ದೇಗುಲಗಳಿಂದ ಮಾನಸಿಕ ನೆಮ್ಮದಿ

ಸಿದ್ದಾಪುರ: ಪ್ರತಿ ಮನೆಯಲ್ಲಿ ದೇವರಕೋಣೆ ಇರುವ ಹಾಗೆ ಪ್ರತಿ ಊರಿನಲ್ಲಿ ದೇವಸ್ಥಾನ ಇರಬೇಕು. ಇದರಿಂದ ಮಾನಸಿಕ ನೆಮ್ಮದಿ, ಊರಿನಲ್ಲಿ ಸಂಘಟನೆಯ ಶಕ್ತಿ ಬೆಳೆಯುತ್ತದೆ ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ವಾಜಗದ್ದೆಯಲ್ಲಿ ನೂತನವಾಗಿ ನಿರ್ವಣಗೊಂಡ ದೇವಸ್ಥಾನದಲ್ಲಿ ದುರ್ಗಾವಿನಾಯಕ ದೇವರನ್ನು ಪುನಃ ಪ್ರತಿಷ್ಠಾಪಿಸಿ ಗುರುಪಾದುಕಾ ಪೂಜೆ ಮತ್ತು ಶ್ರೀಗುರು ಭಿಕ್ಷಾ ಸೇವೆ ಸ್ವೀಕರಿಸಿ ಅವರು ಶುಕ್ರವಾರ ಆಶೀರ್ವಚನ ನೀಡಿದರು. ದೇವಸ್ಥಾನಗಳಿರುವುದರಿಂದ ಮನುಷ್ಯನ ಮನಸ್ಸು ಮೃದುವಾಗುತ್ತದೆ. ನೂರಾರು ಮಾನಸಿಕ ತಜ್ಞರಿಂದಲೂ ಸಿಗದ ನೆಮ್ಮದಿಯನ್ನು ದೇವಸ್ಥಾನ ನೀಡುತ್ತದೆ. ದೇವಸ್ಥಾನದಲ್ಲಿರುವುದು ಕೇವಲ ಕಲ್ಲು ಅಥವಾ ವಿಗ್ರಹಗಳಲ್ಲ. ಜೀವ ಚೈತನ್ಯದ ಮೂರ್ತಿ ಎಂದರು.

ಶ್ರೀಗಳ ಮೆಚ್ಚುಗೆ:
ವಾಜಗದ್ದೆಯವರು ಮಠದ ಸೇವೆ ಮಾಡಿದ್ದಾರೆ. ಸೇವೆ ಮಾಡಿದ ಫಲದಿಂದ ಎಲ್ಲರ ಶ್ರಮದಿಂದ ಇಂದು ಇಲ್ಲಿ ಉತ್ತಮ ದೇವಾಲಯ ನಿರ್ವಣಗೊಂಡಿದೆ. ಮಾತೃ ಸ್ವರೂಪಿಯಾಗಿರುವ ದುರ್ಗೆ ಹಾಗೂ ವಿಘ್ನನಿವಾರಕ ವಿನಾಯಕ ದೇವರು ಎರಡೂ ಮಹಾಶಕ್ತಿಗಳಾಗಿದ್ದಾರೆ. ಮುಂದಿನ ದಿನದಲ್ಲಿ ವಾಜಗದ್ದೆ ಜೀವಕಳೆಯಿಂದ ತುಂಬಿಕೊಳ್ಳಲಿದೆ. ವಾಜಗದ್ದೆ ಭಾಗದ ಸಂಘಟನೆ, ಒಗ್ಗಟ್ಟು, ಸಮಜಾಸೇವೆ ಎಲ್ಲರಿಗೂ ಮಾದರಿ ಆಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಭಾನ್ಕುಳಿ ಮಠದಲ್ಲಿರುವ ಗೋಸ್ವರ್ಗಕ್ಕೆ ಬಂದು ಸುರಭಿ ಸೇವಕರಾಗಿ. ಗೋಸ್ವರ್ಗದ ಪರಿಸರವನ್ನು ಆಸ್ವಾದಿಸಿ ಎಂದರು.

ಇದಕ್ಕೂ ಪೂರ್ವದಲ್ಲಿ ಶ್ರೀಗಳು ದೇವಸ್ಥಾನದ ನಾಮಫಲಕ ಅನಾವರಣಗೊಳಿಸಿದರು.

ಅರ್ಚಕ ಶಿವರಾಮ ಗಣಪತಿ ಜೋಶಿ ವಾಜಗದ್ದೆ ಪೌರೋಹಿತ್ಯದಲ್ಲಿ ಪ್ರತಿಷ್ಠಾ ಹೋಮ, ಸಪ್ತಶತೀ ಪಾರಾಯಣ, ದುರ್ಗಾಸೂಕ್ತ ಪಾರಾಯಣ, ಅಥರ್ವಶೀರ್ಷ ಪಾರಾಯಣ ಹಾಗೂ ನಾವಕ್ಷರಿ ಜಪ ನಡೆದವು. ವೇ.ಮೂ. ಸಾಂಬ ಗಣಪತಿ ಹಿರೇಗಂಗೆ ಷಡಕ್ಷರಿ ಗೋಕರ್ಣ ನೇತೃತ್ವ ವಹಿಸಿದ್ದರು. 15ಕ್ಕೂ ಹೆಚ್ಚು ಋತ್ವಿಜರು ಧಾರ್ವಿುಕ ಕಾರ್ಯಕ್ರಮ ನಡೆಸಿಕೊಟ್ಟರು.

