More

  ಸಂಚಾರ ನಿಯಮಗಳ ಅರಿವು ಮೂಡಿಸಿದ ಪೊಲೀಸರು

  ದಾವಣಗೆರೆ : ಕಿಂಕರರೆ ಆತನನ್ನು ಎಳೆದು ತನ್ನಿ, ಏನು ಇವರ ಜಾತಕ…? ಮಹಾಸ್ವಾಮಿಗಳೆ, ಈತ ಭೂಲೋಕದಲ್ಲಿ ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಸವಾರಿ ಮಾಡಿದ್ದಾನೆ. ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಾನೆ. ಓ ಹೌದಾ, ಏನು ಮಾನವ, ಪೊಲೀಸರು ಅಷ್ಟೊಂದು ಜಾಗೃತಿ ಮೂಡಿಸಿದರೂ ಅರಿವು ಮೂಡಿಲ್ಲವೆ, ಇದು ನಿಮಗೆ ಕೊನೆಯ ಎಚ್ಚರಿಕೆ…

  ಇವು ಯಾವುದೇ ನಾಟಕದ ಡೈಲಾಗ್‌ಗಳಲ್ಲ, ದಾವಣಗೆರೆ ದಕ್ಷಿಣ ಸಂಚಾರ ಠಾಣೆಯ ಪೊಲೀಸರು, ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಸಾರ್ವಜನಿಕರಲ್ಲಿ ಸಂಚಾರ ನಿಯಮಗಳ ಕುರಿತು ಅರಿವು ಮೂಡಿಸಿದ ರೀತಿಯಿದು. ನಗರದ ಜಯದೇವ ವೃತ್ತದಲ್ಲಿ ಶುಕ್ರವಾರ ಬೆಳಗ್ಗೆ ಇದನ್ನು ಆಯೋಜಿಸಲಾಗಿತ್ತು. ಪೇದೆ ರಾಮಾಂಜನೇಯ ಯಮನ ಪಾತ್ರದಲ್ಲಿ, ಹರೀಶ್ ನಾಯ್ಕ ಕಿಂಕರನಾಗಿ, ಮಂಜುನಾಥ್ ಚಿತ್ರಗುಪ್ತನ ಪಾತ್ರವನ್ನು ನಿರ್ವಹಿಸಿದರು.

  ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ವ್ಯಕ್ತಿಯನ್ನು ತಡೆದು ಆತನಿಗೆ ಗುಲಾಬಿ ಹೂವು ನೀಡುವ ಮೂಲಕ ಜಾಗೃತಿ ಮೂಡಿಸಿದರು. ಮತ್ತೊಬ್ಬ ಚಾಲಕ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತ ವಾಹನ ಚಾಲನೆ ಮಾಡುತ್ತಿದ್ದ. ಆತನ ಮೇಲೆ ಯಮಪಾಶವನ್ನು ಎಸೆದು ಯಮನ ಪಾತ್ರಧಾರಿಯ ಬಳಿಗೆ ಕರೆತಂದರು. ಚಿತ್ರಗುಪ್ತ ಪಾತ್ರಧಾರಿ ಆತನ ಜಾತಕವನ್ನು ಹೇಳಿದ. 

  ಆಟೋ ಚಾಲಕನೊಬ್ಬ ಮಿತಿಗಿಂತ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರನ್ನು ಕೂಡಿಸಿಕೊಂಡು ಹೋಗುತ್ತಿದ್ದ. ಆತನನ್ನು ತಡೆದು ಪ್ರಶ್ನಿಸಲಾಯಿತು. ನಿಮಗೆ ನಿಯಮಗಳ ಅರಿವಿಲ್ಲವೆ, ಸಮವಸ್ತ್ರ ಏಕೆ ಧರಿಸಿಲ್ಲ ಎಂದು ಕೇಳಿದರು. ಸೀಟ್ ಬೆಲ್ಟ್ ಧರಿಸದ ಕಾರು ಚಾಲಕನಿಗೂ ಅದೇ ರೀತಿಯಾಗಿ ಜಾಗೃತಿ ಮೂಡಿಸಲಾಯಿತು. 

  ನಗರ ಸಾರಿಗೆ ಬಸ್ ಏರಿದ ಯಮ ಕಿಂಕರ ವೇಷಧಾರಿ ಪೊಲೀಸರು ಅದರ ಚಾಲಕನಿಗೆ ಸಂಚಾರ ನಿಯಮಗಳ ಬಗ್ಗೆ ತಿಳಿಸಿದರು. ಸಾರ್ವಜನಿಕರು ಚಾಲಕನನ್ನೇ ನಂಬಿ ಬಸ್‌ನಲ್ಲಿ ಪ್ರಯಾಣಿಸುತ್ತಾರೆ. ನೀವೇ ನಿಯಮ ಪಾಲನೆ ಮಾಡದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.

  ಅರಿವು ಮೂಡಿಸುವ ಪರಿಕಲ್ಪನೆ ದಕ್ಷಿಣ ಸಂಚಾರ ಠಾಣೆಯ ಪಿಎಸ್‌ಐ ಮಂಜುನಾಥ ಅರ್ಜುನ ಲಿಂಗಾರೆಡ್ಡಿ ಅವರದಾಗಿತ್ತು. ಮತ್ತೊಬ್ಬ ಪಿಎಸ್‌ಐ ಜಯಶೀಲಾ, ಇನ್ನಿತರ ಸಿಬ್ಬಂದಿ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts