ಟಿಪ್ಪರ್ ಲಾರಿ ಸಂಚಾರ ನಿಷೇಧಕ್ಕೆ ಚಿಂತನೆ

ಚಿಕ್ಕಮಗಳೂರು: ನಗರ ವ್ಯಾಪ್ತಿಯಲ್ಲಿ ಎಗ್ಗಿಲ್ಲದೆ ಟಿಪ್ಪರ್ ಲಾರಿಗಳು ನುಗ್ಗುವುದರಿಂದ ನಾಗರಿಕರು ಸಾಕ್ಷಾತ್ ಯಮನ ಕಂಡಂತೆ ಬೆಚ್ಚಿ ಬೀಳುವಂತಾಗಿದೆ. ಇತ್ತೀಚೆಗೆ ಜೀವಹಾನಿಯೂ ಆಗಿರುವುದರಿಂದ ಜಿಲ್ಲಾಡಳಿತ ಟಿಪ್ಪರ್ ಲಾರಿ ಹಗಲು ವೇಳೆ ಸಂಚಾರ ನಿಷೇಧಿಸಲು ಚಿಂತನೆ ನಡೆಸಿದೆ.

ಅನೇಕ ಪೋಷಕರು ದ್ವಿಚಕ್ರ ಬಳಸುವ ಮಕ್ಕಳಿಗೆ ಮನೆಯಿಂದ ಹೊರಡುವ ಮುನ್ನ ಟಿಪ್ಪರ್ ಲಾರಿ ನೋಡಿಕೊಂಡು ಹುಷಾರಾಗಿ ಹೋಗು ಎಂದು ಒಮ್ಮೆ ಹೇಳಿ ಕಳುಹಿಸುತ್ತಿದ್ದಾರೆ.

ನಾಗರಿಕರಲ್ಲಿ ಭಯ ಮೂಡಿಸಿ ಪ್ರಾಣ ಹಾನಿಗೂ ಕಾರಣವಾಗುತ್ತಿರುವ ಸರಕು ಸಾಗಾಣೆ ಟಿಪ್ಪರ್ ಲಾರಿಗಳ ಸಂಚಾರ ನಗರದೊಳಗೆ ಹಗಲು ವೇಳೆ ನಿಷೇಧಿಸಬೇಕೆಂಬ ಒತ್ತಾಯ ನಾಗರಿಕರಿಂದ ಕೇಳಿಬರುತ್ತಿದೆ. ಇದೇ ಹಿನ್ನೆಲೆಯಲ್ಲಿ ಮೂರು ದಿನದ ಹಿಂದೆ ರಸ್ತೆ ಸುರಕ್ಷತಾ ಸಭೆ ನಡೆಸಿರುವ ಜಿಲ್ಲಾಡಳಿತ ಟಿಪ್ಪರ್ ಲಾರಿ ಹಗಲು ವೇಳೆ ಸಂಚಾರ ನಿಷೇಧ ಮಾಡುವ ಚಿಂತನೆ ನಡೆಸಿದೆ.

ಮಣ್ಣು, ಜಲ್ಲಿ, ಎಂ. ಸ್ಯಾಂಡ್ ತುಂಬಿಕೊಂಡು ಬೆಳಗ್ಗೆಯಿಂದ ಸಂಜೆ ತನಕ ನಗರದಲ್ಲಿ ಸದ್ದು ಮಾಡುತ್ತ ಸಂಚರಿಸುವ ಟಿಪ್ಪರ್​ಗಳಿಂದ ಬಚಾವಾಗಿ ಪ್ರಾಣ ಉಳಿಸಿಕೊಳ್ಳುವುದೇ ಸವಾಲಾಗಿದೆ. ಒಂದು ವರ್ಷದಿಂದ ನಗರದಲ್ಲಿ ಟಿಪ್ಪರ್ ಲಾರಿ ಹಾವಳಿ ಹೆಚ್ಚಾಗಿದೆ.

