ಗಜೇಂದ್ರಗಡ: ಸುಗಮ ಸಂಚಾರಕ್ಕೆ ಸಂಚಕಾರ ತಂದೊಡ್ಡುತ್ತಿದ್ದ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಟಿಟಿಡಿ ಕಲ್ಯಾಣ ಮಂಟಪದವರೆಗಿನ ಗದಗ-ಗಜೇಂದ್ರಗಡ ರಸ್ತೆಗೆ ಕಾಂಕ್ರೀಟೀಕರಣದ ಭಾಗ್ಯ ಒದಗಿ ಬಂದಿದ್ದು, ಕಾಮಗಾರಿ ಭರದಿಂದ ನಡೆಯುತ್ತಿದೆ.

ಬೇಸಿಗೆಯಲ್ಲಿ ಧೂಳು, ಮಳೆಗಾಲದಲ್ಲಿ ಗುಡ್ಡದ ನೀರು ನೇರವಾಗಿ ಟಿಟಿಡಿ ಕಲ್ಯಾಣಮಂಟಪ ಎದುರಿನ ರಸ್ತೆಯಲ್ಲಿ ಬೃಹತ್ ಪ್ರಮಾಣದಲ್ಲಿ ಶೇಖರಣೆಗೊಂಡು ಕೆಸರುಗದ್ದೆಯಾಗಿ ಸಮಸ್ಯೆ ತಂದೊಡ್ಡುತ್ತಿತ್ತು. ಇದೀಗ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಅನುದಾನದಲ್ಲಿ 1.50 ಕೋಟಿ ರೂ. ವೆಚ್ಚದಲ್ಲಿ 500 ಮೀಟರ್ ಕಾಂಕ್ರೀಟ್ ಕಾಮಗಾರಿ ವೇಗವಾಗಿ ನಡೆಯುತ್ತಿದ್ದು, ಸಾರ್ವಜನಿಕರಲ್ಲಿ ತುಸು ನೆಮ್ಮದಿ ತಂದಿದೆ.
ಹದಗೆಟ್ಟ ಗದಗ ರಸ್ತೆಯ ಕುರಿತು ‘ವಿಜಯವಾಣಿ’ ಪತ್ರಿಕೆಯಲ್ಲಿ ವರದಿ ಪ್ರಕಟಿಸಲಾಗಿತ್ತು. ಹಾಗೆಯೇ, ಅನೇಕ ಕನ್ನಡ ಪರ ಸಂಘಟನೆಗಳು, ವಿವಿಧ ಪಕ್ಷದ ಮುಖಂಡರು ಪ್ರತಿಭಟನೆ ನಡೆಸಿದ್ದರು. ಪಿಡಬ್ಲ್ಯುಡಿ ಇಲಾಖೆಯ ಗಮನ ಸೆಳೆದ ಶಾಸಕ ಕಳಕಪ್ಪ ಬಂಡಿ ಸತತ ಪರಿಶ್ರಮದ ಫಲವಾಗಿ ಕೆಲ ದಿನಗಳ ಹಿಂದೆ ಅವರೇ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದರು. ಗುತ್ತಿಗೆದಾರರಿಗೆ ನಿರ್ಮಾಣ ಕಾರ್ಯ ಬೇಗ ಮುಗಿಸುವಂತೆ ಸೂಚಿಸಿದರು. ಪರಿಣಾಮ ಕಾಮಗಾರಿ ಬಿರುಸಿನಿಂದ ನಡೆದಿದೆ.
ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಮುಗಿಸುವುದಾಗಿ ಗುತ್ತಿಗೆದಾರ ನಾಗಣ್ಣ ಲಕ್ಕಲಕಟ್ಟಿ ತಿಳಿಸಿದ್ದಾರೆ. ಮೇಲಿಂದ ಮೇಲೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಗುಣಮಟ್ಟ ಪರೀಕ್ಷಿಸಲಾಗುತ್ತಿದ್ದು, 15 ದಿನದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಪಿಡಬ್ಲ್ಯುಡಿ ಇಲಾಖೆ ಸಹಾಯಕ ಇಂಜಿನಿಯರ್ ಪಿ.ಎಚ್. ಕೊತಬಾಳ ತಿಳಿಸಿದ್ದಾರೆ.