ರಾಜೇಂದ್ರ ಶಿಂಗನಮನೆ ಶಿರಸಿ
ಲಾಕ್ಡೌನ್ ಸಂದರ್ಭದಲ್ಲಿ ನಷ್ಟಕ್ಕೆ ತುತ್ತಾದ ಹೂವು, ಹಣ್ಣು ಬೆಳೆಗಳ ಕುರಿತು ಕಂದಾಯ ಸಮೀಕ್ಷೆಯಲ್ಲಿ ಬಿಟ್ಟುಹೋಗಿರುವ ಬೆಳೆಗಾರರಿಗೆ ಸರ್ಕಾರ ಘೊಷಿಸಿದ ಪರಿಹಾರ ಮೊತ್ತ ಕೈಸೇರುವ ಲಕ್ಷಣ ಕಾಣುತ್ತಿಲ್ಲ. ಇದು ದೊಡ್ಡ ಪ್ರಮಾಣದಲ್ಲಿ ನಷ್ಟಕ್ಕೊಳಗಾದ ಬಾಳೆ ಹಾಗೂ ಕಲ್ಲಂಗಡಿ ಬೆಳೆಗಾರರ ನಿದ್ದೆಗೆಡಿಸಿದೆ.
ಕಂದಾಯ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಉಲ್ಲೇಖಿಸಿದ ಬೆಳೆ ಮಾತ್ರ ಪರಿಹಾರಕ್ಕೆ ಅರ್ಹವಾಗಿದೆ. ಸಮೀಕ್ಷೆಯಲ್ಲಿ ಬಿಟ್ಟುಹೋದ ಬೆಳೆಯನ್ನು ಹೆಚ್ಚುವರಿಯಾಗಿ ಸೇರಿಸಲು ಅವಕಾಶ ಕಲ್ಪಿಸಲಾಗಿದೆ. ಹೀಗೆ ಕೈತಪ್ಪಿದ ಬೆಳೆಗಾರರು ಪರಿಹಾರ ಕೋರಿ ಅರ್ಜಿ ಸಲ್ಲಿಸುತ್ತಿದ್ದಾರೆ. ತೋಟಗಾರಿಕೆ ಇಲಾಖೆಗೆ ಈವರೆಗೆ ಒಟ್ಟು 1,077 ಅರ್ಜಿಗಳು ಸಲ್ಲಿಕೆಯಾಗಿವೆ. ಇವುಗಳಲ್ಲಿ 693 ಅರ್ಜಿಗಳು ಸಮೀಕ್ಷೆಯಲ್ಲಿ ಕೈತಪ್ಪಿದ್ದ ಬೆಳೆಗಾರರದ್ದಾಗಿವೆ.
ಸಮೀಕ್ಷೆ ವ್ಯಾಪ್ತಿಯಿಂದ ಹೊರಗೆ: ಯುಗಾದಿ ಹಬ್ಬಕ್ಕೆ ಹೂವಿಗೆ ಉತ್ತಮ ಬೆಲೆ ಬರುತ್ತದೆ ಎಂಬ ಕಾರಣಕ್ಕೆ ಬಹುತೇಕ ರೈತರು ಪುಷ್ಪ ಕೃಷಿಗೆ ಒಲವು ತೋರಿದ್ದರು. ಸೇವಂತಿ, ಗುಲಾಬಿ, ಮಲ್ಲಿಗೆ ಸೇರಿ ತರಹೇವಾರಿ ಹೂವು ಬೆಳೆದಿದ್ದರು. ಜತೆಗೆ, ಹಣ್ಣುಗಳಿಗೂ ಉತ್ತಮ ಮಾರುಕಟ್ಟೆ ಸಿಗುತ್ತದೆ ಎಂಬ ನಿರೀಕ್ಷೆಯಿಂದ ಹಲವು ರೈತರು ಹಣ್ಣು ಬೆಳೆದಿದ್ದರು.
ಕಲ್ಲಂಗಡಿ, ಅನಾನಸ್, ಪಪ್ಪಾಯ, ಬಾಳೆ ಹಣ್ಣು ಜಿಲ್ಲೆಯಲ್ಲಿ ಯಥೇಚ್ಛವಾಗಿ ಬೆಳೆದಿದ್ದವು. ಮಾರುಕಟ್ಟೆ ಸೇರಬೇಕಾದ ಹೂ, ಹಣ್ಣುಗಳು ಲಾಕ್ಡೌನ್ ಕಾರಣದಿಂದಾಗಿ ಜಮೀನಿನಲ್ಲಿ ಕೊಳೆತು ಹೋಗುವಂತಾಯಿತು. ರಥೋತ್ಸವ, ಮದುವೆ ಮೊದಲಾದ ಶುಭ ಸಮಾರಂಭ ಸ್ಥಗಿತಗೊಂಡಿದ್ದರಿಂದ ಹಣ್ಣು ಹಾಗೂ ಪುಷ್ಪ ಕೃಷಿ ಅವಲಂಬಿಸಿದ ರೈತರು ತೊಂದರೆ ಅನುಭವಿಸಿದರು. ನಂತರ ಹೂವು ಬೆಳೆ ನಷ್ಟಕ್ಕೆ ಹೆಕ್ಟೇರ್ಗೆ 25 ಸಾವಿರ ರೂ., ತರಕಾರಿ ಮತ್ತು ಹಣ್ಣು ಬೆಳೆಗೆ ಹೆಕ್ಟೇರ್ಗೆ 15 ಸಾವಿರ ರೂ. ಪರಿಹಾರವನ್ನು ಸರ್ಕಾರ ಘೊಷಿಸಿದೆ. ಕಂದಾಯ ಇಲಾಖೆ ಪ್ರತಿ ವರ್ಷ ಬೆಳೆ ಸಮೀಕ್ಷೆ ನಡೆಸುತ್ತದೆ. ಹಿಂಗಾರು ಹಂಗಾಮಿನಲ್ಲಿ ನಡೆದ ಬೆಳೆ ಸಮೀಕ್ಷೆಯಲ್ಲಿ ನಮೂದಾದ ಹೂವು ಮತ್ತು ಹಣ್ಣಿನ ಬೆಳೆಗೆ ಪರಿಹಾರ ಸುಲಭವಾಗಿ ಸಿಗುತ್ತಿದೆ. ಆದರೆ, ಸಮೀಕ್ಷೆ ವ್ಯಾಪ್ತಿಯ ಹೊರಗೆ ಇರುವ ಬೆಳೆಗಾರರ ಸಂಖ್ಯೆಯೇ ಹೆಚ್ಚಾಗಿದೆ. ಇಂತಹ ರೈತರ ಮಾಹಿತಿ ಸಮೀಕ್ಷೆಯಲ್ಲಿ ಉಲ್ಲೇಖವಾಗಿಲ್ಲ. ಇದರಿಂದ ರೈತರು ತೊಂದರೆ ಅನುಭವಿಸುವಂತಾಗಿದೆ.
ಪರಿಹಾರಕ್ಕೆ ವಿಳಂಬ: ಕಂದಾಯ ಸಮೀಕ್ಷೆಯಲ್ಲಿ ನಮೂದಾದ ಬಾಳೆ ಮತ್ತು ಕಲ್ಲಂಗಡಿ ಬೆಳೆಗಾರರ ಜತೆಗೆ ಕೈತಪ್ಪಿದ ಬೆಳೆಗಾರರ ಜಮೀನಿಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ತೆರಳಿ ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ನೀಡಬೇಕಿದೆ. ವರದಿ ನೀಡಿದ ನಂತರ ಕಂದಾಯ ಸಮೀಕ್ಷೆಯಲ್ಲಿರುವ ಬೆಳೆಗಾರರಿಗೆ ಪರಿಹಾರ ಧನ ತಕ್ಷಣ ಸಿಕ್ಕರೆ, ಕೈತಪ್ಪಿದ ಬೆಳೆಗಾರರ ಪಟ್ಟಿಯನ್ನು ಪರಿಶೀಲಿಸಿ ಹಣ ಬಿಡುಗಡೆ ಮಾಡಲು ವಿಳಂಬವಾಗಲಿದೆ ಎಂಬುದು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಅಭಿಪ್ರಾಯವಾಗಿದೆ.
ತೋಟಗಳಲ್ಲಿ ಅಂತರ ಬೆಳೆಯಾಗಿ ಹೂವು ಹಾಗೂ ಹಣ್ಣು ಬೆಳೆದ ರೈತರಿಗೆ ಪರಿಹಾರ ಸಿಗುವುದು ಕಷ್ಟ. ಜಿಲ್ಲೆಯ ಹಲವೆಡೆ ಅಡಕೆ ಹಾಗೂ ತೆಂಗಿನ ತೋಟದಲ್ಲಿ ಹೂವು ಮತ್ತು ಹಣ್ಣು ಬೆಳೆಯುವ ಪದ್ಧತಿ ಇದೆ. ಸಮೀಕ್ಷೆಯಲ್ಲಿ ದೀರ್ಘಾವಧಿಯ ಬೆಳೆ ಮಾತ್ರ ಉಲ್ಲೇಖವಾಗಿರುತ್ತದೆ. ಹೀಗಾಗಿ, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಕಟಾವಿಗೆ ಬಂದ ಬೆಳೆಗೆ ಮಾತ್ರ ಪರಿಹಾರ ಸಿಗಲಿದೆ.
| ಸತೀಶ ಹೆಗಡೆ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ
ಕಂದಾಯ ಸಮೀಕ್ಷೆಯಲ್ಲಿ ಬಾಳೆ, ಕಲ್ಲಂಗಡಿ ಬೆಳೆಗಾರರನ್ನು ಕೈಬಿಡಲಾಗಿತ್ತು. ಪ್ರಸ್ತುತ ಸರ್ಕಾರದ ಆದೇಶದನ್ವಯ ಕೈಬಿಟ್ಟ ಬೆಳೆಗಾರರು ಅರ್ಜಿ ಸಲ್ಲಿಸುತ್ತಿದ್ದಾರೆ. ಸಾಕಷ್ಟು ಬೆಳೆಗಾರರು ನಷ್ಟ ಹಾಗೂ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಸಮೀಕ್ಷೆಯಲ್ಲಿದ್ದ ಬೆಳೆಗಾರರಂತೆ ಕೈಬಿಟ್ಟ ಬೆಳೆಗಾರರಿಗೂ ಸರ್ಕಾರ ತಕ್ಷಣ ಪರಿಹಾರ ಮೊತ್ತ ನೀಡುವ ಕಾರ್ಯ ಮಾಡಬೇಕು.
| ಜಗದೀಶ ಗೌಡ ಬಾಳೆ ಬೆಳೆಗಾರ