ಶಿವಮೊಗ್ಗ: ಸಂಗೀತದಿಂದ ಮನಸ್ಸಿನ ಏಕಾಗ್ರತೆ ಹೆಚ್ಚುತ್ತದೆ. ಅಲ್ಲದೆ ಅನೇಕ ಕಾಯಿಲೆಗಳನ್ನು ಹೋಗಲಾಡಿಸುವ ಶಕ್ತಿ ಸಂಗೀತಕ್ಕಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಅಬಸೆ ದಿನೇಶ್ಕುಮಾರ್ ಜೋಶಿ ಹೇಳಿದರು.
ತಾಲೂಕಿನ ಹೊಸಹಳ್ಳಿ ಗ್ರಾಮದ ಗಮಕ ಭವನದಲ್ಲಿ ಸಂಕೇತಿ ಸಂಗೀತ ಸಭಾದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಏರ್ಪಡಿಸಿದ್ದ ಸಂಗೀತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಿಂದೆ ರಾಜ ಮಹಾರಾಜರ ಕಾಲದಲ್ಲಿ ಸಂಗೀತ, ಸಾಹಿತ್ಯ, ಕಲೆಗೆ ಸಾಕಷ್ಟು ಪ್ರೋತ್ಸಾಹ ದೊರಕುತ್ತಿತ್ತು. ಅವುಗಳಿಗೆ ರಾಜಮಹಾರಾಜರು ಆಶ್ರಯ ನೀಡಿ ಬೆಳೆಸುತ್ತಿದ್ದರು. ಇಂದು ಪ್ರಜೆಗಳೆ ಪ್ರಭುಗಳಾಗಿದ್ದು ಸಂಗೀತ, ಸಾಹಿತ್ಯ, ಕಲೆ ಇವುಗಳನ್ನು ಉಳಿಸಿ ಬೆಳೆಸುವ ಜನರ ಮೇಲಿದೆ ಎಂದರು.
ಇಂತಹ ಒಂದು ಅದ್ಭುತ ಶಕ್ತಿ ಸಂಗೀತಕ್ಕಿದೆ. ಜತೆಗೆ ಅನೇಕ ಕಾಯಿಲೆಗಳನ್ನು ಹೋಗಲಾಡಿಸುವ ಶಕ್ತಿ ಇದೆ ಎಂದು ವೇದ ಉಪನಿಷತ್ತುಗಳಲ್ಲಿ ತಿಳಿಸಲಾಗಿದೆ. ಹೀಗಾಗಿ ಸಂಗೀತವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು. ಸಮಾಜಕ್ಕೆ ಪೂರಕವಾದಂತಹ ಕೆಲಸಗಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು. ಸಂಗೀತ, ಸಾಹಿತ್ಯ, ಕಲೆ ಮುಂತಾದವುಗಳನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಸಂಕೇತಿ ಸಂಗೀತ ಸಭಾ ಅಧ್ಯಕ್ಷ ಹೊಸಳ್ಳಿ ವೆಂಕಟರಾಮ್ ಅಧ್ಯಕ್ಷತೆ ವಹಿಸಿದ್ದರು. ವಿದ್ವಾನ್ ಅನಂತ ಪದ್ಮನಾಭ, ವಿದ್ವಾನ್ ಅನಂತ್, ವಿದ್ವಾನ್ ನಾಗೇಂದ್ರ ಪ್ರಕಾಶ್, ಎಚ್.ಕೆ. ಕೇಶವಮೂರ್ತಿ ಹಾಗೂ ಸ್ಥಳೀಯರು ಇದ್ದರು.