ಮೊಕ್ತೇಸರ ಪಿ.ವಿ. ಹೆಗಡೆ ಹೊಸಗದ್ದೆ ಪ್ರಾಸ್ತಾವಿಕ ಮಾತನಾಡಿದರು. ದೇವಸ್ಥಾನದ ಕಾರ್ಯದರ್ಶಿ ಶ್ರೀಪಾದ ಹೆಗಡೆ ಕಲ್ಮನೆ, ಕಟ್ಟಡ ಸಮಿತಿ ಅಧ್ಯಕ್ಷ ರಾಘವೇಂದ್ರ ಹೆಗಡೆ ವಾಜಗದ್ದೆ, ಯುವಕ ಸಂಘದ ಅಧ್ಯಕ್ಷ ಗಣಪತಿ ಹೆಗಡೆ ಸುಳಗಾರ, ದುರ್ಗಾವಿನಾಯಕ ಯಕ್ಷಮಿತ್ರ ಬಳಗದ ಗಣೇಶ ಹೆಗಡೆ ಮತ್ತಿಗಾರ, ಪರಮೇಶ್ವರ ಹೆಗಡೆ ಕಲ್ಮನೆ, ಊರಿನ ಹಿರಿಯರಾದ ಸುಬ್ರಾಯ ಹೆಗಡೆ ಮತ್ತಿಗಾರ, ಗೋಪಾಲ ಹೆಗಡೆ ವಾಜಗದ್ದೆ, ಸೀತಾರಾಮ ಹೆಗಡೆ ಸುಳಗಾರ, ಗೋಪಾಲ ಹೆಗಡೆ ಹುಲಿಮನೆ, ರಾಘವ ಹೆಗಡೆ ಕಲ್ಮನೆ, ಶ್ರೀಧರ ಹೆಗಡೆ ವಾಟೇಹಕ್ಲು, ಕಟ್ಟಡ ನಿರ್ವಹಣೆಯ ಪ್ರಮುಖರಾದ ರವಿ ಗೋಡೆಮನೆ, ಜಗದೀಶ ಅಬ್ಬಿಗದ್ದೆ, ಪ್ರವೀಣ ಹೊಸಗದ್ದೆ, ಇತರರಿದ್ದರು. ದೇವಸ್ಥಾನ ಆಡಳಿತ ಮಂಡಳಿ ಸದಸ್ಯರು, ಕಟ್ಟಡ ಸಮಿತಿ ಸದಸ್ಯರು, ವಿವಿಧ ಮಂಡಳಗಳ ಕಾರ್ಯಕರ್ತರು, ಗ್ರಾಮಸ್ಥರು, ಶಿಷ್ಯರು ಉಪಸ್ಥಿತರಿದ್ದರು.

ಇಂದಿನ ಕಾರ್ಯಕ್ರಮ
ಬೆಳಗ್ಗೆ 10ರಿಂದ ಗಣಪತಿ ಪೂಜೆ, ಪುಣ್ಯಾಹ, ಶ್ರೀ ಗಣಪತಿ ಅಥರ್ವ ಶೀರ್ಷಹವನ, ದುರ್ಗಾಸೂಕ್ತ ಹವನ, ಚಂಡೀಹವನ, ಕುಮಾರಿಕಾ ಸುವಾಸಿನಿಯರ ಪೂಜೆ, ಮಧ್ಯಾಹ್ನ 12ಕ್ಕೆ ಪೂರ್ಣಾಹುತಿ, ಮಹಾಮಂಗಳಾರತಿ, ಪ್ರಸಾದ ಭೋಜನ, ಬ್ರಾಹ್ಮಣ ಮಂತ್ರಾಕ್ಷತೆ. ಸಂಜೆ 6ಕ್ಕೆ ಸಂಗೀತ ಕಾರ್ಯಕ್ರಮ. ಆರಾಧನಾ ಭಂಡಾರಿಕೇರಿ ಅವರ ಗಾಯನಕ್ಕೆ ಲಕ್ಷ್ಮೀಶರಾವ್ ಕಲ್ಗುಂಡಿಕೊಪ್ಪ ತಬಲಾ ಸಾಥ್ ನೀಡಲಿದ್ದಾರೆ. ವಾಜಗದ್ದೆಯ ಸಂಗೀತ ಶಾಲಾ ಶಿಕ್ಷಕಿ ರೇಖಾ ಹೆಗಡೆ ಹೊಂಡಗಾಶ್ಗಿ ಮತ್ತು ವಿದ್ಯಾರ್ಥಿಗಳಿಂದ ದೀಪೋತ್ಸವ. ರಾತ್ರಿ 10ರಿಂದ ದುರ್ಗಾವಿನಾಯಕ ಯಕ್ಷಮಿತ್ರ ಬಳಗ ಹಾಗೂ ಅತಿಥಿ ಕಲಾವಿದರಿಂದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.