ಮಾ.15ರಂದು ಸ್ಕೂಟಿಗೆ ಹಿಂಬದಿಯಿಂದ ಟಿಪ್ಪರ್ ಲಾರಿ ಗುದ್ದಿದ್ದರಿಂದ ಲಕ್ಷ್ಮೀ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಟಿಪ್ಪರ್ ಲಾರಿ ಚಾಲಕನ ಅಜಾಗರೂಕ ಚಾಲನೆಯಿಂದ ನಿವೃತ್ತ ಎಎಸ್​ಐ ಕದರಪ್ಪ ಅವರ ಪತ್ನಿ ಪ್ರಾಣ ಕಳೆದುಕೊಳ್ಳಬೇಕಾಯಿತು. ಗಾಯಗೊಂಡು ಪಾರಾಗಿದ್ದ ಕದರಪ್ಪ ಇನ್ನೂ ಆ ಶಾಕ್​ನಿಂದ ಹೊರ ಬಂದಿಲ್ಲ.

ಕರ್ಕಶವಾದ ಹಾರನ್ ಮಾಡುತ್ತ ಸಂಚಾರ ನಿಯಮಗಳನ್ನು ಸ್ವಲ್ಪವೂ ಪಾಲನೆ ಮಾಡದಿರುವ ಟಿಪ್ಪರ್ ಲಾರಿ ಚಾಲಕರಿಗೆ ಕಡಿವಾಣ ಇಲ್ಲದಂತಾಗಿದೆ. ಕಲ್ಲು ಕ್ವಾರಿಗಳಿಂದ ಜಲ್ಲಿ, ಮರಳು ತುಂಬಿಕೊಂಡು ನಗರದ ವಿವಿಧ ಬಡಾವಣೆಯ ನಿರ್ಮಾಣ ಹಂತದ ಮನೆಗಳಿಗೆ ಹಾಗೂ ರಸ್ತೆ ಕಾಮಗಾರಿಗೆ ಸಾಗಣೆ ಇವು ಮಾಡುತ್ತವೆ. ನೈಸರ್ಗಿ ಮರಳು ನಿಯಂತ್ರಣವಾದ ಮೇಲೆ ಕಲ್ಲು ಕ್ವಾರಿ ಮರಳು, ಜಲ್ಲಿ ದೊಡ್ಡ ಲಾಬಿಯಾಗಿ ಪರಿವರ್ತನೆಯಾಗಿದೆ. ಇದರ ಹಿಂದೆ ಬಂಡವಾಳ ಶಾಹಿಗಳು, ರಾಜಕಾರಣಿಗಳು ಇರುವುದರಿಂದ ಟಿಪ್ಪರ್ ಚಾಲಕರು ರಸ್ತೆ ನಿಯಮ ಪಾಲನೆಗೆ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳುತ್ತಿಲ್ಲ.

ಟಿಪ್ಪರ್ ಆಟೋಟೊಪಕ್ಕೆ ಒಬ್ಬ ಮಹಿಳೆ ಬಲಿಯಾಗಿ ಒಂದು ಕುಟಂಬ ದುಃಖದಲ್ಲಿ ಮಡುವಿನಲ್ಲಿ ಮುಳುಗುವಂತೆ ಮಾಡಿದ್ದಾರೆ. ಇದೇ ರೀತಿ ಟಿಪ್ಪರ್ ಲಾರಿಗಳಿಂದ ಹಲವು ಬಾರಿ ಅಪಘಾತಗಳು ನಡೆದಿದ್ದು, ಕೈಕಾಲು ಮುರಿದುಕೊಂಡ ಅನೇಕರಿದ್ದಾರೆ. ಕಲ್ಲು ಕ್ವಾರಿ ಮಾಲೀಕರು ರಾಜಕಾರಣಿಗಳು, ಪ್ರಭಾವಿಗಳು ಆಗಿರುವುದರಿಂದ ಹಲವು ಅಪಘಾತಗಳು ಠಾಣೆ ಮೆಟ್ಟಿಲು ಏರುತ್ತಿಲ್ಲ. ಹೀಗಾಗಿ ಹಣಕ್ಕಾಗಿ ಸಾಮಾನ್ಯರ ಪ್ರಾಣಕ್ಕೂ ಬೆಲೆ ಕೊಡದೆ ಟಿಪ್ಪರ್ ಲಾರಿಗಳು ಈಗ ನಗರದಲ್ಲಿ ಸಾಕ್ಷತ್ ಯಮನಂತ ಕಾಣತೊಡಗಿವೆ.

