತ ಜೀವನ ನಮ್ಮದಾಗಲಿ

| ಮಹಾದೇವ ಬಸರಕೋಡ

ಬಹುತೇಕ ಬಾರಿ ಇತರರ ಬದುಕಿನೊಂದಿಗೆ ನಮ್ಮಲ್ಲಿ ಇಲ್ಲದಿರುವ ಎಲ್ಲವನ್ನೂ ಹೋಲಿಸಿಕೊಳ್ಳುತ್ತ, ಲಭ್ಯವಿರುವ ಎಲ್ಲ ಅವಕಾಶಗಳನ್ನು ನಮ್ಮದಾಗಿಸಿಕೊಳ್ಳುವ ಪ್ರಯತ್ನಗಳನ್ನು ಮಾಡುತ್ತೇವೆ. ಇದರಿಂದ ಬದುಕು ಮತ್ತೆ ಮತ್ತೆ ಬಂಧನಕ್ಕೆ ಒಳಗಾಗುತ್ತದೆ. ಮನಸ್ಸು ಮತ್ತಷ್ಟು ವಿಕೃತಗೊಳ್ಳುವ ನಿಟ್ಟಿನಲ್ಲಿ ಸಾಗುತ್ತಲೇ ಇರುತ್ತದೆ. ಪಂಚೇಂದ್ರಿಯಗಳು ಜಗದ ಅರಿವನ್ನು ಅರ್ಥೈಸಿಕೊಳ್ಳಲು, ಅನುಭವಿಸಲು ಇವೆ ಎಂಬುದನ್ನು ಮರೆತು ಕ್ಷಣಿಕ ಸುಖಗಳ ಬೆನ್ನು ಹತ್ತಿ ಬದುಕನ್ನು ಬರಡಾಗಿಸಿಕೊಳ್ಳುತ್ತೇವೆ. ‘ಇರುವುದೆಲ್ಲವ ಬಿಟ್ಟು ಇರದುದರ ಕಡೆಗೆ ತುಡಿಯುತ್ತಲೇ ಇರುತ್ತೇವೆ’. ನಮ್ಮ ನಿರೀಕ್ಷೆಗಳು ಫಲಿಸದಿದ್ದಾಗ ಹತಾಶರಾಗುತ್ತೇವೆ. ವ್ಯಗ್ರಗೊಳ್ಳುತ್ತೇವೆ. ಇದರಿಂದ ಬದುಕು ಅಸಹನೀಯವೆನಿಸತೊಡಗುತ್ತದೆ.

ಜಗತ್ತಿನ ಬಹುದೊಡ್ಡ ತತ್ತ್ವಜ್ಞಾನಿ ಡಿಯೋಜನಿಯಸ್ ಬ್ರೆಡ್ಡು ಮತ್ತು ಕಾಳುಗಳನ್ನು ಮಾತ್ರ ತಿಂದು ಜೀವಿಸುತ್ತಿದ್ದ. ತನ್ನ ಬಹುತೇಕ ಬದುಕನ್ನು ಹೀಗೆಯೇ ಕಳೆದ. ಅದು ಅವನ ನಿತ್ಯದ ರೂಢಿಯೇ ಅಗಿತ್ತು. ಹೊಟ್ಟೆ ತುಂಬುವಷ್ಟು ಬ್ರೆಡ್ಡು ಮತ್ತು ಕಾಳು ಸಿಕ್ಕರೆ ಅದನ್ನು ಸಂತೋಷದಿಂದ ತಿಂದು ತೃಪ್ತಭಾವ ಅನುಭವಿಸುತ್ತಿದ್ದ.

ರಾಜನ ಅಡಿಯಾಳಾಗಿದ್ದುಕೊಂಡು ವೈಭವದ ಬದುಕನ್ನು ಅಳವಡಿಸಿಕೊಂಡು ಸಾಕಷ್ಟು ಸುಖವಾಗಿ ಬದುಕುತ್ತಿದ್ದ ಮತ್ತೊಬ್ಬ ತತ್ತ್ವಜ್ಞಾನಿ ಈತನನ್ನು ಭೇಟಿಯಾದ. ಸೊರಗಿದಂತೆ ಕಾಣುತ್ತಿದ್ದ ಡಿಯೋಜನಿಸ್​ನನ್ನು ಕುರಿತು, ‘ನೀನು ರಾಜನಿಗೆ ಹೊಂದಿಕೊಂಡು ಇರುವುದನ್ನು ಕಲಿತುಕೊ. ಆಗ ನೀನು ಕೇವಲ ಬ್ರೆಡ್ಡು ಮತ್ತು ಕಾಳುಗಳಿಂದ ಬದುಕಬೇಕಾಗುವುದಿಲ್ಲ. ನನ್ನಂತೆಯೇ ಸುಖವಾಗಿ ಇರಬಹುದು’ ಎಂದ.

‘ಕಾಳು ಮತ್ತು ಬ್ರೆಡ್ಡು ತಿಂದು ಬದುಕಲು ಕಲಿತರೆ ರಾಜನನ್ನು ಬೆಳೆಸಬೇಕಾದ, ಅವನ ಅಡಿಯಾಳಾಗಿರುವ, ಹೇಡಿಯಾಗಿ ಬದುಕುವ ಅಗತ್ಯವಿರುವುದಿಲ್ಲ. ನನ್ನಂತೆಯೇ ತೃಪ್ತ ಬದುಕನ್ನು ನಿನ್ನದಾಗಿಸಿಕೊಳ್ಳಬಹುದು’ ಎಂದ ಡಿಯೋಜನಿಸ್.

ದಾಸರೋ ನಾವೆಲ್ಲ, ಶುನಕನಂದದಿ ಜಗದ |

ವಾಸನೆಗಳೆಳತಕ್ಕೆ ದಿಕ್ಕುದಿಕ್ಕಿನಲಿ ||

ಪಾಶಗಳು ಹೊರಗೆ, ಕೊಂಡಿಗಳು ನಮ್ಮೊಳಗಿಹವು |

ವಾಸನಾಕ್ಷಯ ಮೋಕ್ಷ ಮಂಕುತಿಮ್ಮ ||

ಎಂಬ ಡಿವಿಜಿ ಅವರ ಮಾತಿನಂತೆ ನಾವೆಲ್ಲ ಅನಗತ್ಯ ಪ್ರಲೋಭನೆಗಳ ಪ್ರಭಾವಕ್ಕೆ ಒಳಗಾಗದೆ, ಇಂದ್ರಿಯ ಸುಖಗಳಿಗೆ ದಾಸರಾಗದೆ, ಭ್ರಮೆಯ ಪಾಶಗಳಿಗೆ ಸಿಲುಕದೆ, ನಮ್ಮೊಳಗಿರುವ ಕೊಂಡಿಗಳನ್ನು ಬಿಡಿಸಿಕೊಳ್ಳುವುದರಿಂದ, ಒಂದಷ್ಟು ಪ್ರಬುದ್ಧತೆ ರೂಢಿಸಿಕೊಳ್ಳುವುದರಿಂದ ಬದುಕನ್ನು ಸುಂದರವಾಗಿಸಿಕೊಳ್ಳಬಹುದು. ಅನಗತ್ಯ ಆಸೆಗಳ ಬೆಂಬತ್ತಿ ನಾವು ಇಲ್ಲದ ಸಂಕೀರ್ಣತೆಗಳನ್ನು ಸೃಷ್ಟಿಸಿಕೊಳ್ಳುತ್ತೇವೆ. ಸರಳ ಬದುಕು ನಿಜಕ್ಕೂ ತುಂಬ ಸುಂದರ ಎಂಬ ಸತ್ಯದ ಅರಿವು ನಮಗೆ ಬಾರದಿರುವುದೇ ಇದಕ್ಕೆ ಬಹುಮುಖ್ಯ ಕಾರಣ. ಇಂತಹ ಒಂದಷ್ಟು ಸಣ್ಣ ಸತ್ಯಗಳನ್ನು ಅರಿತುಕೊಳ್ಳುವುದರಿಂದ ಬದುಕನ್ನು ಇನ್ನಿಲ್ಲದ ಜಂಜಾಟಗಳಿಂದ ಬಿಡಿಸಿಕೊಳ್ಳಬಹುದಾಗಿದೆ. ಸಂತೃಪ್ತ ಬದುಕನ್ನು ನಮ್ಮದಾಗಿಸಿಕೊಳ್ಳಬಹುದಾಗಿದೆ.

(ಲೇಖಕರು ಹವ್ಯಾಸಿ ಬರಹಗಾರರು) (ಪ್ರತಿಕ್ರಿಯಿಸಿ: [email protected])

Leave a Reply

Your email address will not be published. Required fields are marked *