ಮರಳು, ಜಲ್ಲಿ ಸಾಗಣೆ ಟಿಪ್ಪರ್ ಜತೆ ಸರಕು ಸಾಗಣೆ ಲಾರಿಗಳು ಹಲವು ಸಂಚರಿಸುತ್ತವೆ. ಆದರೆ ಅವುಗಳಿಂದ ನಾಗರಿಕರಿಗೆ ಅಂತಹ ತೊಂದರೆಯಾದ ಸಂದರ್ಭಗಳಿಲ್ಲ. ಅಗತ್ಯ ವಸ್ತು ಪೂರೈಕೆ ಮಾಡುವ ಈ ಲಾರಿಗಳನ್ನು ಹೊರತುಪಡಿಸಿ ನಗರದೊಳಗೆ ಟಿಪ್ಪರ್ ಲಾರಿಗಳನ್ನು ಬೆಳಗ್ಗೆ 6ರಿಂದ ರಾತ್ರಿ 10 ರವರೆಗೆ ನಿಷೇಧ ಮಾಡಬೇಕೆಂಬ ಪ್ರಬಲ ಬೇಡಿಕೆ ನಾಗರಿಕರದ್ದಾಗಿದೆ.

ರಾತ್ರಿ 10ರ ನಂತರ ಸಂಚರಿಸಲಿ: ಮರಳು, ಜಲ್ಲಿಯನ್ನು ರಾತ್ರಿಯೂ ಪೂರೈಕೆ ಮಾಡಬಹುದು. ಈ ಮಾದರಿಯನ್ನು ದಾವಣಗೆರೆ, ಶಿವಮೊಗ್ಗ, ಮಂಗಳೂರು, ಹಾಸನ ಜಿಲ್ಲೆಯಲ್ಲಿ ಈಗಾಗಲೆ ಜಾರಿ ಮಾಡಲಾಗಿದೆ. ಅದರಂತೆಯೇ ಜನರ ಪ್ರಾಣಕ್ಕೆ ಕುತ್ತು ತರುತ್ತಿರುವ ಟಿಪ್ಪರ್​ಗಳನ್ನು ಹಗಲು ವೇಳೆ ನಿಷೇಧ ಮಾಡಬೇಕೆಂಬ ಜನರ ಧ್ವನಿ ಹೆಚ್ಚಾಗ ತೊಡಗಿದೆ.

ನಗರ ಹೊರ ಭಾಗದಲ್ಲಿ ಬೈಪಾಸ್ ರಸ್ತೆ ಇದೆ. ಸರಕು ಸಾಗಣೆ ರಸ್ತೆಗಳಿಗೆ ಮಾತ್ರ ಹಗಲು ವೇಳೆ ಅವಕಾಶ ಮಾಡಬಹುದು. ಇದೇ ರೀತಿ ತರೀಕೆರೆ ಕಡೆ ಹೋಗುವ ಸರಕು ಲಾರಿಗಳಿಗೆ ಮಾತ್ರ ಕೆ.ಎಂ.ರಸ್ತೆಯಲ್ಲಿ ಅವಕಾಶ ಮಾಡಬಹುದು. ಮಿಕ್ಕಂತೆ ಹಗಲು ವೇಳೆ ಟಿಪ್ಪರ್ ಹಾಗೂ ಸರಕು ಸಾಗಣೆ ಇತರೆ ಲಾರಿಗಳನ್ನು ಐಜಿ ರಸ್ತೆ, ಎಂ.ಜಿ.ರಸ್ತೆ, ಮಾರುಕಟ್ಟೆ ರಸ್ತೆ, ಕೆ.ಎಂ.ರಸ್ತೆ, ಮೂಡಿಗೆರೆ ರಸ್ತೆ, ರಾಮನಹಳ್ಳಿ, ಕೆಂಪನಹಳ್ಳಿ ರಸ್ತೆ, ಹಾಸನ ರಸ್ತೆ ಸೇರಿ ನಗರ ವ್ಯಾಪ್ತಿಯಲ್ಲಿ ನಿಷೇಧ ಮಾಡಬೇಕೆಂಬ ಬೇಡಿಕೆ ಇದೆ.